ADVERTISEMENT

ತುಮಕೂರು: ಅನುದಾನ ಮಂಜೂರು ಹಾಗೂ ಮೆಗಾ ಡೇರಿ ನಿರ್ಮಾಣ ಸಂಬಂಧ ಚರ್ಚಿಸಿ ನಿರ್ಣಯ

ತುಮಕೂರು ಹಾಲು ಒಕ್ಕೂಟಕ್ಕೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಭೇಟಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2020, 14:43 IST
Last Updated 15 ಜುಲೈ 2020, 14:43 IST
ತುಮಕೂರು ಹಾಲು ಒಕ್ಕೂಟದ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿದ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್ ಉತ್ಪನ್ನಗಳನ್ನು ಪರಿಶೀಲಿಸಿದರು
ತುಮಕೂರು ಹಾಲು ಒಕ್ಕೂಟದ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿದ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್ ಉತ್ಪನ್ನಗಳನ್ನು ಪರಿಶೀಲಿಸಿದರು   

ತುಮಕೂರು: ತುಮಕೂರು ಹಾಲು ಒಕ್ಕೂಟವು (ತುಮುಲ್‌) ₹ 154 ಕೋಟಿ ವೆಚ್ಚದಲ್ಲಿ ಮೆಗಾ ಡೇರಿ ನಿರ್ಮಾಣಕ್ಕೆ ಮನವಿ ಮಾಡಿದೆ. ಕೊರೊನಾ ನಿಯಂತ್ರಣಕ್ಕೆ ಬಂದ ನಂತರ ಅನುದಾನ ಮಂಜೂರು ಹಾಗೂ ಮೆಗಾ ಡೇರಿ ನಿರ್ಮಾಣ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಶಾಸಕರೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಭರವಸೆ ನೀಡಿದರು.

ತುಮುಲ್‌ಗೆ ಬುಧವಾರ ಭೇಟಿ ನೀಡಿದ ಅವರು ಹಾಲು ಸಂಸ್ಕರಣಾ ಘಟಕ ಪರಿಶೀಲಿಸಿ ಮಾತನಾಡಿದರು.

ಹೊರದೇಶಗಳಿಂದ ಕೇಂದ್ರ ಸರ್ಕಾರ ಹಾಲು ಉತ್ಪನ್ನಗಳನ್ನು ತರಿಸಿಕೊಳ್ಳುವುದರಿಂದ ದೇಶೀಯ ಹಾಲು ಉತ್ಪಾದಕರಿಗೆ ತೊಂದರೆ ಆಗಲಿದೆ. ಈ ಸಂಬಂಧ ಮುಖ್ಯಮಂತ್ರಿ ಅವರ ಜತೆ ‌ಚರ್ಚಿಸಲಾಗುವುದು ಎಂದರು.

ADVERTISEMENT

ಕೊರೊನಾ ಕಾರಣದಿಂದ ನಂದಿನಿ ಹಾಲಿನ ಮಾರಾಟ ಗಣನೀಯವಾಗಿ ಕಡಿಮೆ ಆಗಿದೆ. ಮೈಸೂರು ಹಾಗೂ ತುಮಕೂರು ಹಾಲಿನ ಡೇರಿಗಳಿಗೆ ಭೇಟಿ ನೀಡಿದಾಗ ಇದೇ ಸಮಸ್ಯೆ ತಲೆದೋರಿದೆ. ಡೇರಿಯಲ್ಲಿ ತುಪ್ಪ ಹಾಗೂ ಹಾಲಿನ ಪುಡಿಯು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹ ಇದೆ. ಮಾರಾಟವಾಗುತ್ತಿಲ್ಲ. ಈ ಕುರಿತು ಕೆಎಂಎಫ್ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಅವರ ಜತೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದರು.

ಸಂಸದ ಜಿ.ಎಸ್.ಬಸವರಾಜು, ಶಾಸಕ ಬಿ.ಜಿ.ಜ್ಯೋತಿಗಣೇಶ್, ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಮಹಲಿಂಗಯ್ಯ, ಸಹಕಾರ ಸಂಘಗಳ ಉಪನಿಬಂಧಕ ಕಾಂತರಾಜು, ತುಮಕೂರು ಎಪಿಎಂಸಿ ಕಾರ್ಯದರ್ಶಿ ಪುಷ್ಪಾ, ತುಮಕೂರು ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಸುಬ್ರಾಯ್ ಭಟ್ ಹಾಜರಿದ್ದರು.

****

ಮುಂಬೈಗೆ ಹಾಲು; ಶೇ 75ರಷ್ಟು ಕಡಿಮೆ

ಕೇಂದ್ರ ಸರ್ಕಾರ ಸಹಕಾರ ಕ್ಷೇತ್ರದ ಮೇಲೆ ಯಾವುದೇ ಬಿಗಿ ನಿಯಂತ್ರಣ ಹೇರಿಲ್ಲ. ಆದರೆ ಕೆಲವು ಸಹಕಾರಿ ಬ್ಯಾಂಕುಗಳಲ್ಲಿ ಹಣ ದುರುಪಯೋಗ ಪ್ರಕರಣಗಳು ಕಂಡು ಬಂದಿವೆ. ಹಿಂದಿನಿಂದಲೂ ಸಹಕಾರ ಬ್ಯಾಂಕುಗಳ ಮೇಲೆ ಆರ್‌ಬಿಐ ನಿಯಂತ್ರಣವಿದೆ. ಈಗಲೂ ಅದೇ ನಿಯಂತ್ರಣ ಮುಂದುವರಿದಿದೆ. ಮುಂಬೈ ಮತ್ತಿತರ ನಗರಗಳಿಗೆ ಪೂರೈಕೆ ಆಗುತ್ತಿದ್ದ ತುಮಕೂರು ಹಾಲು ಒಕ್ಕೂಟದ ಹಾಲು ಶೇ 75ರಷ್ಟು ಕಡಿಮೆ ಆಗಿದೆ ಎಂದು ಎಸ್‌.ಟಿ.ಸೋಮಶೇಖರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.