ADVERTISEMENT

ತಿಪಟೂರಿನಲ್ಲಿ ನಂದಿನಿ ಕ್ಷೀರ ಭವನ ಉದ್ಘಾಟನೆ

ರೈತ ಉತ್ಪನ್ನಗಳಿಗೆ ರೈತರೇ ದರ ನಿಗದಿ ಮಾಡುವ ಶಕ್ತಿ ಇಲ್ಲದಂತಾಗಿದೆ: ರಾಜಣ್ಣ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2025, 14:16 IST
Last Updated 23 ಮಾರ್ಚ್ 2025, 14:16 IST
ತಿಪಟೂರಿನ ಎಪಿಎಂಸಿ ಆವರಣದಲ್ಲಿ ನಂದಿನಿ ಕ್ಷೀರ ಭವನ ಉದ್ಘಾಟಿಸಲಾಯಿತು
ತಿಪಟೂರಿನ ಎಪಿಎಂಸಿ ಆವರಣದಲ್ಲಿ ನಂದಿನಿ ಕ್ಷೀರ ಭವನ ಉದ್ಘಾಟಿಸಲಾಯಿತು   

ತಿಪಟೂರು: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ₹2.25 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ನಂದಿನಿ ಕ್ಷೀರ ಭವನವನ್ನು ರೈಲ್ವೆ ಮತ್ತು ಜಲಶಕ್ತಿ ಯೋಜನೆ ರಾಜ್ಯಖಾತೆ ಸಚಿವ ವಿ.ಸೋಮಣ್ಣ, ಗೃಹ ಸಚಿವ ಜಿ.ಪರಮೇಶ್ವರ, ಸಹಕಾರ ಸಚಿವ ಕೆ.ಎನ್.ರಾಜಣ್ಣ, ತುಮುಲ್ ಅಧ್ಯಕ್ಷ ಎಚ್.ವಿ.ವೆಂಕಟೇಶ್, ಶಾಸಕ.ಕೆ.ಷಡಕ್ಷರಿ ಉದ್ಘಾಟಿಸಿದರು.

ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಪರಮೇಶ್ವರ, ಹಾಲು ಉತ್ಪಾದನೆ ಶಿಸ್ತಿನಿಂದ ನಡೆಯುತ್ತಿರುವ ಉದ್ಯಮವಾಗಿದ್ದು, ದೇಶದ ಆರ್ಥಿಕ ಪರಿಸ್ಥಿತಿ ಜೊತೆಗೆ  ಜನರ ನಿತ್ಯದ ಬದುಕೂ ಸುಧಾರಿಸಿದೆ. ಆಡಳಿತ, ಹಣಕಾಸು, ರೈತರ ದೃಷ್ಟಿಯಿಂದ ಅನುಕೂಲವಾಗಿದೆ. ಕ್ಷೀರ ಭಾಗ್ಯ ಯೋಜನೆ ಮೂಲಕ ರಾಜ್ಯದಲ್ಲಿ 65 ಲಕ್ಷ ಮಕ್ಕಳಿಗೆ ಹಾಲು ನೀಡುವ ಮೂಲಕ ಪೌಷ್ಟಿಕಾಂಶದ ಜೊತೆಗೆ ರಾಗಿ ಮಾಲ್ಟ್ ನೀಡಲಾಗುತ್ತಿದೆ. ಸರ್ಕಾರದ ₹5 ಪ್ರೋತ್ಸಾಹಧನದ ಜೊತೆ ತುಮುಲ್ ಮಂಡಳಿಯಿಂದ ₹2 ಸೇರಿಸಿ ನೀಡಲಾಗುವುದು ಎಂದರು.

ಹಾಲಿನ ದರವು ಏರಳಿತ ಕಂಡಿದ್ದು, ರಾಜ್ಯ ಸರ್ಕಾರ ಹಾಗೂ ಕೆಎಂಎಫ್ ಸಹಭಾಗಿತ್ವದಲ್ಲಿ ಶೀತಲೀಕರಣ ಕೇಂದ್ರ ಸ್ಥಾಪಿಸಲಾಗುವುದು ಎಂದರು.

ADVERTISEMENT

ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ರೈತರಿಂದ ಹಾಲಿನ ಉತ್ಪಾದನೆ ಹೆಚ್ಚಳವಾಗುತ್ತಿದ್ದರೂ ಹಾಲಿನ ದರ ಉತ್ಪಾದಕರಿಗೆ ಸಮಾಧಾನಕರವಾಗಿ ನೀಡಲು ಸಾಧ್ಯವಾಗುತ್ತಿಲ್ಲ ಎಂಬ ಅಸಮಾಧಾನವಿದೆ. ಒಂದು ಬಾಟಲ್ ನೀರಿನ ಬೆಲೆ ಹಾಲಿನ ಬೆಲೆಗೆ ಇಲ್ಲದಾಗಿದೆ. ದೇಶದಲ್ಲಿ ರೈತ ಉತ್ಪಾದಿಸುವ ವಸ್ತುಗಳಿಗೆ ರೈತರೇ ದರ ನಿಗದಿ ಮಾಡುವ ಶಕ್ತಿ ಇಲ್ಲದಂತಾಗಿದೆ ಎಂದು ಹೇಳಿದರು.

ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರ ಚುನಾವಣೆಯಲ್ಲಿ ಮೀಸಲಾತಿ ಇರುವಂತೆ ಸಹಕಾರ ಕ್ಷೇತ್ರದಲ್ಲಿಯೂ ಮೀಸಲಾತಿ ನಿಗದಿಯಾಗಬೇಕು ಎನ್ನುವುದು ಸರ್ಕಾರದ ಚಿಂತನೆಯಾಗಿದ್ದು, ಮುಂದಿನ ದಿನಗಳಲ್ಲಿ ಜಾರಿಗೆ ತರಲಾಗುವುದು. ರಾಸು ವಿಮೆ, ಮೊಬೈಲ್, ಡಾಕ್ಟರ್ ಹಾಗೂ ಗುಣಮಟ್ಟದ ಪಶು ಆಹಾರವನ್ನು ನೀಡುವಂತೆ ಸೂಚಿಸಿದರು.

ತುಮುಲ್‌ ನಿರ್ದೇಶಕ ಎಂ.ಕೆ.ಪ್ರಕಾಶ್, ಶಾಸಕ ಕೆ.ಷಡಕ್ಷರಿ, ತುಮುಲ್ ಅಧ್ಯಕ್ಷ ಎಚ್.ವಿ.ವೆಂಕಟೇಶ್, ನಿರ್ದೇಶಕರಾದ ಮಹಲಿಂಗಯ್ಯ, ಕೃಷ್ಣಕುಮಾರ್, ಶಿವಪ್ರಕಾಶ್, ನಂಜೇಗೌಡ, ಎಸ್.ಆರ್.ಗೌಡ, ಶ್ರೀನಿವಾಸ್, ಚಂದ್ರಶೇಖರ್‌ರೆಡ್ಡಿ, ವ್ಯವಸ್ಥಾಪಕ ನಿರ್ಧೇಶಕ ಶ್ರೀನಿವಾಸ್, ಜಿಲ್ಲಾಧಿಕಾರಿ ಶುಭಕಲ್ಯಾಣ, ಸಿಇಒ ಪ್ರಭು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆಶೋಕ್, ಸಹಕಾರ ಇಲಾಖೆಯ ದಿನಕರ್, ಉಮೇಶ್, ಹರೀಶ್ ಹಾಗೂ ನಿಖಿಲ್ ರಾಜಣ್ಣ, ಸುರೇಶ್ ಹಾಜರಿದ್ದರು.

ತಿಪಟೂರಿನ ಎಪಿಎಂಸಿ ಆವರಣದಲ್ಲಿ ನಂದಿನಿ ಕ್ಷೀರ ಭವನ ಉದ್ಘಾಟಿಸಲಾಯಿತು
ತಿಪಟೂರಿನ ಎಪಿಎಂಸಿ ಆವರಣದಲ್ಲಿ ನಂದಿನಿ ಕ್ಷೀರ ಭವನ ಉದ್ಘಾಟಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.