ADVERTISEMENT

ಕುಣಿಗಲ್ | ಬಾಡಿಗೆ ಕಟ್ಟಡದಲ್ಲಿನ ಶಾಲೆಗಳ ನಿರ್ಲಕ್ಷ್ಯ

ಟಿ.ಎಚ್.ಗುರುಚರಣ್ ಸಿಂಗ್
Published 6 ಜನವರಿ 2024, 6:39 IST
Last Updated 6 ಜನವರಿ 2024, 6:39 IST
<div class="paragraphs"><p>ಕುಣಿಗಲ್ ತಾಲ್ಲೂಕು ಹುಲಿಯೂರುದುರ್ಗ ಹೇಮಗಿರಿ ಬೆಟ್ಟದ ತಪ್ಪಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸಂಪರ್ಕ ರಸ್ತೆ ಇಲ್ಲ</p></div>

ಕುಣಿಗಲ್ ತಾಲ್ಲೂಕು ಹುಲಿಯೂರುದುರ್ಗ ಹೇಮಗಿರಿ ಬೆಟ್ಟದ ತಪ್ಪಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸಂಪರ್ಕ ರಸ್ತೆ ಇಲ್ಲ

   

ಕುಣಿಗಲ್: ಬಡಮಕ್ಕಳ ಕಲಿಕೆಗೆ ವರದಾನವಾಗಿರುವ ತಾಲ್ಲೂಕಿನ ವಸತಿ ಶಾಲೆಗಳಲ್ಲಿ ಸ್ವಂತ ಕಟ್ಟಡವಿರುವ ಶಾಲೆಗಳಲ್ಲಿ ಮೂಲಸೌಕರ್ಯ ಸಮಾಧಾನಕರವಾಗಿದೆ. ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಶಾಲೆಗಳಲ್ಲಿನ ವ್ಯವಸ್ಥೆ ಇನ್ನಷ್ಟು ಸುಧಾರಣೆಯಾಗಬೇಕಿದೆ.

ಯಡೆಯೂರು ಹೋಬಳಿ ಮಲ್ಲನಾಯಕನಹಳ್ಳಿಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಹುಲಿಯೂರು ದುರ್ಗ ಹೋಬಳಿ ಹೇಮಗಿರಿ ಬೆಟ್ಟದ ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕೊತ್ತಗೆರೆ ಹೋಬಳಿ ವಡ್ಡರಕುಪ್ಪೆ ಇಂದಿರಾಗಾಂಧಿ ವಸತಿ ಶಾಲೆ ಮತ್ತು ಹುತ್ರಿದುರ್ಗ ಹೋಬಳಿಯ ಬೆಟ್ಟಹಳ್ಳಿ ಮಠ ಬಳಿಯ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಗಳಲ್ಲಿ ನಿಗದಿಯಾಗಿರುವ 250 ಸೀಟ್‌ಗಳಿಗೆ ಶೇ 90ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಕೆಯಲ್ಲಿ ತೊಡಗಿದ್ದಾರೆ.

ADVERTISEMENT

ಮಲ್ಲನಾಯಕನಹಳ್ಳಿ ಮೊರಾರ್ಜಿ ದೇಸಾಯಿ ಶಾಲೆ ವಿಶಾಲವಾದ 17 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿದೆ. ಕಟ್ಟಡ ನಿರ್ಮಾಣವಾಗಿ 15 ವರ್ಷವಾಗಿರುವ ಕಾರಣ ನಿರ್ವಹಣೆ ಕೊರತೆಯಿಂದಾಗಿ ಶಿಥಿಲಾವಸ್ಥೆ ತಲುಪುತ್ತಿದೆ. ಸುಣ್ಣ, ಬಣ್ಣ ಕಾಣದೆ, ಸಕಾಲಕ್ಕೆ ದುರಸ್ತಿಯಾಗದೆ ಕಟ್ಟಡ ಹದಗೆಡುತ್ತಿದೆ. ಮಳೆಗಾಲದಲ್ಲಿ ಸೋರುತ್ತಿದೆ. ಕಾಯಂ ಶಿಕ್ಷಕರಿಲ್ಲದ ಕಾರಣ ಅತಿಥಿ ಶಿಕ್ಷಕರನ್ನು ಅವಲಂಬಿಸಲಾಗಿದೆ.

ಐದು ವರ್ಷಗಳಿಂದ ಇದೇ ಕಟ್ಟಡದಲ್ಲಿ ಇಂದಿರಾಗಾಂಧಿ ವಸತಿ ಶಾಲೆಯೂ ಸಂಯುಕ್ತವಾಗಿ ನಡೆಯುತ್ತಿದೆ. 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಅವ್ಯವಸ್ಥೆಯ ಆಗರವಾಗಿದೆ. ಇತ್ತೀಚೆಗೆ ಇದನ್ನು ಕೊತ್ತಗೆರ ಹೋಬಳಿ ವಡ್ಡರಕುಪ್ಪೆ ಕಲ್ಯಾಣ ಮಂಟಪಕ್ಕೆ ಸ್ಥಳಾಂತರಿಸಲಾಗಿದೆ. ಆದಾಗ್ಯೂ ದುರಸ್ತಿ ಅನಿವಾರ್ಯವಾಗಿದೆ.

ಹುಲಿಯೂರುದುರ್ಗ ಹೋಬಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಹ ವಿಶಾಲ ಪ್ರದೇಶದಲ್ಲಿದ್ದರೂ, ತಲುಪಲು ರಸ್ತೆ ಇಲ್ಲ. ವಿದ್ಯಾರ್ಥಿಗಳಿಗೆ ಅಗತ್ಯ ಸಾಮಾಗ್ರಿ ವಿತರಣೆಯಲ್ಲಿ ಕೊರತೆಯಾಗಿದ್ದು, ( ಬೆಡ್, ಮಂಚ, ಡೈನಿಂಗ್ ಟೇಬಲ್) ಸರಿದೂಗಿಸುವ ಪ್ರಯತ್ನ ನಡೆಯುತ್ತಿದೆ.

ಬೆಟ್ಟಹಳ್ಳಿ ಮಠದ ಶಾಲೆಗಳಲ್ಲಿ ಬಾಡಿಗೆ ಕೊಠಡಿಯಲ್ಲಿ ನಡೆಯುತ್ತಿರುವ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಮೂಲ ಸೌಕರ್ಯಗಳ ಕೊರತೆ ನೀಗಿಸುವ ಪ್ರಯತ್ನ ನಡೆಯುತ್ತಿದ್ದರೂ, ಸ್ವಂತ ಕಟ್ಟಡಗಳಲ್ಲಿ ಪಡೆಯುತ್ತಿರುವ ಸೌಕರ್ಯಗಳು ಸಿಗುತ್ತಿಲ್ಲ.

ಕೊತ್ತಗೆರೆ ಹೋಬಳಿ ಇಂದಿರಾಗಾಂಧಿ ವಸತಿ ಶಾಲೆ ಪ್ರಸಕ್ತ ಸಾಲಿನಿಂದ ವಡ್ಡರಕುಪ್ಪೆಯ ಕಲ್ಯಾಣ ಮಂಟಪದಲ್ಲಿ ಪ್ರಾರಂಭವಾಗಿದೆ. ಮೂಲಸೌಕರ್ಯದಲ್ಲಿ ಸುಧಾರಣೆ ಯಾಗಬೇಕಿದೆ. ಮಕ್ಕಳಿಗೆ ಮಂಚ, ಬೆಡ್‌ ಸರಬರಾಜಾಗದ ಕಾರಣ ಚಾಪೆ ಬಳಕೆಯಾಗುತ್ತಿದೆ. ಚಳಿಗಾಲ ವಾದ್ದರಿಂದ ಮಂಚ, ಬೆಡ್ ಮತ್ತು ಬ್ಲಾಂಕೆಟ್‌ ಅಗತ್ಯವಿದೆ ಎನ್ನುತ್ತಾರೆ ಪೋಷಕರು.

ಸ್ವಂತ ಕಟ್ಟಡಗಳಲ್ಲಿ ನಡೆಯುತ್ತಿರುವ ವಸತಿ ಶಾಲೆಗಳಿಗಿರುವ ಸೌಲಭ್ಯ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಶಾಲೆಗಳಿಗಿಲ್ಲ. ಸ್ವಂತ ಕಟ್ಟಡದ ಶಾಲೆಗಳಲ್ಲಿ ಪ್ರಯೋಗಾಲಯ ಮತ್ತು ಕಂಪ್ಯೂಟರ್ ಕಲಿಕೆಗೂ ವ್ಯವಸ್ಥೆ ಇದೆ. ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಶಾಲೆಗಳಲ್ಲಿಯೂ ಪ್ರಯೋಗಾಲಯ ಮತ್ತು ಕಂಪ್ಯೂಟರ್ ಶಿಕ್ಷಣ ವ್ಯವಸ್ಥೆ ಮಾಡಬೇಕು ಎಂದು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.

ತಾಲ್ಲೂಕಿನ ವಸತಿ ಶಾಲೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆತು ಉತ್ತಮ ಫಲಿತಾಂಶ ಪಡೆಯುತ್ತಿದ್ದು, ಪಟ್ಟಣದ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುತ್ತಿವೆ. ವಸತಿ ಶಾಲೆಗಳ ಬಗ್ಗೆ ಜಾಗೃತಿ ಕಾ‌ರ್ಯಕ್ರಮ ನಡೆದು, ಹೆಚ್ಚಿನ ಒತ್ತು ನೀಡಿದಾಗ ವಸತಿ ಶಾಲೆಗಳ ಉದ್ದೇಶ ಸಾಕಾರವಾಗುತ್ತದೆ ಎನ್ನುವುದು ಪೋಷಕರ ಅಭಿಪ್ರಾಯ.

ಶೀಘ್ರ ಕಟ್ಟಡ ನಿರ್ಮಾಣಕ್ಕೆ ಮನವಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಹುತ್ರಿದುರ್ಗ ಹೋಬಳಿ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಗೆ ಚೌಡನಕುಪ್ಪೆ ಬಳಿ, ಕೊತ್ತಗೆರೆ ಹೋಬಳಿ ಇಂದಿರಾ ಗಾಂದಿ ವಸತಿ ಶಾಲೆಗೆ ಸೂಳೆಕುಪ್ಪೆ (ಸುಂದರಕುಪ್ಪೆ ಬಳಿ) ಜಾಗ ಮಂಜೂರಾಗಿದ್ದು, ಶೀಘ್ರ ಕಟ್ಟಡ ನಿರ್ಮಾಣದತ್ತ ಜನಪ್ರತಿನಿಧಿಗಳು ಗಮನಹರಿಸಬೇಕು ಎನ್ನುತ್ತಾರೆ ಸ್ಥಳೀಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.