ADVERTISEMENT

ಭಿನ್ನಾಭಿಪ್ರಾಯಕ್ಕೆ ತೆರೆ ಎಳೆದ ಸದಸ್ಯರು

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2021, 3:51 IST
Last Updated 7 ಮಾರ್ಚ್ 2021, 3:51 IST
ತಾಲ್ಲೂಕಿನ ಜೆಟ್ಟಿ ಅಗ್ರಹಾರ ಗ್ರಾಮ ಪಂಚಾಯಿತಿಯ ನೂತನ ಸದಸ್ಯರು ಕಮಲಮ್ಮ ಅವರಿಗೆ ಸೀಮಂತ ಮಾಡಿದರು
ತಾಲ್ಲೂಕಿನ ಜೆಟ್ಟಿ ಅಗ್ರಹಾರ ಗ್ರಾಮ ಪಂಚಾಯಿತಿಯ ನೂತನ ಸದಸ್ಯರು ಕಮಲಮ್ಮ ಅವರಿಗೆ ಸೀಮಂತ ಮಾಡಿದರು   

ಕೊರಟಗೆರೆ: ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಗ್ರಾಮಗಳ ಅಭಿವೃದ್ಧಿಗೆ ಸದಸ್ಯರೊಂದಿಗೆ ಒಗ್ಗೂಡಿ ಶ್ರಮಿಸುವುದಾಗಿ ಜಟ್ಟಿಅಗ್ರಹಾರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ ತಿಳಿಸಿದರು.

ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಸಣ್ಣಪುಟ್ಟ ಭಿನ್ನಾಭಿಪ್ರಾಯದಿಂದಾಗಿ ಮಾರ್ಚ್ 2ರಂದು ನಡೆಯಬೇಕಿದ್ದ ಮೊದಲ ಸಾಮಾನ್ಯ ಸಭೆಗೆ 11 ಸದಸ್ಯರು ಗೈರಾಗಿದ್ದರು. ಇದರಿಂದಾಗಿ ಸಭೆ ಮುಂದೂಡಲಾಗಿತ್ತು. ಉಪಾಧ್ಯಕ್ಷರು ಸೇರಿದಂತೆ ಎಲ್ಲ ಸದಸ್ಯರೊಂದಿಗೆ ಚರ್ಚೆ ಮಾಡಿ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಲಾಗಿದೆ. ಶುಕ್ರವಾರ ಸಾಮಾನ್ಯ ಸಭೆ ಅಚ್ಚುಕಟ್ಟಾಗಿ ನಡೆದಿದ್ದು, ಗ್ರಾಮಗಳ ಸಮಸ್ಯೆ ಬಗ್ಗೆ ಎಲ್ಲರೂ ಮುಕ್ತವಾಗಿ ಚರ್ಚಿಸಿದ್ದಾರೆ’ ಎಂದರು.

ಉಪಾಧ್ಯಕ್ಷೆ ಸಿದ್ದಗಂಗಮ್ಮ ಮಾತನಾಡಿ, ಪಂಚಾಯಿತಿಯಲ್ಲಿ ಕೆಲವು ಗೊಂದಲಗಳಿದ್ದ ಕಾರಣ ಸಭೆ ಮುಂದೂಡಲಾಗಿತ್ತು. ಶುಕ್ರವಾರದ ಸಭೆಯಲ್ಲಿ ಗೊಂದಲಗಳಿಗೆ ತೆರೆ ಎಳೆಯಲಾಗಿದೆ ಎಂದರು.

ADVERTISEMENT

ಪಿಡಿಒ ಮಂಜುಳ ಮಾತನಾಡಿ, ಕೋವಿಡ್ ಕಾರಣದಿಂದಾಗಿ ಪಂಚಾಯಿತಿಗೆ ಬರಬೇಕಾಗಿದ್ದ ಕಂದಾಯ ವಸೂಲಾಗದ ಕಾರಣದಿಂದಾಗಿ ಕೆಲವು ಸಮಸ್ಯೆಗಳು ಬಗೆಹರಿಯದೇ ಹಾಗೇ ಉಳಿದಿವೆ. ನೂತನ ಸದಸ್ಯರು ಪದಗ್ರಹಣವಾಗಿ ಕೇವಲ ಒಂದು ತಿಂಗಳಾಗಿದ್ದು, ಹಂತಹಂತವಾಗಿ ಸಮಸ್ಯೆಗಳನ್ನು ಬಗೆಹರಿಸಲು ಕ್ರಮವಹಿಸಲಾಗುವುದು ಎಂದರು.

ಸದಸ್ಯ ಸಿ.ಡಿ.ಪ್ರಭಾಕರ್ ಮಾತನಾಡಿ, ಸದಸ್ಯರು ಮತ್ತು ಅಭಿವೃದ್ಧಿ ಅಧಿಕಾರಿಗಳ ಮಧ್ಯೆ ಸಣ್ಣ ಗೊಂದಲ ಉಂಟಾದ ಕಾರಣ ಸಮಸ್ಯೆ ಉಂಟಾಗಿತ್ತು. ಎಲ್ಲರೂ ಒಟ್ಟುಗೂಡಿ ಬಗೆಹರಿಸಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಜೆಟ್ಟಿಅಗ್ರಹಾರ ಪಂಚಾಯಿತಿಯನ್ನು ಮಾದರಿ ಪಂಚಾಯಿತಿ ಮಾಡಲು ಎಲ್ಲರೂ ಒಟ್ಟಾಗಿ ಶ್ರಮಿಸುತ್ತೇವೆ ಎಂದರು.

ಅಗ್ರಹಾರ, ಥರಟಿ ಮಧ್ಯೆ ಇರುವ ಪೆಟ್ರೋಲ್ ಬಂಕ್‌ಗೆ ಸಾರ್ವಜನಿಕರ ಕುಡಿಯುವ ನೀರಿನ ಸಂಪರ್ಕ ನೀಡಲಾಗಿದೆ. ಇದರಿಂದಾಗಿ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ಖಾಸಗಿ ಮಾಲೀಕತ್ವದ ಬಂಕ್‌ಗೆ ಪೈಪ್‌ಲೈನ್‌ನ್ನು ಗ್ರಾಮ ಪಂಚಾಯಿತಿ ನಿಧಿಯಿಂದ ಮಾಡಿಕೊಟ್ಟಿದ್ದು, ಕೂಡಲೇ ಇದನ್ನು ಸ್ಥಗಿತಗೊಳಿಸಬೇಕು ಎಂದು ಸಾರ್ವಜನಿಕರು ಸಭೆಯಲ್ಲಿ ಒತ್ತಾಯಿಸಿದರು.

ಸದಸ್ಯರಾದ ನರಸಿಂಹಮೂರ್ತಿ ರುದ್ರಮ್ಮ, ಸರಸ್ವತ್ತಮ್ಮ, ರಾಗಿಣಿ, ಮಾರುತಿಕುಮಾರ್, ಕರಿಯಣ್ಣ, ಗಿರಿಜಮ್ಮ, ಗೀತಾ, ಕೋಕಿಲಾ ಸಂದೀಪ್, ನವೀನ್‌ ಕುಮಾರ್, ಗೋವಿಂದಪ್ಪ, ಪುಷ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.