ADVERTISEMENT

ಬಳ್ಳಾರಿಯಲ್ಲಿ ಗಣಿ ತರಬೇತಿ ಶಾಲೆ: ಮುರುಗೇಶ ನಿರಾಣಿ

​ಪ್ರಜಾವಾಣಿ ವಾರ್ತೆ
Published 5 ಜುಲೈ 2021, 9:58 IST
Last Updated 5 ಜುಲೈ 2021, 9:58 IST
   

ತುಮಕೂರು: ಬಳ್ಳಾರಿಯಲ್ಲಿ ಗಣಿ ತರಬೇತಿ ಶಾಲೆ ಆರಂಭಿಸಲು ಸಿದ್ಧತೆಗಳು ನಡೆದಿದ್ದು, ಮುಂದಿನ ತಿಂಗಳು ಕಟ್ಟಡ ನಿರ್ಮಾಣ ಕೆಲಸಕ್ಕೆ ಚಾಲನೆ ನೀಡಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ಸೋಮವಾರ ತಿಳಿಸಿದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮರಳಿನಿಂದ ಹಿಡಿದು ಚಿನ್ನದ ಗಣಿಗಾರಿಕೆ ವರೆಗೆ ತರಬೇತಿ ನೀಡಲಾಗುತ್ತದೆ. ವೈಜ್ಞಾನಿಕ ಗಣಿಗಾರಿಕೆ ನಡೆಸಲು ಇದು ನೆರವಾಗುತ್ತದೆ’ ಎಂದು ಸ್ಪಷ್ಟಪಡಿಸಿದರು.

ಗಣಿಗಾರಿಕೆಯ ಕೆಳ ಹಂತದ ಸಿಬ್ಬಂದಿಯಿಂದ ಹಿಡಿದು ಗಣಿ ಮಾಲೀಕರವರೆಗೆ ತರಬೇತಿ ನೀಡಲಾಗುತ್ತದೆ. ತರಬೇತಿಯಿಂದ ಸಮರ್ಥವಾಗಿ ಗಣಿಗಾರಿಕೆ ನಡೆಸಲು ಅನುಕೂಲವಾಗುತ್ತದೆ. ಜತೆಗೆ ಗಣಿಗಾರಿಕೆ ಪ್ರದೇಶಗಳನ್ನು ಯಾವ ರೀತಿ ಬಳಕೆ ಮಾಡಿಕೊಳ್ಳಬೇಕು ಎಂಬುದು ತಿಳಿಯುತ್ತದೆ. ಇದರಿಂದಾಗಿ ಗಣಿಗಾರಿಕೆ ಕ್ಷೇತ್ರದಲ್ಲಿ ಅಪವ್ಯಯ ತಪ್ಪಿಸಲು ನೆರವಾಗಲಿದ್ದು, ಹೆಚ್ಚು ಆದಾಯ ಹೊಂದಬಹುದು. ಜತೆಗೆ ಸರ್ಕಾರಕ್ಕೂ ಹೆಚ್ಚು ಆದಾಯ ಬರಲಿದೆ ಎಂದು ಹೇಳಿದರು.

ADVERTISEMENT

ಗಣಿ ತರಬೇತಿ ಶಾಲೆ ಆರಂಭಕ್ಕೆ ಯೋಜನೆ ಸಿದ್ಧಗೊಂಡಿದ್ದು, ಮುಂದಿನ ತಿಂಗಳು ಕಟ್ಟಡ ನಿರ್ಮಾಣ ಆರಂಭವಾದರೆ ಎರಡು ವರ್ಷದಲ್ಲಿ ತರಬೇತಿ ನೀಡುವ ಕೆಲಸಕ್ಕೆ ಚಾಲನೆ ಸಿಗಲಿದೆ. ಇದು ರಾಜ್ಯದಲ್ಲಿ ಮೊದಲ ಪ್ರಯತ್ನ ಎಂದರು.

ರಾಜ್ಯದಲ್ಲಿ ಮಾತ್ರ ಕಬ್ಬಿಣದ ಅದಿರು ರಫ್ತು ಮಾಡಲು ಅವಕಾಶ ಇಲ್ಲವಾಗಿದ್ದು, ಇದರಿಂದಾಗಿ ರಾಜ್ಯದ ಆದಾಯದ ಮೇಲೆ ಪರಿಣಾಮ ಬೀರಿದೆ. ವಿದೇಶಗಳಿಗೆ ರಫ್ತು ಮಾಡಿದರೆ ಡಾಲರ್ ಲೆಕ್ಕದಲ್ಲಿ ಸರ್ಕಾರಕ್ಕೆ ಆದಾಯ ಬರುತ್ತದೆ. ಹಾಗಾಗಿ ರಫ್ತು ಮಾಡಲು ಅವಕಾಶ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.