ಪ್ರಾತಿನಿಧಿಕ ಚಿತ್ರ
– ಪ್ರಜಾವಾಣಿ ಚಿತ್ರ
ತುಮಕೂರು: ಬಿಸಿಯೂಟ ತಯಾರಕರು ಶಾಲೆಗಳಲ್ಲಿ ಬಿಸಿಯೂಟ ತಯಾರಿ ನಿಲ್ಲಿಸಿ ಧರಣಿ ನಡೆಸಲು ತೀರ್ಮಾನಿಸಿದ್ದಾರೆ. ಸೇವೆ ಕಾಯಂ, ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಾರ್ಚ್ 5ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಎಐಟಿಯುಸಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.
‘ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ನೀಡಿದ ಭರವಸೆಯಂತೆ ಬಿಸಿಯೂಟ ತಯಾರಕರನ್ನು ಕಾಯಂ ಮಾಡಬೇಕು. ಬಿಸಿಯೂಟ ಯೋಜನೆ ಎಂಬುವುದನ್ನು ಕೈಬಿಟ್ಟು, ತಯಾರಕರನ್ನು ಕಾರ್ಮಿಕರನ್ನಾಗಿ ಪರಿಗಣಿಸಬೇಕು’ ಎಂದು ಎಐಟಿಯುಸಿ ಜಿಲ್ಲಾ ಅಧ್ಯಕ್ಷ ಕಂಬೇಗೌಡ ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಅಧ್ಯಕ್ಷೆ ರಾಧಮ್ಮ, ‘2023-24ರ ಸಾಲಿನ ಬಜೆಟ್‍ನಲ್ಲಿ ₹1 ಸಾವಿರ ವೇತನ ಘೋಷಿಸಿದ್ದು ಬಿಟ್ಟರೆ, ಯಾವುದೇ ಸವಲತ್ತು ಸಿಕ್ಕಿಲ್ಲ. ಕಳೆದ 23 ವರ್ಷಗಳಿಂದ ಕೆಲಸ ಮಾಡುತ್ತಿರುವ ಬಿಸಿಯೂಟ ತಯಾರಕರು ಸೌಲಭ್ಯದಿಂದ ವಂಚಿತರಾಗಿದ್ದಾರೆ. ಇದೀಗ ಬಿಸಿಯೂಟ ತಯಾರಿಕೆಯನ್ನು ಖಾಸಗಿಯವರಿಗೆ ವಹಿಸಿ ಮಹಿಳೆಯರನ್ನು ವಂಚಿಸುವ ಹುನ್ನಾರ ನಡೆಯುತ್ತಿದೆ. ಸರ್ಕಾರ ಇದನ್ನು ಕೈಬಿಡಬೇಕು’ ಎಂದು ಆಗ್ರಹಿಸಿದರು.
ಫೆಡರೇಷನ್‌ನ ಜಿ.ಎಸ್.ಚಂದ್ರಕಲಾ, ಎ.ಬಿ.ಉಮಾದೇವಿ, ವನಜಾಕ್ಷಿ, ಪುಷ್ಪಲತಾ, ಸಾವಿತ್ರಮ್ಮ, ಕಾಂತರಾಜು, ಚಂದ್ರಶೇಖರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.