
ತುಮಕೂರು: ಗ್ರಾಮಾಂತರ ಕ್ಷೇತ್ರದ ಹೆತ್ತೇನಹಳ್ಳಿಯಲ್ಲಿ ₹10 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಶಾಸಕ ಬಿ.ಸುರೇಶ್‌ಗೌಡ ಗುದ್ದಲಿಪೂಜೆ ನೆರವೇರಿಸಿದರು.
ಹೆತ್ತೇನಹಳ್ಳಿ ದೇವಸ್ಥಾನ ರಸ್ತೆ, ಚನ್ನಕೇಶವ ದೇವಸ್ಥಾನ ಆವರಣದಲ್ಲಿ ಒಂದು ಕೋಟಿ ವೆಚ್ಚದಲ್ಲಿ ಪಾರ್ಕ್ ನಿರ್ಮಾಣ, ಹೆತ್ತೇನಹಳ್ಳಿ ಮಾರಮ್ಮ ದೇಗುಲದ ಕಾಂಪೌಂಡ್ ನಿರ್ಮಾಣ, ನೆಲಹಾಸು, ದೇವಸ್ಥಾನದ ಸಮುದಾಯ ಭವನ, ಕಲ್ಯಾಣಿ ಅಭಿವೃದ್ಧಿ, ಆಂಜನೇಯ, ತಿರುಮಲ ದೇವಸ್ಥಾನದ ಅಭಿವೃದ್ಧಿ, ಹಾಲನೂರು- ಗೂಳೂರು- ಹರಳೂರು ರಸ್ತೆ ಕಾಮಗಾರಿ, ಕೈದಾಳ ಅಣೆಯ ಕೋಡಿ ದುರಸ್ತಿ ಕಾಮಗಾರಿಗೆ ಚಾಲನೆ ನೀಡಿದರು.
‘ವಿರೋಧ ಪಕ್ಷದಲ್ಲಿದ್ದರೂ ಹೋರಾಟ ಮಾಡಿ ಅನುದಾನ ತಂದು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದೇನೆ. ಶಾಲಾ, ಕಾಲೇಜು, ಆಸ್ಪತ್ರೆ, ರಸ್ತೆ ಅಭಿವೃದ್ಧಿ, ಕೆರೆಗಳಿಗೆ ನೀರು ತುಂಬಿಸುವುದು, ದೇವಸ್ಥಾನಗಳ ಜೀರ್ಣೋದ್ಧಾರ ಮತ್ತಿತರ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಲಾಗಿದೆ’ ಎಂದು ಶಾಸಕರು ಹೇಳಿದರು.
ಗೂಳೂರು ಕೆರೆಗೆ ಹೇಮಾವತಿ ನೀರು ತುಂಬಿಸಬೇಕಿದೆ. ಮರಳೂರು ಕೆರೆಯಿಂದ ಗೂಳೂರು ಕೆರೆಗೆ ಸಂಪರ್ಕ ಒದಗಿಸುವ ಯೋಜನೆಗೆ ಮನವಿ ಮಾಡಲಾಗಿದೆ. ಈ ವರ್ಷ ಹೆತ್ತೇನಹಳ್ಳಿ ಕೆರೆ ತುಂಬಿಸಿ ಮಾರಮ್ಮ ದೇವಿಯ ತೆಪ್ಪೋತ್ಸವ ಮಾಡಲಾಗುವುದು. ಸೂಲದ ಆಂಜನೇಯ ದೇವಸ್ಥಾನ ಸಮೀಪ ಎರಡು ಎಕರೆ ಜಾಗ ಕೇಳಿದ್ದು, ಅಲ್ಲಿ 24/7 ಸೇವೆಯ 30 ಹಾಸಿಗೆಗಳ ಆಸ್ಪತ್ರೆ ನಿರ್ಮಿಸಲಾಗುವುದು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಧನಲಕ್ಷ್ಮಿ, ಉಪಾಧ್ಯಕ್ಷೆ ಮಮತಾ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್, ಮುಖಂಡರಾದ ಶಾರದಾ ನರಸಿಂಹಮೂರ್ತಿ, ಗೂಳೂರು ಶಿವಕುಮಾರ್, ಅಣ್ಣಪ್ಪ, ಸುಭಾಷ್ ಚಂದ್ರಣ್ಣ, ಎಚ್.ಎ.ಆಂಜನಪ್ಪ, ಸಿದ್ದೇಗೌಡ, ಶಂಕರಣ್ಣ, ನರಸಿಂಹಮೂರ್ತಿ, ವೆಂಕಟೇಶ್, ಗಂಗಣ್ಣ, ಶೇಷಕುಮಾರ್, ಕೆಂಪಹನುಮಯ್ಯ, ರೇಣುಕಮ್ಮ, ಶಿವರಾಜು, ಗೋವಿಂದರಾವ್, ಎಂಜಿನಿಯರ್ ನಂಜರಾಜ್, ಭಾನುಪ್ರಕಾಶ್, ಗುತ್ತಿಗೆದಾರ ಪ್ರದೀಪ್ ಪದ್ಮರಾಜ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.