ADVERTISEMENT

ಗುಬ್ಬಿ: ‘ನಮ್ಮೂರು ನಮ್ಮ ಕವಿ’ ಅಭಿಯಾನ

ಸ್ಥಳೀಯ ಸಾಹಿತಿಗಳನ್ನು ಪರಿಚಯಿಸುವ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 31 ಜುಲೈ 2024, 16:29 IST
Last Updated 31 ಜುಲೈ 2024, 16:29 IST
ಗುಬ್ಬಿ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಮ್ಮೂರು-ನಮ್ಮ ಕವಿ ಕಾರ್ಯಕ್ರಮ ನಡೆಯಿತು
ಗುಬ್ಬಿ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಮ್ಮೂರು-ನಮ್ಮ ಕವಿ ಕಾರ್ಯಕ್ರಮ ನಡೆಯಿತು   

ಗುಬ್ಬಿ: ಸ್ಥಳೀಯ ಸಾಹಿತಿಗಳನ್ನು ಪರಿಚಯಿಸಿಕೊಡುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕ ‘ನಮ್ಮೂರು ನಮ್ಮ ಕವಿ’ ವಿಶೇಷ ಅಭಿಯಾನ ಪ್ರಾರಂಭಿಸಿದೆ.

ಪಟ್ಟಣದಲ್ಲಿ ಬುಧವಾರ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿವೃತ್ತ ಡಿಡಿ ಎಚ್.ಕೆ. ನರಸಿಂಹಮೂರ್ತಿ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಗುಬ್ಬಿಯ ಸಾಹಿತಿಗಳು ಪ್ರಾಚೀನ ಕಾಲದಿಂದ ಈವರೆಗೆ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತ ಬಂದಿದ್ದಾರೆ. ಇಂದಿನ ಮಕ್ಕಳಿಗೆ ಅಂತಹ ಮಹಾನ್ ಸಾಧಕರ ಪರಿಚಯಿಸಿ ಅವರ ಪುಸ್ತಕಗಳ ಓದುವಂತೆ ಜಾಗೃತಿ ಮೂಡಿಸಬೇಕಿದೆ ಎಂದು ತಿಳಿಸಿದರು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಯತೀಶ್ ಮಾತನಾಡಿ, ಗುಬ್ಬಿಯ ಮಲ್ಲಣಾರ್ಯ, ನಿಟ್ಟೂರಿನ ನಂಜಪ್ಪ ಅವರಂತಹ ಮೇರು ಸಾಹಿತಿಗಳ ಜೊತೆ  ರಂಗಭೂಮಿ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ವಿಶ್ವಮಟ್ಟದಲ್ಲಿ ಗುಬ್ಬಿಯನ್ನು ಗುರುತಿಸುವಂತೆ ಮಾಡಿದ ಗುಬ್ಬಿ ವೀರಣ್ಣ ಅವರನ್ನು ಎಂದಿಗೂ ಮರೆಯುವಂತಿಲ್ಲ. ಪರಿಷತ್ತಿನ ಈ ಅಭಿಯಾನದ ಜೊತೆ ಎಲ್ಲರೂ ಸಹಕಾರ ನೀಡಿದಲ್ಲಿ ಅಭಿಯಾನವನ್ನು ಯಶಸ್ವಿಗೊಳಿಸಲು ಸಾಧ್ಯ ಎಂದು ಹೇಳಿದರು.

ADVERTISEMENT

ಪ್ರಾಂಶುಪಾಲ ಮಂಜುನಾಥ್ ಎಂ.ಕೆ. ಮಾತನಾಡಿ, ತಾಲ್ಲೂಕು ಸಾಹಿತ್ಯ, ರಂಗಭೂಮಿ, ಜನಪದ ಇತ್ಯಾದಿ ಕ್ಷೇತ್ರಗಳಲ್ಲಿ ತನ್ನದೇ ಆದ ಇತಿಹಾಸ ಹೊಂದಿದೆ. ಇದರಿಂದಾಗಿ ತಾಲ್ಲೂಕಿನ ಘನತೆ ಹೆಚ್ಚಲಿದೆ. ಮಕ್ಕಳು ಓದಿನ ಜೊತೆ ಸಾಹಿತ್ಯ, ಕಲೆಗಳ ಬಗ್ಗೆಯೂ ಆಸಕ್ತಿ ಮೂಡಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.

ಉಪನ್ಯಾಸಕ ಲೋಕೇಶ್ ಮಂಜುನಾಥ್, ಜ್ಯೋತಿ ದೊಡ್ಡಯ್ಯ, ಅಂಬಿಕಾ, ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.