ADVERTISEMENT

ಮಧುಗಿರಿ: ‘ಗುಂಯ್‌’ಗುಡುತ್ತಾ ಮನೆ ನುಗ್ಗುವ ಸೊಳ್ಳೆಗಳು

ಸಂಜೆಯಾದರೆ ಸೊಳ್ಳೆ ಹೊಡೆಯುವ ಕಾಯಕ: ಸ್ವಚ್ಛತೆಗಿಲ್ಲ ಆದ್ಯತೆ– ಪಟ್ಟಣ ನಿವಾಸಿಗಳ ಆರೋಪ

ಟಿ.ಪ್ರಸನ್ನಕುಮಾರ್
Published 17 ನವೆಂಬರ್ 2025, 5:54 IST
Last Updated 17 ನವೆಂಬರ್ 2025, 5:54 IST
ಮಧುಗಿರಿ ವಾಲ್ಮೀಕಿ ಬಡಾವಣೆಯಲ್ಲಿ ತೆರೆದ ಚರಂಡಿ
ಮಧುಗಿರಿ ವಾಲ್ಮೀಕಿ ಬಡಾವಣೆಯಲ್ಲಿ ತೆರೆದ ಚರಂಡಿ   

ಮಧುಗಿರಿ: ಪಟ್ಟಣದಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಸಂಜೆಯಾದರೆ ಸಾಕು ‘ಗುಂಯ್‌’ ಎನ್ನುತ್ತಾ ನೂರಾರು ಸಂಖ್ಯೆಯಲ್ಲಿ ಮನೆಗೆ ನುಗ್ಗುವ ಸೊಳ್ಳೆಗಳು ಜನರ ನಿದ್ದೆಗೆಡಿಸಿವೆ. 

ಪಟ್ಟಣದೆಲ್ಲೆಡೆ ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ನೊಣದ ಗಾತ್ರ ಪಡೆದಿವೆ. ನಿತ್ಯ ಸೊಳ್ಳೆ ಹೊಡೆಯುವುದೇ ಜನರಿಗೆ ಸವಾಲಾಗಿದೆ. ಸೊಳ್ಳೆ ನಿಯಂತ್ರಣಕ್ಕೆ ಪುರಸಭೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ದೂರುತ್ತಾರೆ ಪಟ್ಟಣ ನಿವಾಸಿಗಳು.

ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿ, ಸಾರ್ವಜನಿಕ ಆಸ್ಪತ್ರೆ, ಪುರಸಭೆ, ಡಿವೈಎಸ್‌ಪಿ ಕಚೇರಿ, ಶಾಲಾ- ಕಾಲೇಜು ತಹಶೀಲ್ದಾರ್ ಕಚೇರಿ ಸೇರಿದಂತೆ ಬಹುತೇಕ ವಾರ್ಡ್‌ಗಳಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ತಾಲ್ಲೂಕು ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳ ಪಾಡಂತು ಹೇಳತೀರದು. ರೋಗ ನಿವಾರಣೆಗಾಗಿ ಆಸ್ಪತ್ರೆ ದಾಖಲಾದರೆ, ಸೊಳ್ಳೆಗಳ ಕಡಿತದಿಂದ ರೋಗ ಉಲ್ಬಣವಾಗುವ ಆತಂಕ ಎದುರಾಗಿದೆ ಎನ್ನುತ್ತಾರೆ ರೋಗಿಗಳು.

ADVERTISEMENT

ಪಟ್ಟಣದ ದೊಡ್ಡ ದೊಡ್ಡ ಚರಂಡಿಗಳಲ್ಲಿ ಹೂಳು ತುಂಬಿಕೊಂಡು ನೀರು ಸರಾಗವಾಗಿ ಹರಿಯದೆ ಕಸ ಮತ್ತು ಕಡ್ಡಿ ಕಟ್ಟಿಕೊಂಡು ಅನುಪಯುಕ್ತ ಗಿಡಗಳು ಆಳೆತ್ತರ ಬೆಳೆದಿರುವುದರಿಂದ ಸೊಳ್ಳೆಗಳ ಅವಾಸ ಸ್ಥಾನವಾಗಿದೆ. ಸೊಳ್ಳೆಗಳ ಸಂತತಿ ಹೆಚ್ಚಾಗಿ ಜನರ ರಕ್ತ ಹೀರತೊಡಗಿವೆ. 

ಪಟ್ಟಣ ವ್ಯಾಪ್ತಿಯ ಕೆಲವು ಬಡಾವಣೆಯಲ್ಲಿ ಸ್ವಚ್ಛತೆ ಇಲ್ಲವಾಗಿದ್ದು, ಚರಂಡಿಗಳು ಸೊಳ್ಳೆ ಉತ್ಪತ್ತಿ ತಾಣಗಳಾಗಿವೆ. ಕೊಳಚೆ ನೀರನ್ನು ತೆಗೆದು ಸ್ವಚ್ಛ ಮಾಡುವ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ‌ ಎಂಬ ದೂರುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತವೆ. ಕಸ ವಿಲೇವಾರಿ, ತ್ಯಾಜ್ಯ ಸಂಸ್ಕರಣೆಯ ಲೋಪ ಸೊಳ್ಳೆ ಉತ್ಪತ್ತಿಗೆ ಇಂಬು ಕೊಡುತ್ತಿದೆ.

ಪಟ್ಟಣದ ಕೆಲವು ಬಡವಾಣೆಗಳಲ್ಲಿ ಕಸ ಸಂಗ್ರಹ ವಾಹನದ ಸಮಯ ಬದಲಾಗಿದೆ. ಬೆಳಿಗ್ಗೆ 11 ಗಂಟೆ ನಂತರ ಬಂದರೆ ಹಲವು ಮನೆಗಳಲ್ಲಿ ಯಾರೂ ಇಲ್ಲದ ಕಾರಣ ಕಸ ಮನೆಯಲ್ಲಿ ಉಳಿಯುವಂತಾಗಿದೆ. ಹಾಗಾಗಿ ಕೆಲವರು ರಸ್ತೆಗೆ ತ್ಯಾಜ್ಯ ಹಾಕುತ್ತಿದ್ದಾರೆ. ಇದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಿದೆ.

ಪ್ಲಾಸ್ಟಿಕ್‌ ಬಳಕೆ ನಿಷೇಧಿಸಿರುವ ಪುರಸಭೆ ಕ್ರಮ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ. ನೆಪ ಮಾತ್ರಕ್ಕೆ ಆರು ತಿಂಗಳಿಗೊಮ್ಮೆ ಕೆಲ ಅಂಗಡಿಯ ಮೇಲೆ ಅಧಿಕಾರಿಗಳು ದಾಳಿ ಮಾಡಿ ಒಂದಿಷ್ಟು ಪ್ಲಾಸ್ಟಿಕ್ ಕವರ್‌ಗಳನ್ನು ವಶಪಡಿಸಿಕೊಳ್ಳುತ್ತಾರೆ. ಪ್ಲಾಸ್ಟಿಕ್‌ ಬಳಕೆ ಹೆಚ್ಚಾಗಿದ್ದು ಎಲ್ಲೆಂದರಲ್ಲಿ ಎಸೆಯಲಾಗುತ್ತಿದೆ. ಪ್ರತಿ ಬುಧವಾರ ಪಟ್ಟಣದಲ್ಲಿ ಸಂತೆ ನಡೆಯುತ್ತಿದ್ದು ಅತಿ ಹೆಚ್ಚು ಪ್ಲಾಸ್ಟಿಕ್‌ ಉಪಯೋಗಿಸಲಾಗುತ್ತಿದೆ. ರಸ್ತೆಯ ಬದಿಯಲ್ಲಿ ಪ್ಲಾಸ್ಟಿಕ್ ಕವರ್‌ ಹಾಕುತ್ತಿರುವುದರಿಂದ ಹಂದಿ, ನಾಯಿ ಹಾಗೂ ಬಿಡಾಡಿ ದನಗಳಿಗೆ ಆಹಾರವಾಗುವ ಜೊತೆಗೆ ಸೊಳ್ಳೆಗಳ ಉತ್ಪತ್ತಿಗೂ ಕಾರಣವಾಗುತ್ತಿದೆ.

ಪಟ್ಟಣದ ಬಹುತೇಕ ಚರಂಡಿಗಳು ತೆರದ ಸ್ಥಿತಿಯಲ್ಲಿರುವುದರಿಂದ ತ್ಯಾಜ್ಯ ಸೇರಿಕೊಂಡು ದುರ್ವಾಸನೆ ಬೀರುತ್ತಿವೆ. ಜನರು ಮೂಗು ಮುಚ್ಚಿಕೊಂಡು ಸಂಚರಿಸುವ ಸ್ಥಿತಿ ಇದೆ. ತೆರದ ಚರಂಡಿಗಳಿಂದ ಸೊಳ್ಳೆಗಳ ಉತ್ಪತ್ತಿ ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿದೆ. ಡೆಂಗಿ, ಮಲೇರಿಯ ಸೇರಿದಂತೆ ಹಲವು ರೋಗಗಳು ಹರಡುವ ಭೀತಿ ಜನರನ್ನು ಕಾಡತೊಡಗಿದೆ.

ಪಟ್ಟಣದಲ್ಲಿ ನೂರಾರು ಖಾಲಿ ನಿವೇಶನಗಳಿವೆ. ಇಲ್ಲಿ ಅನುಪಯುಕ್ತ ಗಿಡಗಳು ಬೆಳೆದು ಕ್ರಿಮಿ ಕೀಟ ಹಾಗೂ ಸೊಳ್ಳೆಗಳ ಕೇಂದ್ರಗಳಾಗಿವೆ. ಈ ಖಾಲಿ ನಿವೇಶನದ ಅಕ್ಕ- ಪಕ್ಕದ ಮನೆಯವರ ಪಾಡು ಹೇಳತೀರದು. ಸ್ವಚ್ಛ ಮಾಡಿಸುವಂತೆ ನಿವೇಶನದ ಮಾಲೀಕರಿಗೆ, ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ನಿವಾಸಿಗಳು.

ಫಾಗಿಂಗ್ ಯಂತ್ರ, ಜೆಸಿಬಿ ಸೇರಿದಂತೆ ಹಲವು ಯಂತ್ರಗಳು ಇದ್ದರೂ ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲ ಎಂದು ಜನರು ದೂರಿದ್ದಾರೆ. ಚರಂಡಿಗಳಿಗೆ ಬ್ಲೀಚಿಂಗ್ ಪೌಡರ್ ಸಿಂಪಡಿಸಿ ಎಷ್ಟೋ ವರ್ಷಗಳು ಕಳದಿವೆ. ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡುವುದನ್ನು ಪುರಸಭೆ ಅಧಿಕಾರಿಗಳು ಮರೆತುಬಿಟ್ಟಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. 

ಮಧುಗಿರಿ ಸರ್ಕಾರಿ ಹಿರಿಯ ಬಾಲಕರ ಪ್ರಾಥಮಿಕ ಶಾಲೆ ಪಕ್ಕದಲ್ಲಿರುವ ಚರಂಡಿಯಲ್ಲಿ ಬೆಳೆದಿರುವ ಗಿಡಗಳು 
ಮಧುಗಿರಿಯ ಖಾಲಿ ನಿವೇಶನದಲ್ಲಿ ಬೆಳೆದಿರುವ ಅನುಪಯುಕ್ತ ಗಿಡಗಳು
ಅಶ್ವಥಪ್ಪ 
ಸುಬ್ಬಣ್ಣ 

ದೊಡ್ಡ ಚರಂಡಿಗಳಿಗೆ ಹೊಂದಿಕೊಂಡಿರುವ ಬಡಾವಣೆಗಳಲ್ಲಿ ಸೊಳ್ಳೆಗಳ ಕಾಟ ಮಿತಿ ಮೀರಿದೆ. ಕಾಂಕ್ರೀಟ್ ಇಲ್ಲದೆ ಬಾಯ್ತೆರೆದುಕೊಂಡಿರುವ ಚರಂಡಿಗಳಿಂದಾಗಿ ದುರ್ವಾಸನೆ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. -ಅಶ್ವಥಪ್ಪ ವಾಲ್ಮೀಕಿ ಬಡಾವಣೆ

ಸೊಳ್ಳೆಗಳ ನಿಯಂತ್ರಣಕ್ಕೆ ಅಧಿಕಾರಿಗಳು ಕಡಿವಾಣ ಹಾಕದಿದ್ದರೆ ಅನಾರೋಗ್ಯದ ಸಾಧ್ಯತೆ ಹೆಚ್ಚು. ಅಧಿಕಾರಿಗಳು ಸ್ವಚ್ಛತೆಗೆ ಆದ್ಯತೆ ‌ನೀಡಬೇಕು.

-ಸುಬ್ಬಣ್ಣ ಮಧುಗಿರಿ

ಪಟ್ಟಣದ ಬಹುತೇಕ ಖಾಲಿ ನಿವೇಶನಗಳಲ್ಲಿ ಅನುಪಯುಕ್ತ ಗಿಡಗಳು ಹಾಗೂ ಪಾರ್ಥೇನಿಯಂ ಬೆಳೆದಿರುವುದರಿಂದ ಸೊಳ್ಳೆಗಳ ಹಾವಳಿ ಹೆಚ್ಚಾಗಿವೆ. ಮನೆಯೊಳಗೆ ಹಾವುಗಳು ಪ್ರವೇಶಿಸುತ್ತಿವೆ.

- ಗಿರೀಶ್ ಮಧುಗಿರಿ

ಪಟ್ಟಣದಲ್ಲಿ ಚರಂಡಿಗಳನ್ನು ಸ್ವಚ್ಛ ಮಾಡಿ ಅನುಪಯುಕ್ತ ಗಿಡಗಳನ್ನು ತೆರವುಗೊಳಿಸಬೇಕು. ಸೊಳ್ಳೆಗಳ ನಿಯಂತ್ರಣಕ್ಕೆ ಪುರಸಭೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

- ಗೊಟೋರು ಶಿವಪ್ಪ ಆಡಳಿತಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.