ADVERTISEMENT

ಜಿಲ್ಲಾಡಳಿತದ ವಿರುದ್ಧ ಸಚಿವರ ಅಸಮಾಧಾನ

ರಾಷ್ಟ್ರೀಯ ಏಕತಾ ದಿವಸ ಆಚರಣೆಗೆ ನಿರ್ಲಕ್ಷ್ಯ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 6:56 IST
Last Updated 1 ನವೆಂಬರ್ 2025, 6:56 IST
ತುಮಕೂರಿನಲ್ಲಿ ಶುಕ್ರವಾರ ಸರ್ದಾರ್ ವಲ್ಲಭಭಾಯಿ ಪಟೇಲ್ 150ನೇ ಜನ್ಮ ವಾರ್ಷಿಕೋತ್ಸವದ ಪ್ರಯುಕ್ತ ಏಕತಾ ಮೆರವಣಿಗೆ ನಡೆಯಿತು. ಕೇಂದ್ರ ಸಚಿವ ವಿ.ಸೋಮಣ್ಣ, ಶಾಸಕರಾದ ಬಿ.ಸುರೇಶ್‌, ಜಿ.ಬಿ.ಜ್ಯೋತಿಗಣೇಶ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎಸ್‌.ರವಿಶಂಕರ್‌ ಇತರರು ಪಾಲ್ಗೊಂಡಿದ್ದರು
ತುಮಕೂರಿನಲ್ಲಿ ಶುಕ್ರವಾರ ಸರ್ದಾರ್ ವಲ್ಲಭಭಾಯಿ ಪಟೇಲ್ 150ನೇ ಜನ್ಮ ವಾರ್ಷಿಕೋತ್ಸವದ ಪ್ರಯುಕ್ತ ಏಕತಾ ಮೆರವಣಿಗೆ ನಡೆಯಿತು. ಕೇಂದ್ರ ಸಚಿವ ವಿ.ಸೋಮಣ್ಣ, ಶಾಸಕರಾದ ಬಿ.ಸುರೇಶ್‌, ಜಿ.ಬಿ.ಜ್ಯೋತಿಗಣೇಶ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎಸ್‌.ರವಿಶಂಕರ್‌ ಇತರರು ಪಾಲ್ಗೊಂಡಿದ್ದರು   

ತುಮಕೂರು: ‘ರಾಷ್ಟ್ರೀಯ ಏಕತಾ ದಿವಸ ಆಚರಣೆಗೆ ಸಂಬಂಧಿಸಿದಂತೆ ನಾನು ಜಿಲ್ಲಾ ಆಡಳಿತದ ಜತೆಗೆ ನಾಲ್ಕು–ಐದು ಬಾರಿ ಮಾತನಾಡಿದ್ದೇನೆ. ಆದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ಕೇಂದ್ರ ಜಲ ಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಶುಕ್ರವಾರ ಸರ್ದಾರ್ ವಲ್ಲಭಭಾಯಿ ಪಟೇಲ್ 150ನೇ ಜನ್ಮ ವಾರ್ಷಿಕೋತ್ಸವದ ಪ್ರಯುಕ್ತ ಬಿಜೆಪಿ ಹಮ್ಮಿಕೊಂಡಿದ್ದ ಏಕತಾ ಮೆರವಣಿಗೆಯಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದರು.

‘ಮೆರವಣಿಗೆಗೆ ಜಿಲ್ಲಾ ಆಡಳಿತ ಕೈಜೋಡಿಸಿಲ್ಲ. ದೇಶಕ್ಕೆ ಅಗೌರವ ತೋರುವಂತಹ ನಡವಳಿಕೆ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವಂತದ್ದು. ಯಾವುದೇ ಅಧಿಕಾರಿ ಸರ್ಕಾರದ ಕೈಗೊಂಬೆಯಾಗಬಾರದು. ರಾಷ್ಟ್ರಕ್ಕಾಗಿ ಕರ್ತವ್ಯ ನಿರ್ವಹಿಸಬೇಕು. ದೇಶ ಇದ್ದರೆ ರಾಜ್ಯ. ಇದನ್ನು ಮನಗಂಡು ಕೆಲಸ ಮಾಡಬೇಕು’ ಎಂದರು.

ADVERTISEMENT

ಜಿಲ್ಲಾ ಆಡಳಿತದ ನಡೆ ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ. ನಮ್ಮ ಬಳಿಯೂ ಪೆನ್‌, ಪೇಪರ್ ಇದೆ. ಈ ನಡವಳಿಕೆ ತಿದ್ದಿಕೊಳ್ಳದಿದ್ದರೆ ರಾಜ್ಯದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆಗೆ ಪತ್ರ ಬರೆಯುತ್ತೇನೆ. ಯಾರಿಗೂ ಕೂಡ ಅಗೌರವ ತೋರಬಾರದು ಎಂದು ತಿಳಿಸಿದರು.

ಶಾಸಕ ಬಿ.ಸುರೇಶ್‌ಗೌಡ, ‘ಏಕತಾ ದಿವಸ ಆಚರಣೆ ಮಾಡುವಂತೆ ದೇಶದ ಪ್ರಧಾನಿ ಸೂಚಿಸಿದ್ದಾರೆ. ಅವರ ಮಾತಿಗೆ ಜಿಲ್ಲಾ ಆಡಳಿತ ಕವಡೆ ಕಾಸಿನ ಕಿಮ್ಮತ್ತು ಕೊಟ್ಟಿಲ್ಲ. ಇದರ ಪರಿಣಾಮ ಅಧಿಕಾರಿಗಳು ಎದುರಿಸಬೇಕಾಗುತ್ತದೆ’ ಎಂದು ಹೇಳಿದರು.

ಸರ್ಕಾರ ಮೊಂಡುತನ: ಏಕತಾ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಸೋಮಣ್ಣ, ‘ರಾಷ್ಟ್ರೀಯ ಕಾರ್ಯಕ್ರಮ ಆಚರಿಸುವಾಗ ರಾಜ್ಯ ಸರ್ಕಾರ ಮೊಂಡುತನ ತೋರುತ್ತದೆ. ಜಿಲ್ಲಾ ಆಡಳಿತ ಉದ್ಧಟತನ, ನಿರ್ಲಕ್ಷ್ಯ ಬಿಡಬೇಕು. ದೇಶ ಇದ್ದರೆ ಮಾತ್ರ ನಾವು. ಜಿಲ್ಲೆಯ ಅಧಿಕಾರಿಗಳು ಇದನ್ನು ಅರಿತುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಇಂತಹ ಅಸಡ್ಡೆ ತೋರಬಾರದು’ ಎಂದು ಸಲಹೆ ಮಾಡಿದರು.

ಸರ್ದಾರ್ ವಲ್ಲಭಭಾಯಿ ಪಟೇಲ್ ದೇಶದ ವ್ಯವಸ್ಥೆಯಲ್ಲಿ ಏಕತೆ ಸಾರಿದರು. ಭಾರತದ ಪರಂಪರೆಯನ್ನು ವಿಶ್ವಕ್ಕೆ ಸಾರುವಲ್ಲಿ ಅವರ ಕೊಡುಗೆ ಅಪಾರ ಎಂದರು.

ನಗರದಲ್ಲಿ ಮೆರವಣಿಗೆ

ಏಕತಾ ಮೆರವಣಿಗೆಗೆ ವಿಶ್ವವಿದ್ಯಾಲಯದ ಮುಂಭಾಗದಲ್ಲಿ ಚಾಲನೆ ನೀಡಲಾಯಿತು. ಎಸ್‌.ಎಸ್‌.ವೃತ್ತ ಭದ್ರಮ್ಮ ಛತ್ರ ವೃತ್ತ ಚಾಮುಂಡೇಶ್ವರಿ ದೇವಸ್ಥಾನದ ರಸ್ತೆ ಕೆಇಬಿ ರಸ್ತೆ ಕೋತಿತೋಪು ರಸ್ತೆ ಮೂಲಕ ಸಾಗಿ ವಿಶ್ವವಿದ್ಯಾಲಯದ ಬಳಿ ಕೊನೆಯಾಯಿತು. ಶಾಸಕರಾದ ಬಿ.ಸುರೇಶ್‍ಗೌಡ ಜಿ.ಬಿ.ಜ್ಯೋತಿಗಣೇಶ್ ವಿ.ವಿ ಕುಲಪತಿ ಪ್ರೊ.ವೆಂಕಟೇಶ್ವರಲು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ರವಿಶಂಕರ್‌ ಮುಖಂಡರಾದ ವೈ.ಎಚ್.ಹುಚ್ಚಯ್ಯ ಬ್ಯಾಟರಂಗೇಗೌಡ ಅಂಬಿಕಾ ಸಂದೀಪ್‍ಗೌಡ ಎಚ್.ಎಂ.ರವೀಶಯ್ಯ ಕೆ.ವೇದಮೂರ್ತಿ ನವಚೇತನ್ ಸುಮಿತ್ರಮ್ಮ ಟಿ.ಕೆ.ಧನುಷ್ ಪ್ರದೀಪ್‍ಕುಮಾರ್ ಟಿ.ಎಚ್.ಹನುಮಂತರಾಜು ಭೈರಣ್ಣ ವಿರೂಪಾಕ್ಷಪ್ಪ ಸತ್ಯಮಂಗಲ ಜಗದೀಶ್ ಅಕ್ಷಯ್ ಚೌಧರಿ ಡಾ.ಎಂ.ಆರ್.ಹುಲಿನಾಯ್ಕರ್ ಮೊದಲಾದವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.