ADVERTISEMENT

ಮುಗಿಯದ ಪುರಸಭೆ ಮುಖ್ಯಾಧಿಕಾರಿ ವರ್ಗಾವಣೆ ಪ್ರಹಸನ

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 13:42 IST
Last Updated 26 ಜುಲೈ 2024, 13:42 IST

ಕುಣಿಗಲ್: ಪುರಸಭೆ ಮುಖ್ಯಾಧಿಕಾರಿ ವರ್ಗಾವಣೆಯ ಹಾವು ಏಣಿ ಆಟದಲ್ಲಿ ಹದಿನೈದು ದಿನಗಳ ಹಿಂದಷ್ಟೇ ಶಾಸಕ ಡಾ.ರಂಗನಾಥ್ ಮುತುವರ್ಜಿ ವಹಿಸಿ ಮಂಜುಳಾ ಅವರನ್ನು ಮುಖ್ಯಾಧಿಕಾರಿ ಹುದ್ದೆಗೆ ನೇಮಿಸಿದ್ದರು. ಆದರೆ ಹಿಂದಿನ ಮುಖ್ಯಾಧಿಕಾರಿ ಶಿವಪ್ರಸಾದ್ ನ್ಯಾಯಾಲಯದ ಮೊರೆಹೋಗಿ ಆದೇಶ ತಂದು ಮತ್ತೆ ನಾಲ್ಕನೇ ಬಾರಿಗೆ ಮುಖ್ಯಾಧಿಕಾರಿಯಾಗಿ ಶುಕ್ರವಾರ ಅಧಿಕಾರ ವಹಿಸಿಕೊಂಡರು.

ಲೋಕಸಭಾ ಚುನಾವಣೆ ಸಮಯದಲ್ಲಿ ಆಗಿನ ಮುಖ್ಯಾಧಿಕಾರಿಯಾಗಿದ್ದ ಶಿವಪ್ರಸಾದ್ ಅವರನ್ನು ಹಾವೇರಿ ಜಿಲ್ಲೆಯ ಅಣ್ಣೆಗೆರಿಗೆ ವರ್ಗಾವಣೆ ಮಾಡಲಾಗಿತ್ತು. ಅಣ್ಣೆಗೆರಿಯ ಗದ್ದಿಗೌಡರವನ್ನು ಕುಣಿಗಲ್ ಪುರಸಭೆಗೆ ವರ್ಗಾವಣೆ ಮಾಡಲಾಗಿತ್ತು. ಈ ಮಧ್ಯೆ ಮಂಜುಳಾ ಅವರು ಮುಖ್ಯಾಧಿಕಾರಿಯಾಗಿ ವರ್ಗವಾಗಿ ಬಂದಿದ್ದರು.

ಲೋಕಸಭಾ ಚುನಾವಣೆ ನಂತರ ಸರ್ಕಾರದ ಯಾವುದೇ ಆದೇಶಗಳು ಇಲ್ಲದೆ ಶಿವಪ್ರಸಾದ್ ಬಂದು ಅಧಿಕಾರ ವಹಿಸಿಕೊಂಡಿದ್ದರು. ಈ ಬಗ್ಗೆ ಮಂಜುಳಾ ಆಕ್ಷೇಪ ವ್ಯಕ್ತಪಡಿಸಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದ ಬಳಿಕ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸುವುದಾಗಿ ತಿಳಿಸಿ ಹೋಗಿದ್ದ ಶಿವಪ್ರಸಾದ್ ನ್ಯಾಯಾಲಯದ ಮೊರೆ ಹೋಗಿ ಆದೇಶ ತಂದು ಅಧಿಕಾರದಲ್ಲಿ ಮುಂದುವರೆದಿದ್ದರು.

ADVERTISEMENT

ಈ ಬಗ್ಗೆ ಅಸಮಾದಾನಗೊಂಡ ಶಾಸಕ ಡಾ.ರಂಗನಾಥ್ ಮಧ್ಯಪ್ರವೇಶಿಸಿ ಸಂಬಂಧಪಟ್ಟ ಸಚಿವರು, ಅಧಿಕಾರಿಗಳೊಂದಿಗೆ ಚರ್ಚಿಸಿ ಮಂಜುಳಾ ಅವರನ್ನು ಅಧಿಕೃತ ವರ್ಗಾವಣೆ ಮೂಲಕ ಮುಖ್ಯಾಧಿಕಾರಿ ಹುದ್ದೆಗೆ ಕ್ರಮ ತೆಗೆದುಕೊಂಡಿದ್ದರು.

ಶಾಸಕರ ಕ್ರಮದಿಂದ ಸಿಟ್ಟಿಗೆದ್ದ ಶಿವಪ್ರಸಾದ್ ಮತ್ತೆ ನ್ಯಾಯಾಲಯದ ಮೊರೆ ಹೋಗಿ ಆದೇಶ ತಂದು ಶುಕ್ರವಾರ ಬೆಳಿಗ್ಗೆ ಮುಖ್ಯಾಧಿಕಾರಿ ಮಂಜುಳಾ ಜಿಲ್ಲಾಧಿಕಾರಿ ಸಭೆಯಲ್ಲಿ ಭಾಗವಹಿಸಲು ತೆರಳಿದ ಸಮಯದಲ್ಲಿ ಮುಖ್ಯಾಧಿಕಾರಿಯಾಗಿ ಸ್ವಯಂ ಅಧಿಕಾರ ಸ್ವೀಕರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.