
ಕೊರಟಗೆರೆ: ಬಡಜನರ ಅನುಕೂಲಕ್ಕಾಗಿ ಕಾಂಗ್ರೆಸ್ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದು, ಇದರಿಂದ ಗ್ರಾಮೀಣ ಭಾಗದ ಲಕ್ಷಾಂತರ ಕುಟುಂಬಗಳಿಗೆ ಅನುಕೂಲ ಸಿಕ್ಕಿದೆ ಎಂದು ಗೃಹಸಚಿವ ಜಿ.ಪರಮೇಶ್ವರ ಅಭಿಪ್ರಾಯಪಟ್ಟರು.
ತಾಲ್ಲೂಕಿನ ತೀತಾ ಗ್ರಾಮದಲ್ಲಿ ತುಮುಲ್ ಸಂಘದ ನೂತನ ಬಿಎಂಸಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ರೇಷ್ಮೆ ಮತ್ತು ಹಾಲು ಉತ್ಪಾದನೆ ರೈತರ ಆರ್ಥಿಕ ಅಭಿವೃದ್ಧಿಗೆ ನೆರವಾಗಿದೆ. ಬರಗಾಲದಲ್ಲೂ ಇದು ರೈತರ ಕೈಹಿಡಿದಿದೆ. ಜಿಲ್ಲೆಯಲ್ಲಿ 10 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಹಾಲು ಉತ್ಪಾದನೆ ಉತ್ತೇಜಿಸಲು ಸರ್ಕಾರ ಪ್ರತೀ ಲೀಟರ್‌ಗೆ ₹5 ನೀಡುತ್ತಿದೆ ಎಂದರು.
ತುಮುಲ್ ಅಧ್ಯಕ್ಷ ಹಾಗೂ ಶಾಸಕ ಎಚ್.ವಿ.ವೆಂಕಟೇಶ್ ಮಾತನಾಡಿ, ‘ನಾನು ಅಧ್ಯಕ್ಷನಾದ ಬಳಿಕ ₹100 ಕೋಟಿ ಲಾಭ ಬಂತು. ಅದರಲ್ಲಿ ರೈತರಿಗೆ ₹2 ರೂ ಪ್ರೋತ್ಸಾಹ ಧನ ನೀಡುತ್ತಿದ್ದೇವೆ. 15 ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೇರಿಯನ್ನು ಶೀಘ್ರದಲ್ಲೆ ಜಿ.ಪರಮೇಶ್ವರ ಅವರಿಂದ ಉದ್ಘಾಟಿಸಲಾಗುವುದು ಎಂದರು.
ಎಲೆರಾಂಪುರ ಕುಂಚಿಟಿಗರ ಮಠದ ಹನುಮಂತನಾಥ ಸ್ವಾಮೀಜಿ ಮಾತನಾಡಿ, ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಜಿ.ಪರಮೇಶ್ವರ ಮುಖ್ಯಮಂತ್ರಿಯಾಗಬೇಕು ಎಂದು ಈಗಾಗಲೇ ಅನೇಕ ಮಠಾಧೀಶರು ಒತ್ತಾಯ ಮಾಡಿದ್ದೇವೆ. ಈ ಬಾರಿ ಮುಖ್ಯಮಂತ್ರಿ ಸ್ಥಾನ ಕೈ ತಪ್ಪಿದರೆ ಜಿಲ್ಲೆಯವರು ಮುಖ್ಯಮಂತ್ರಿ ಆಗುವುದು ಕನಸಿನ ಮಾತಾಗುತ್ತದೆ. ಪರಮೇಶ್ವರ ಮುಖ್ಯಮಂತ್ರಿಯಾದರೆ ಜಿಲ್ಲೆ ಮತ್ತೊಂದು ಮೈಲಿಗಲ್ಲಾಗಲಿದೆ ಎಂದರು.
ತಾಲ್ಲೂಕಿನ ತೀತಾ, ಬೈರಗೊಂಡ್ಲು, ಪುಟ್ಟಸಂದ್ರ, ಅಗ್ರಹಾರ ಗ್ರಾಮದಲ್ಲಿ ₹80 ಲಕ್ಷ ವೆಚ್ಚದ ನಾಲ್ಕು ಹಾಲು ಶೇಖರಣಾ ಘಟಕಗಳನ್ನು ಉದ್ಘಾಟಿಸಲಾಯಿತು.
ತುಮುಲ್ ನಿರ್ದೇಶಕ ಸಿದ್ದಗಂಗಯ್ಯ, ಜಿಲ್ಲಾಧಿಕಾರಿ ಶುಭಕಲ್ಯಾಣ್, ಎಸ್‌ಪಿ ಕೆ.ವಿ.ಅಶೋಕ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಶೀಲ್ದಾರ್ ಕೆ.ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಡಿಕಲ್ ಅಶ್ವತ್ಥ್, ಅರಕೆರೆ ಶಂಕರ್, ಮಹಿಳಾ ಅಧ್ಯಕ್ಷೆ ಜಯಮ್ಮ, ಯುವ ಅಧ್ಯಕ್ಷ ಬೈರೇಶ್, ಎಚ್.ಕೆ.ಮಹಾಲಿಂಗಪ್ಪ, ವಾಲೆ ಚಂದ್ರಯ್ಯ, ಎಲ್.ರಾಜಣ್ಣ, ಎಂ.ಡಿ.ಶ್ರೀನಿವಾಸನ್, ವಿದ್ಯಾನಂದ, ಸುಮಂಗಲ, ಪ್ರಭಾಕರ್, ವೆಂಕಟೇಶ್, ಬಸವರಾಜು, ಪಾಲಾಕ್ಷ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.