ADVERTISEMENT

ಮುಂಗಾರು ಅನಿಶ್ಚಿತ: ಜಿಲ್ಲೆಯಲ್ಲಿ ಶೇ 2.74 ರಷ್ಟು ಮಾತ್ರ ಬಿತ್ತನೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 20:17 IST
Last Updated 22 ಜುಲೈ 2019, 20:17 IST

ತುಮಕೂರು: ಜಿಲ್ಲೆಯಲ್ಲಿ ಮುಂಗಾರು ಮಳೆ ಅನಿಶ್ಚಿತತೆ ಮುಂದುವರಿದಿದ್ದು, ಬಿತ್ತನೆ ಚಟುವಟಿಕೆಗೆ ಜಿಲ್ಲೆಯಲ್ಲಿ ಎಲ್ಲೂ ಹದ ಮಳೆ ಆಗಿಲ್ಲ. ತಂಪು ಗಾಳಿ, ತಂಪು ವಾತಾವರಣ ಇದೆ. ಕೆಲ ಕಡೆ ಆಗಾಗ ಸೋನೆ ಮಳೆ ಮುಖ ತೋರಿಸಿ ಮರೆಯಾಗುತ್ತಿದೆ.

ಕೃಷಿ ಇಲಾಖೆ ಮೂಲಗಳ ಪ್ರಕಾರ ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆ ಪ್ರಕಾರ ಮಳೆ ಆಗಿದೆ. ಆದರೆ, ಬಿತ್ತನೆಗೆ ಯೋಗ್ಯ ರೀತಿ ಮಳೆ ಆಗಿಲ್ಲ. ಜುಲೈ 2ರ ಹೊತ್ತಿಗೆ ವಾಡಿಕೆ ಮಳೆ 197 ಮಿ.ಮೀ ಆಗಬೇಕು. 196 ಮಿ.ಮೀ ಮಳೆ ಆಗಿದೆ ಎನ್ನುತ್ತವೆ ಕೃಷಿ ಇಲಾಖೆ ಮೂಲಗಳು.

2019–20ರ ಮುಂಗಾರು ಹಂಗಾಮಿಗೆ ಒಟ್ಟು 4.14 ಲಕ್ಷ ಹೆಕ್ಟೇರ್ ಪ್ರದೇಶ ಗುರಿ ಹೊಂದಿದ್ದು, ಇಲ್ಲಿಯವರೆಗೆ 11,431 ಹೆಕ್ಟೇರ್ (ಶೇ 2.74) ಬಿತ್ತನೆಯಾಗಿದೆ.

ADVERTISEMENT

ಬಾಡುತ್ತಿರುವ ಪೂರ್ವ ಮುಂಗಾರು ಬೆಳೆಗಳು: ಪೂರ್ವ ಮುಂಗಾರಿನಲ್ಲೂ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬಿತ್ತನೆ ಪ್ರಮಾಣ ಶೇ 50ರಷ್ಟು ಕಡಿಮೆ ಆಗಿತ್ತು. ಕಳೆದ ವರ್ಷ 16,392 ಹೆಕ್ಟೇರ್ ಪ್ರದೇಶದಲ್ಲಿ ಪೂರ್ವ ಮುಂಗಾರು ಬೆಳೆ ಬಿತ್ತನೆಯಾಗಿದ್ದರೆ ಈ ವರ್ಷ 7,300 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿತ್ತು.

ಪೂರ್ವ ಮುಂಗಾರು ಬೆಳೆಗಳಾದ ಹೆಸರು, ಉದ್ದು, ಅಲಸಂದೆ, ಎಳ್ಳು ಬೆಳೆಗಳಲ್ಲಿ ಶೇ 60ರಷ್ಟು ಹೆಸರು ಬೆಳೆ ಬಿತ್ತನೆ ಮಾಡಲಾಗಿತ್ತು. ಮುಂಗಾರು ಪೂರ್ವದಲ್ಲಿ ಅಲ್ಪಾವಧಿಯಲ್ಲಿ ರೈತರ ಕೈಯಲ್ಲಿ ಒಂದಿಷ್ಟು ಕಾಸು ತಂದು ಕೊಡುವ ಬೆಳೆ ಎಂದೇ ಕರೆಯಲಾಗುವ ಈ ಹೆಸರು ಬೆಳೆಯೂ ಕೈಕೊಟ್ಟಿದೆ. ಮುಂಗಾರು ಪೂರ್ವ ಬೆಳೆಗಳು ಬಾಡುತ್ತಿರುವುದರಿಂದ ಮುಂಗಾರಿನ ಶೇಂಗಾ ಬಿತ್ತನೆಯನ್ನಾದರೂ ಮಾಡೋಣ ಎಂದು ರೈತರು ಸಜ್ಜಾಗಿದ್ದರೂ ಮಳೆ ಬರುತ್ತಿಲ್ಲ.

ಜಿಲ್ಲೆಯ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಈ ಜಿಲ್ಲೆಯಲ್ಲಿ ಮಾತ್ರ ಆಗುತ್ತಿಲ್ಲ ಎಂಬ ಆಂತಕ ರೈತರನ್ನು ಕಾಡುತ್ತಿದೆ. ಜುಲೈ ತಿಂಗಳಾಂತ್ಯದವರೆಗೆ ಶೇಂಗಾ ಬಿತ್ತನೆಗೆ ಕಾಲಾವಕಾಶವಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ.

ಇದಕ್ಕಾಗಿ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ, ರಸಗೊಬ್ಬರಗಳನ್ನು ಸಬ್ಸಿಡಿ ದರಗಳಲ್ಲಿ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಕೆಲ ರೈತರು ಬಿತ್ತನೆ ಬೀಜ ಖರೀದಿಸಿದ್ದಾರೆ. ಅನೇಕರು ಅಲ್ಪಸ್ವಲ್ಪ ಮಳೆಯಲ್ಲೇ ಬಿತ್ತನೆ ಮಾಡಿ ಮಳೆರಾಯನ ಮೇಲೆ ಭಾರ ಹಾಕಿರುವುದು ಕಂಡು ಬರುತ್ತಿದೆ.

ಪೂರ್ವ ಮುಂಗಾರಿನಲ್ಲಿ ಬೆಳೆದ ಬೆಳೆ ( ಹೆಕ್ಟೇರ್‌ನಲ್ಲಿ)

ಬೆಳೆ ಬಿತ್ತನೆ (ಹೆಕ್ಟೇರ್‌ನಲ್ಲಿ)
ಹೆಸರು 4956
ಉದ್ದು 715
ಅಲಸಂದೆ 1477
ಎಳ್ಳು 152

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.