ADVERTISEMENT

ತುಮಕೂರು: ಮೆಗಾ ಡೇರಿ ಕನಸಿಗೆ ತಣ್ಣೀರು

ತುಮಕೂರು ಹಾಲು ಒಕ್ಕೂಟದಿಂದ ರಾಜ್ಯ ಸರ್ಕಾರಕ್ಕೆ ಡಿಪಿಆರ್ ಸಲ್ಲಿಕೆ; ಬಹಿರಂಗ ಸಭೆಯಲ್ಲಿಯೇ ಭರವಸೆ ನೀಡಿದ್ದ ಬಿಎಸ್‌ವೈ

ಡಿ.ಎಂ.ಕುರ್ಕೆ ಪ್ರಶಾಂತ
Published 8 ಮಾರ್ಚ್ 2020, 19:30 IST
Last Updated 8 ಮಾರ್ಚ್ 2020, 19:30 IST
ಸಿ.ವಿ.ಮಹಲಿಂಗಯ್ಯ
ಸಿ.ವಿ.ಮಹಲಿಂಗಯ್ಯ   

ತುಮಕೂರು: ರಾಜ್ಯದಲ್ಲಿ ಹೆಚ್ಚು ಹಾಲು ಉತ್ಪಾದಿಸುವ ಜಿಲ್ಲೆಗಳಲ್ಲಿ ತುಮಕೂರು ಸಹ ಪ್ರಮುಖವಾದುದು. ಇಂತಿಪ್ಪ ಜಿಲ್ಲೆಯ ಹೈನೋದ್ಯಮದ ಅಭಿವೃದ್ಧಿಗೆ ಮೆಗಾ ಡೇರಿ ಸ್ಥಾಪಿಸಬೇಕು ಎನ್ನುವ ತುಮುಲ್ (ತುಮಕೂರು ಹಾಲು ಒಕ್ಕೂಟ) ಕನಸಿಗೆ ರಾಜ್ಯ ಸರ್ಕಾರ ತಣ್ಣೀರು ಎರಚಿದೆ.

ಮೆಗಾ ಡೇರಿ ಸ್ಥಾಪನೆ ಸಂಬಂಧ ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿಯ ಮೂಲಕ ₹ 154 ಕೋಟಿಯ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ರೂಪಿಸಿ ರಾಜ್ಯ ಸರ್ಕಾರ ಹಾಗೂ ಕೆಎಂಎಫ್‌ಗೆ ತುಮುಲ್ ಸಲ್ಲಿಸಿತ್ತು. ₹ 105 ಕೋಟಿಯನ್ನು ಸರ್ಕಾರ ಭರಿಸಿದರೆ ಉಳಿದ ₹ 50 ಕೋಟಿಯನ್ನು ತುಮುಲ್ ಭರಿಸುವುದಾಗಿ ತಿಳಿಸಿತ್ತು.

ಸಕಾರಾತ್ಮಕ ಅಂಶ ಅಂದರೆ ‘ಮೆಗಾ ಡೇರಿ’ ಸ್ಥಾಪನೆಗೆ ಹೊಸದಾಗಿ ಜಾಗ ಹುಡುಕುವ ಪ್ರಮೇಯ ಇಲ್ಲ. ಈಗಾಗಲೇ ಮಲ್ಲಸಂದ್ರದಲ್ಲಿರುವ ತುಮುಲ್ ಒಕ್ಕೂಟದಲ್ಲಿಯೇ ಜಾಗ ಇದೆ. ಇಲ್ಲಿ 95 ಎಕರೆ ಜಮೀನಿದೆ. ಜಾಗದ ಕೊರತೆ ಉದ್ಭವಿಸುತ್ತಿರಲಿಲ್ಲ. ಡಿಪಿಆರ್‌ನಲ್ಲಿ ಈ ಅಂಶವನ್ನೂ ತುಮುಲ್ ಪ್ರಸ್ತಾಪಿಸಿತ್ತು. ಮೆಗಾ ಡೇರಿ ಸ್ಥಾಪಿಸಿದರೆ ಜಿಲ್ಲೆಯ ಹೈನೋದ್ಯಮದ ಬೆಳವಣಿಗೆಗೆ ಹೇಗೆ ಸಹಾಯಕವಾಗುತ್ತದೆ, ಡೇರಿಯ ಚಟುವಟಿಕೆಗಳೇನು ಎನ್ನುವ ವಿವರ ವರದಿಯಲ್ಲಿ ವಿಸ್ತೃತವಾಗಿತ್ತು.

ADVERTISEMENT

ನಗರದಲ್ಲಿ 2019ರ ನವೆಂಬರ್‌ನಲ್ಲಿ ನಡೆದ ರಾಜ್ಯ ಮಟ್ಟದ 66ನೇ ಸಹಕಾರಿ ಸಪ್ತಾಹದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮೆಗಾ ಡೇರಿ ಸ್ಥಾಪನೆ ಸಂಬಂಧ ತುಮುಲ್ ಮನವಿ ಸಹ ಸಲ್ಲಿಸಿತ್ತು. ಮುಖ್ಯಮಂತ್ರಿ ಈ ವಿಚಾರವಾಗಿ ಸಕಾರಾತ್ಮಕ ಸ್ಪಂದಿಸಿ ಬಹಿರಂಗ ಸಭೆಯಲ್ಲಿಯೇ ಮೆಗಾ ಡೇರಿ ಆರಂಭಿಸಲಾಗುವುದು ಎಂದು ಘೋಷಿಸಿದ್ದರು.

ಮುಖ್ಯಮಂತ್ರಿ ಅವರ ಈ ಘೋಷಣೆ ಹೈನುಗಾರರಲ್ಲಿ ಸಂತಸಕ್ಕೆ ಕಾರಣವಾಗಿತ್ತು. ತುಮುಲ್ ಮತ್ತಷ್ಟು ವೇಗದಲ್ಲಿ ಡಿಪಿಆರ್ ರೂಪಿಸಿತು. ಮುಖ್ಯಮಂತ್ರಿ ಅವರು ಬಜೆಟ್‌ನಲ್ಲಿ ಇದಕ್ಕೆ ಹಣ ಮೀಸಲಿಡುವರು ಎನ್ನುವ ಅಪಾರ ವಿಶ್ವಾಸವನ್ನು ಜಿಲ್ಲೆಯ ಸಹಕಾರಿ ವಲಯ ಮತ್ತು ಹೈನೋದ್ಯಮ ಹೊಂದಿತ್ತು.

ತುಮುಲ್ ಅಧ್ಯಕ್ಷ ಸಿ.ವಿ.ಮಹಲಿಂಗಯ್ಯ ಹಾಗೂ ಅಧಿಕಾರಿಗಳು ಮೆಗಾ ಡೇರಿ ಸಂಬಂಧ ಸಹಕಾರ, ಪಶುಸಂಗೋಪನೆ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕೆಎಂಎಫ್ ಅಧ್ಯಕ್ಷರಿಗೂ ಮನವಿ ಸಲ್ಲಿಸಿದ್ದರು. ಅವರು ಸಹ ಸಕಾರಾತ್ಮಕ ಭರವಸೆ ನೀಡಿದ್ದರು. ಆದರೆ ಬಜೆಟ್‌ನಲ್ಲಿ ಮೆಗಾ ಡೇರಿಯ ಬಗ್ಗೆ ಚಕಾರ ಎತ್ತಿಲ್ಲ. ಸರ್ಕಾರದ ಈ ನಡೆ ಸಹಕಾರಿ ಮತ್ತು ಹೈನೋದ್ಯಮ ವಲಯದಲ್ಲಿ ನಿರಾಸೆಗೆ ಕಾರಣವಾಗಿದೆ.

ನಿತ್ಯ ಸರಾಸರಿ 7.55 ಲಕ್ಷ ಲೀಟರ್ ಹಾಲು ತುಮುಲ್‌ಗೆ ಪೂರೈಕೆ ಆಗುತ್ತಿದೆ. ಈ ಉತ್ಪಾದನೆ ಜನವರಿಯಲ್ಲಿ 8 ಲಕ್ಷ ಲೀಟರ್‌ಗೆ ಮುಟ್ಟಿತ್ತು. ಮನೆ ಬಳಕೆ ಅಗತ್ಯಗಳಿಗೆ ಇಟ್ಟುಕೊಂಡು, ಖಾಸಗಿಯವರಿಗೆ ಮತ್ತು ಖಾಸಗಿ ಡೇರಿಗಳಿಗೆ ಮಾರಾಟ ಮಾಡಿ ಉಳಿಯುವ ಹಾಲಿನ ಪ್ರಮಾಣವೇ ಇಷ್ಟಾಗುತ್ತಿದೆ. ದಿನದಿಂದ ದಿನಕ್ಕೆ ಹಾಲಿನ ಉತ್ಪಾದನೆ ಹೆಚ್ಚುತ್ತಿದೆ. ಒಂದು ವೇಳೆ ಮೆಗಾ ಡೇರಿ ಆರಂಭವಾದರೆ ಖಾಸಗಿ ಡೇರಿಗಳಿಗೂ ಕಡಿವಾಣ ಹಾಕಲು ಸಾಧ್ಯವಾಗುತ್ತದೆ ಎನ್ನುವ ಆಸೆ ತುಮುಲ್‌ನದ್ದಾಗಿತ್ತು.

ಈಗಾಗಲೇ ಮುಂಬೈ ಮಾರುಕಟ್ಟೆಯಲ್ಲಿ ನಿತ್ಯ 1.5 ಲಕ್ಷ ಲೀಟರ್ ಹಾಲನ್ನು ತುಮುಲ್ ಮಾರಾಟ ಮಾಡುತ್ತಿದೆ. ಮೆಗಾ ಡೇರಿ ಆರಂಭವಾಗಿದ್ದರೆ ಈ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸಬಹುದಿತ್ತು. ಆ ಮೂಲಕ ರೈತರ ಆರ್ಥಿಕ ಶಕ್ತಿ ಹೆಚ್ಚಿಸಬಹುದಿತ್ತು.

***

ಯೋಜನೆ ಸಾಕಾರಕ್ಕೆ ಮನಸ್ಸು ಮಾಡಬೇಕಿತ್ತು

ಮೈಸೂರು, ಚಾಮರಾಜನಗರ ಇತರೆಡೆ ಮೆಗಾ ಡೇರಿ ಆರಂಭವಾಗಿದೆ. ರಾಜ್ಯ ಸರ್ಕಾರಕ್ಕೆ ಡಿಪಿಆರ್ ಸಹ ನೀಡಿದ್ದೆವು. ಸಚಿವರಿಗೂ ಮನವಿ ಸಲ್ಲಿಸಿದ್ದೆವು. ಆದರೆ ಯೋಜನೆ ಮಾತ್ರ ಜಾರಿಯಾಗಲಿಲ್ಲ. ಮೆಗಾ ಡೇರಿ ಜಿಲ್ಲೆಯಲ್ಲಿ ಆರಂಭವಾಗಿದ್ದರೆ ರೈತರು, ಸಹಕಾರಿ ವಲಯ ಹೀಗೆ ವಿವಿಧ ಕ್ಷೇತ್ರಗಳ ಮೇಲೆ ಉತ್ತಮ ಪರಿಣಾಮ ಬೀರುತ್ತಿತ್ತು ಎನ್ನುತ್ತಾರೆ ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಸಿ.ವಿ.ಮಹಲಿಂಗಯ್ಯ.

ಬಜೆಟ್‌ನಲ್ಲಿ ಘೋಷಿಸಬಹುದು ಎಂದು ನಿರೀಕ್ಷೆ ಹೊಂದಿದ್ದೆವು. ಸರ್ಕಾರ ಯೋಜನೆ ಸಾಕಾರಕ್ಕೆ ಮನಸ್ಸು ಮಾಡದಿರುವುದು ಬೇಸರ ತರಿಸಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.