ADVERTISEMENT

ಪಾವಗಡ | ಸೋಲಾರ್ ಪಾರ್ಕ್‌ಗೆ ಜಮೀನು ನೀಡಿದ್ದ ರೈತರ ನಿರ್ಲಕ್ಷ್ಯ

ಇಂಧನ ಸಚಿವ ಕೆ.ಜೆ. ಜಾರ್ಜ್ ಜೊತೆ ಸಂವಾದ ನಡೆಸಲು ಸಿಗದ ಅವಕಾಶ: ಆರೋಪ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2024, 13:29 IST
Last Updated 19 ಮಾರ್ಚ್ 2024, 13:29 IST

ಪಾವಗಡ: ತಾಲ್ಲೂಕಿನ ಸೋಲಾರ್ ಪಾರ್ಕ್‌ಗೆ ಶುಕ್ರವಾರ ಇಂಧನ ಸಚಿವ ಕೆ.ಜೆ. ಜಾರ್ಜ್ ಭೇಟಿ ನೀಡಿದ್ದ ವೇಳೆ ರೈತರೊಂದಿಗೆ ಸಂವಾದ ನಡೆಸಲು ಅವಕಾಶ ನೀಡದೆ ರೈತರ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಶಕ್ತಿಸ್ಥಳ ರೈತರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಪಿ ಸಾಂಬಸದಾಶಿವರೆಡ್ಡಿ ಆರೋಪಿಸಿದ್ದಾರೆ.

ಸಚಿವರ ಪ್ರವಾಸ ವೇಳಾಪಟ್ಟಿಯಲ್ಲಿ ರೈತರೊಂದಿಗೆ ಸಂವಾದ ಕಾರ್ಯಕ್ರಮ ಇತ್ತು. ಸೋಲಾರ್ ಪಾರ್ಕ್‌ಗೆ ಜಮೀನು ನೀಡಿದ್ದ ನೂರಾರು ರೈತರನ್ನು ಸಚಿವರಿಗೆ ಅಹವಾಲು ಸಲ್ಲಿಸಲು, ಸಮಸ್ಯೆ ಹೇಳಿಕೊಳ್ಳಲು ಅವಕಾಶ ನೀಡುವುದಾಗಿ ಅಧಿಕಾರಿಗಳು ಆಹ್ವಾನ ನೀಡಿದ್ದರು. ಆದರೆ ಕಾರ್ಯಕ್ರಮ ಕೇವಲ ಭಾಷಣಕ್ಕೆ ಸೀಮಿತವಾಯಿತು. ರೈತರೊಂದಿಗೆ ಸಂವಾದ ಮೊಟಕುಗೊಳಿಸಿ ಕಾರ್ಯಕ್ರಮ ಮುಕ್ತಾಯಗೊಳಿಸುವ ಮೂಲಕ ರೈತರ ಬಗ್ಗೆ ತಾತ್ಸಾರ ಮನೋಭಾವ ವ್ಯಕ್ತಪಡಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ದೂರಿದರು.

ರೈತರು ತಿರುಮಣಿ, ರಾಯಚೆರ್ಲು, ಬಳಸಮುದ್ರ, ಅಚ್ಚಮ್ಮನಹಳ್ಳಿ ಸೇರಿದಂತೆ ಈ ಭಾಗದ ಗ್ರಾಮಗಳಿಗೆ ರಸ್ತೆ, ಮೂಲಸೌಕರ್ಯ, ಸ್ಥಳೀಯರಿಗೆ ಉದ್ಯೋಗ, ಶಾಲೆಗಳಲ್ಲಿ ಶಿಕ್ಷಕರ ಅಭಾವ, ಆಸ್ಪತ್ರೆಗೆ ವೈದ್ಯರು, ಸಿಬ್ಬಂದಿ ನಿಯೋಜನೆ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಸಂವಾದದಲ್ಲಿ ಸಚಿವರ ಗಮನ ಸೆಳೆಯಬೇಕು ಎಂದು ಗಂಟೆಗಟ್ಟಲೆ ಕಾದು ಕುಳಿತಿದ್ದರು. ಸಂವಾದ ಮೊಟಕುಗೊಳಿಸಿದ್ದರಿಂದ ರೈತರು ಬೇಸರದಿಂದ ಹಿಂದಿರುಗಬೇಕಾಯಿತು. ಕುರ್ಚಿಗಳು ಖಾಲಿ ಇದ್ದರೆ, ಭಾಷಣ ಕೇಳುವವರು ಇಲ್ಲದಿದ್ದರೆ ಕಾರ್ಯಕ್ರಮ ಯಶಸ್ವಿಯಾಗುವುದಿಲ್ಲ ಎಂಬ ಉದ್ದೇಶದಿಂದ ರೈತರನ್ನು ಕರೆಸಿಕೊಳ್ಳಲಾಗಿತ್ತೇ ಹೊರತು ಸಮಸ್ಯೆ ಬಗೆಹರಿಸುವುದಕ್ಕಲ್ಲ. ಇಂತಹ ಮನೋಭಾವ ಮುಂದುವರೆದರೆ ಕೆಎಸ್‌ಪಿಡಿಸಿಎಲ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ಶಕ್ತಿಸ್ಥಳ ರೈತರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಾದ ಶ್ರೀನಿವಾಸುಲು, ಮಾರುತಿ ಎಚ್ಚರಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.