
ತುಮಕೂರು: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಬಟವಾಡಿ– ಮಲ್ಲಸಂದ್ರ ನಡುವೆ ವೈಟ್ ಟಾಪಿಂಗ್ ಕಾಮಗಾರಿ ಆರಂಭವಾಗಿದ್ದು, ಮೊದಲಿಗೆ ಭೀಮಸಂದ್ರದಲ್ಲಿ ಹೊಸದಾಗಿ ಸೇತುವೆ ನಿರ್ಮಾಣ ಮಾಡಬೇಕು. ನಂತರ ನಗರದ ಕಡೆ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ನಿರ್ದೇಶಿಸಿದರು.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೆದ್ದಾರಿ ಪ್ರಾಧಿಕಾರದಿಂದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ವಿವಿಧ ಇಲಾಖೆ ಅಧಿಕಾರಿಗಳ ಸಮನ್ವಯ ಸಭೆಯನ್ನು ಮಂಗಳವಾರ ನಡೆಸಿದರು.
ನಗರದ ಹೊರ ವಲಯದ ರಂಗಾಪುರ ಬಳಿ ನಿರ್ಮಾಣ ಮಾಡುತ್ತಿರುವ ಮೇಲು ಸೇತುವೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ನಿರ್ದೇಶಿಸಿದರು.
ನಗರದ ಹೃದಯ ಭಾಗದಲ್ಲಿ ಹೆದ್ದಾರಿಗಳು ಹಾದುಹೋಗಿವೆ. ನೀರು, ಚರಂಡಿ, ಒಳಚರಂಡಿ ಪೈಪ್‌ಲೈನ್ ಸಹ ರಸ್ತೆ ತಳ ಭಾಗದಲ್ಲಿ ಹಾದು ಹೋಗಿರುತ್ತವೆ. ರಸ್ತೆ ದುರಸ್ತಿ, ಹೊಸ ಯೋಜನೆ ಕೈಗೆತ್ತಿಕೊಳ್ಳುವ ಸಮಯದಲ್ಲಿ ಪಾಲಿಕೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಕೆಲಸ ಮಾಡಬೇಕು ಎಂದು ಹೇಳಿದರು.
ಅಂತರಸನಹಳ್ಳಿ ಕೆಳ ಸೇತುವೆ, ದೇವರಾಯಪಟ್ಟಣ– ಭಾರತಿ ನಗರದ ಕೆಳಸೇತುವೆಯಲ್ಲಿ ಮಳೆಗಾಲದಲ್ಲಿ ನೀರು ನಿಲ್ಲುತ್ತದೆ. ಮಳೆಗಾಲಕ್ಕೆ ಮುನ್ನ ಸಮಸ್ಯೆ ಪರಿಹರಿಸಬೇಕು ಎಂದರು.
ನಗರದ ದಕ್ಷಿಣ ಭಾಗಕ್ಕೆ ನಿರಂತರವಾಗಿ ನೀರು ಸರಬರಾಜಿನ ವ್ಯವಸ್ಥೆ ರೂಪಿಸಬೇಕಿದೆ. ಅದಕ್ಕಾಗಿ ಮೀಸಲಿಟ್ಟಿರುವ ವೀರಸಾಗರ ಟೂಡಾ ಲೇ–ಔಟ್ ಜಾಗವನ್ನು ಪಾಲಿಕೆ ಹಸ್ತಾಂತರಿಸುವಂತೆ ತಿಳಿಸಿದರು.
ಶಿರಾಗೇಟ್ 150 ಅಡಿ ರಸ್ತೆಗೆ ಅಡ್ಡ ಇರುವ ಅಂಗಡಿ ಮಳಿಗೆ, ಮನೆಗಳನ್ನು ಗುರುತಿಸಲಾಗಿದೆ. ತುರ್ತಾಗಿ ಭೂ ಸ್ವಾಧೀನ ಪ್ರಕ್ರಿಯೆ ಆರಂಭಿಸುವಂತೆ ಟೂಡಾ ಆಯುಕ್ತರಿಗೆ ಆದೇಶಿಸಿದರು.
ಪಾಲಿಕೆ ಆಯುಕ್ತರಾದ ಶುಭ, ಟೂಡಾ ಆಯುಕ್ತ ಉಮೇಶ್‌ಚಂದ್ರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾಧಿಕಾರಿ ಅನುಪ್ ಶರ್ಮ, ಪಾಲಿಕೆ ಉಪ ಆಯುಕ್ತ ಮನುಕುಮಾರ್, ಕಾರ್ಯಪಾಲಕ ಎಂಜಿನಿಯರ್ ಸಂದೀಪ್, ಪ್ರವೀಣ್, ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಎಂಜಿನಿಯರ್ ಅನಿಲ್ ಕುಮಾರ್, ಬೆಸ್ಕಾಂ ಎಂಜಿನಿಯರ್ ನಾಗರಾಜು, ಕೊಳಚೆ ನಿರ್ಮೂಲನ ಮಂಡಳಿ ಎಂಜಿನಿಯರ್ ಭಾನು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.