
ಮಧುಗಿರಿ: ತಾಲ್ಲೂಕಿನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಅಧಿಕಾರಿಗಳ ನಿರ್ಲಕ್ಷಕ್ಕೆ ಶಾಸಕ ಕೆ.ಎನ್.ರಾಜಣ್ಣ ಜಿಲ್ಲಾಧಿಕಾರಿ ಶುಭಕಲ್ಯಾಣ್ ಎದುರೇ ‘ನಮ್ಮಲ್ಲಿರುವ ಅಧಿಕಾರಿಗಳು ಯೂಸ್‌ಲೆಸ್ ಅಧಿಕಾರಿಗಳು. ನಿಮ್ಮ ನಡವಳಿಕೆ ಹೀಗೆ ಮುಂದುವರಿದರೆ ಎಲ್ಲರನ್ನು ಮಾರ್ಚ್‌ನಲ್ಲಿ ವರ್ಗಾವಣೆ ಮಾಡಿಸುತ್ತೇನೆ’ ಎಂದು ಗುಡುಗಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಶನಿವಾರ ನಡೆದ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ಉದಾಸೀನ ವರ್ತನೆಗೆ ಗರಂ ಆದರು.
‘ಒಬ್ಬ ರೈತ ಲಂಚ ನೀಡಲು ಮೂಲಂಗಿ ತಂದು ಪ್ರತಿಭಟನೆ ಮಾಡುತ್ತಾನೆ ಎಂದರೆ ಯಾರಿಗೆ ಅಪಮಾನ. ಇಂತಹ ವರ್ತನೆ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅಧಿಕಾರಿಗಳು ಕೇವಲ ಪತ್ರ ವ್ಯವಹಾರದಲ್ಲೇ ವರ್ಷಾನುಗಟ್ಟಲೆ ಸಮಯ ಹಾಳು ಮಾಡುತ್ತಾ ಹಣವಿದ್ದರೂ ಕೆಲಸ ಮಾಡಲು ಉದಾಸೀನ ಮಾಡುತ್ತಿದ್ದೀರಿ. ಲೋಕೋಪಯೋಗಿ ಇಲಾಖೆ ರಸ್ತೆಯಲ್ಲಿ ಅಕ್ರಮವಾಗಿ ಇಟ್ಟುಕೊಂಡಿರುವ ಗೂಡಂಗಡಿಗಳನ್ನು ಕಡ್ಡಾಯವಾಗಿ ತೆರವುಗೊಳಿಸಬೇಕು. ಆವರಗಲ್ಲು ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಮೀನಮೇಷ ಎಣಿಸುತ್ತಿದ್ದು, ಪೊಲೀಸರ ಸಹಕಾರ ಪಡೆದು ಬೇಗ ಕೆಲಸ ಮುಗಿಸಿ’ ಎಂದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, ‘ಜಿಲ್ಲೆಯಲ್ಲಿ ₹450 ಕೋಟಿ ಬಳಕೆಯಾಗದೆ ಉಳಿದಿದೆ. ಮಧುಗಿರಿಯಲ್ಲೂ ₹13 ಕೋಟಿ ವೆಚ್ಚದ ಕೆಲಸ ಇನ್ನೂ ಆರಂಭಿಸಿಲ್ಲ. ಅಧಿಕಾರಿಗಳು ಒಂದು ತಿಂಗಳಲ್ಲಿ ಎಲ್ಲ ಕೆಲಸಕ್ಕೆ ಭೂಮಿಪೂಜೆ ಮಾಡಿಸಬೇಕು’ ಎಂದು ಸೂಚನೆ ನೀಡಿದರು.
ಜೆಜೆಎಂ ಇಲಾಖೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ, ‘4 ತಿಂಗಳು ಸಮಯವಿದ್ದರೂ ಶೇ 30ರಷ್ಟು ಮಾತ್ರ ಪ್ರಗತಿಯಾಗಿದೆ. 153 ಕಾಮಗಾರಿಗಳಲ್ಲಿ 10 ಮಾತ್ರ ಮುಗಿದಿದೆ. ಇಂಥ ಬೇಜವಾಬ್ದಾರಿ ಕೆಲಸ ಮಾಡಲು ನೀವೇ ಬೇಕಾ. ಇನ್ನು ಒಂದು ತಿಂಗಳ ಒಳಗಾಗಿ ಉಳಿದ ಕೆಲಸ ಮುಗಿಸಿ ನನಗೆ ವರದಿ ನೀಡಬೇಕು. ತಾಲ್ಲೂಕಿಗೆ ₹6.21 ಕೋಟಿ ಬಿಡುಗಡೆಯಾಗಿದೆ. ₹3.85 ಕೋಟಿ ಖರ್ಚಾಗಿದ್ದು ಕೆಲಸ ಮಾತ್ರ ಪ್ರಗತಿಯಲ್ಲಿಲ್ಲ. ಕೆಡಿಪಿ ಸಭೆಯ ಮಹತ್ವ ತಿಳಿದಿಲ್ಲವೇ’ ಎಂದರು.
‘ಬೆಸ್ಕಾಂ ಇಲಾಖೆ ಸಭೆ ನಡೆಯುವಾಗ ವಿದ್ಯುತ್ ಕಡಿತ ಮಾಡುವುದು ಸರಿಯಲ್ಲ. ನಿಮ್ಮ ಕೆಲಸವನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಪದೇ ಪದೇ ವಿದ್ಯುತ್ ಕಡಿತಗೊಳಿಸುವುದು ಇನ್ನು ಮುಂದೆ ನಡೆಯಬಾರದು’ ಎಂದು ಶಾಸಕರು ಎಚ್ಚರಿಸಿದರು.
ಕೆಪಿಟಿಸಿಎಲ್‌ನಿಂದ ರಾಜ್ಯದಲ್ಲಿ 21 ಸಬ್‌ಸ್ಟೇಷನ್ ಮಂಜೂರಾಗಿದ್ದು ಮಧುಗಿರಿಗೆ 3 ಸಿಕ್ಕಿದೆ. ಈ ಕೆಲಸವನ್ನು ಬೇಗ ಮುಗಿಸಲು ಜಿಲ್ಲಾಧಿಕಾರಿ ಸೂಚಿಸಿದರು.
ಆಹಾರ ಇಲಾಖೆಯಲ್ಲಿ ಅನ್ನ ಸುವಿಧ ಯೋಜನೆಯ ಕಳಪೆ ನಿರ್ವಹಣೆ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು 2,326 ಹಿರಿಯ ನಾಗರಿಕರಿದ್ದು, 326 ಮಂದಿಗೆ ಮಾತ್ರ ಈ ಯೋಜನೆ ತಲುಪುತ್ತಿದೆ. ಉಳಿದವರಿಗೆ ಯಾಕೆ ನೀಡಿಲ್ಲ ಎಂದರು. ಇದಕ್ಕೆ ಉತ್ತರಿಸಿದ ಆಹಾರ ಶೀರಸ್ತೆದಾರ್ ಸುಜಾತ, ಈ ಕಾರ್ಯಕ್ರಮಕ್ಕೆ ನ್ಯಾಯಬೆಲೆ ಅಂಗಡಿಯವರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದರು. ಅಂತಹ ಸೊಸೈಟಿಗಳ ಪರವಾನಗಿ ಅಮಾನತು ಮಾಡಿ ಎಂದರು.
ಬಾರ್ ಮೇಲೆ ಪ್ರಕರಣ ದಾಖಲಿಸಿ
ಅಬಕಾರಿ ಇಲಾಖೆಯಲ್ಲಿ ಅಕ್ರಮ ಮದ್ಯ ಮಾರಾಟದ ಬಗ್ಗೆ ಕ್ರಮವಹಿಸಿದ್ದು 153 ಪ್ರಕರಣ ದಾಖಲು ಮಾಡಿದ್ದೇವೆ ಎಂದು ಅಧಿಕಾರಿ ಶೀಲತಾ ತಿಳಿಸಿದರು. ತಕ್ಷಣ ಪ್ರತಿಕ್ರಿಯಿಸಿದ ಶಾಸಕ ‘ಹಳ್ಳಿಗಳಲ್ಲಿ ಬದುಕಲು ಮದ್ಯ ಮಾರಾಟ ಮಾಡುವವರನ್ನು ಹಿಡಿಯುತ್ತೀರಿ. ಆದರೆ ಅವರಿಗೆ ಮದ್ಯ ಸರಬರಾಜು ಮಾಡುವ ಬಾರ್‌ಗಳ ಮೇಲೆ ಮಾತ್ರ ಕ್ರಮವಿಲ್ಲ. ಮೊದಲು ಬಾರ್‌ಗಳ ಮೇಲೆ ಪ್ರಕರಣ ದಾಖಲಿಸಿ’ ಎಂದು ಸೂಚಿಸಿದರು. ತಾಲ್ಲೂಕಿನ ಎಲ್ಲ ಹಾಸ್ಟೆಲ್‌ಗಳಲ್ಲಿ ಕುಡಿಯುವ ನೀರಿನ ಪರೀಕ್ಷೆಯನ್ನು ಪ್ರತಿ ತಿಂಗಳು ಮಾಡಬೇಕು. ಎಲ್ಲೂ ಸ್ವಚ್ಛತೆ ಕುಡಿಯುವ ನೀರು ಆಹಾರದ ವಿಚಾರದಲ್ಲಿ ಸಮಸ್ಯೆ ಕಾಣಬಾರದು. ಇದಕ್ಕಾಗಿ ಎಸಿ ಮತ್ತು ಇಒ ಹಾಸ್ಟೆಲ್ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸುವಂತೆ ಡಿ.ಸಿ ಸೂಚಿಸಿದರು. ಶಿಕ್ಷಣ ಇಲಾಖೆಯಲ್ಲಿ ಎಲ್ಲ ಮಕ್ಕಳಿಗೆ ಆಧಾರ್ ತಿದ್ದುಪಡಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡಲು ಕ್ರಮವಹಿಸಬೇಕು. ವಿದ್ಯಾರ್ಥಿ ವೇತನದ ಬಗ್ಗೆ ತಾಂತ್ರಿಕ ಸಮಸ್ಯೆ ನಿವಾರಿಸಿಕೊಂಡು ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಬೇಕು. ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಹೆಚ್ಚಾಗುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಕ್ರಮ ವಹಿಸಬೇಕು ಎಂದರು. ತುಮಕೂರು-ರಾಯದುರ್ಗ ರೈಲ್ವೆ ಯೋಜನೆಗೆ ಭೂಮಿ ಈಗಾಗಲೇ ಹಸ್ತಾಂತರವಾಗಿದೆ. ಟೆಂಡರ್ ಈ ತಿಂಗಳಲ್ಲಿ ಮುಗಿಯಲಿದೆ. ಏಪ್ರಿಲ್ 15ರ ಮೇಲೆ ಕಾಮಗಾರಿ ಆರಂಭಿಸಲಾಗುವುದು ಎಂದು ರೈಲ್ವೆ ಅಧಿಕಾರಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.