
ನಾಗವಲ್ಲಿ (ತುಮಕೂರು): ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ 2,800, ಜಿಲ್ಲೆಯಲ್ಲಿ 40ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರಕ್ಕೆ ರೈತರ ಬಗ್ಗೆ ಬದ್ಧತೆ, ಕಾಳಜಿ ಇಲ್ಲ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟೀಕಿಸಿದರು.
ತಾಲ್ಲೂಕಿನ ನಾಗವಲ್ಲಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಜನರೊಂದಿಗೆ ಜನತಾ ದಳ’, ಜೆಡಿಎಸ್ ಬೆಳ್ಳಿ ಹಬ್ಬ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೂರು ವರ್ಷ ಆಗಿದ್ದು, ರೈತರ ಮೇಲೆ ಕಿಂಚಿತ್ತೂ ಅನುಕಂಪ ಇಲ್ಲ. ರಾಜ್ಯ ಸರ್ಕಾರ ರೈತರ ಜತೆಗಿಲ್ಲ ಎಂಬುದು ಅಂಕಿ– ಅಂಶದಿಂದ ಸಾಬೀತಾಗುತ್ತಿದೆ. ಉತ್ತರ ಕರ್ನಾಟಕದ ಭಾಗದಲ್ಲಿ ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡ ರೈತರಿಗೆ ಅಗತ್ಯ ಪರಿಹಾರ ನೀಡಿ, ಧೈರ್ಯ ತುಂಬುವ ಕೆಲಸ ಮಾಡಿಲಿಲ್ಲ ಎಂದು ಕಿಡಿಕಾರಿದರು.
‘ಸ್ವಾರ್ಥದ ರಾಜಕಾರಣಕ್ಕಾಗಿ ಕಾರ್ಯಕರ್ತರನ್ನು ಬೀದಿಯಲ್ಲಿ ಬಿಟ್ಟು ಹೋಗುವ ಸಂಸ್ಕೃತಿ ನಿಲ್ಲಬೇಕು. ನಿಷ್ಠಾವಂತ ಕಾರ್ಯಕರ್ತರಿಂದ ಮಾತ್ರ ಇದಕ್ಕೆ ಕಡಿವಾಣ ಹಾಕಲು ಸಾಧ್ಯ’ ಎಂದು ಪಕ್ಷ ತೊರೆದು ಹೋಗಿರುವ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ವಿರುದ್ಧ ವಾಗ್ದಾಳಿ ನಡೆಸಿದರು.
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಬಲವಾಗಿ ಕಟ್ಟಲಾಗಿದೆ. ಯಾರೂ ದೃತಿಗೆಡಬೇಕಾಗಿಲ್ಲ. ಕಾರ್ಯಕರ್ತರಿಗೆ ಮೀಸಲಿರುವ ಸ್ಥಳೀಯ ಚುನಾವಣೆಗೆ ಸಜ್ಜಾಗಿ, ಪೂರ್ವ ತಯಾರಿ ಮಾಡಿಕೊಳ್ಳುವಂತೆ ಎಂದು ಕರೆ ನೀಡಿದರು.
ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸಿದರೆ ಮಾತ್ರ ಹೆಚ್ಚಿನ ಮತ ಪಡೆಯಲು ಸಾಧ್ಯ. ನಿಸ್ವಾರ್ಥವಾಗಿ ದುಡಿಯುವ, ಪ್ರಾಮಾಣಿಕ, ಪಕ್ಷ ಕಟ್ಟುವ ಹಂಬಲ, ಛಲ ಇರುವವರನ್ನು ಗುರುತಿಸಬೇಕು. ಮುಂದಿನ ದಿನಗಳಲ್ಲಿ ನಗರದಲ್ಲಿ ಬೃಹತ್, ಐತಿಹಾಸಿಕ ಸಮಾವೇಶ ನಡೆಸಲಾಗುವುದು. ಅದು 2028ರ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಹೇಳಿದರು.
ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ, ‘ಪ್ರಸ್ತುತ ಸರ್ಕಾರಿ ಶಾಲೆಯಲ್ಲಿ ಮಕ್ಕಳು ಇಲ್ಲ. ಸರ್ಕಾರದ ಧೋರಣೆಯಿಂದ ಇಂತಹ ಸ್ಥಿತಿ ಉದ್ಭವಿಸಿದೆ. ಸರ್ಕಾರ ಬಡವರ ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಶಿಕ್ಷಕರ ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ಚೌಡರೆಡ್ಡಿ ತೂಪಲ್ಲಿ, ಮುಖಂಡರಾದ ಆರ್.ಉಗ್ರೇಶ್, ಕೆ.ಟಿ.ಶಾಂತಕುಮಾರ್, ಆರ್.ಸಿ.ಆಂಜಿನಪ್ಪ, ಬಿ.ಎಸ್.ನಾಗರಾಜು, ಡಾ.ರವಿ ನಾಗರಾಜಯ್ಯ, ತಿಮ್ಮಪ್ಪ, ಸತ್ಯಪ್ರಕಾಶ್, ನಾಗವಲ್ಲಿ ರಾಮಣ್ಣ, ಟಿ.ಆರ್.ನಾಗರಾಜು, ಕುಂಬಯ್ಯ, ಮುನೀರ್ ಅಹ್ಮದ್, ಬೆಳಗುಂಬ ವೆಂಕಟೇಶ್ ಮೊದಲಾದವರು ಪಾಲ್ಗೊಂಡಿದ್ದರು.
ತಳಮಟ್ಟದಲ್ಲಿ ಜೆಡಿಎಸ್ ಸುಭದ್ರ
‘ಜೆಡಿಎಸ್ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ತಳಮಟ್ಟದಲ್ಲಿ ಸುಭದ್ರವಾಗಿದೆ. ಇಲ್ಲಿ ಯಾವ ಕಾಲಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಪಕ್ಷದಿಂದ ಎಲ್ಲವನ್ನು ಅನುಭವಿಸಿ ಹೊರಗಡೆ ಹೋದವರು ಈಗ ಅಪಪ್ರಚಾರ ನಡೆಸುತ್ತಿದ್ದಾರೆ’ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ನಿಂಗಪ್ಪ ಅವರು ಡಿ.ಸಿ.ಗೌರಿಶಂಕರ್ ವಿರುದ್ಧ ಕಿಡಿಕಾರಿದರು.
‘ನಾಗವಲ್ಲಿಯಲ್ಲಿ ಸಭೆ ನಡೆಸಲು ಸಾಕಷ್ಟು ವಿರೋಧ ವ್ಯಕ್ತವಾಯಿತು. ಬಳ್ಳಾರಿ ಘಟನೆ ಇಲ್ಲಿ ಮರುಕಳಿಸುತ್ತದೆ. ಬ್ಯಾನರ್ ಫ್ಲೆಕ್ಸ್ ಕಟ್ಟಲು ಬಿಡುವುದಿಲ್ಲ’ ಎಂದರು. ನಾವು ತೀರ್ಮಾನಿಸಿದ ಜಾಗದಲ್ಲಿಯೇ ಕಾರ್ಯಕ್ರಮ ನಡೆಸಿ ಜೆಡಿಎಸ್ ಕಾರ್ಯಕರ್ತರ ಶಕ್ತಿ ಸಾಬೀತು ಮಾಡಿದ್ದೇವೆ. ಜಿಲ್ಲಾಧಿಕಾರಿ ತಹಶೀಲ್ದಾರ್ ಅವರಿಂದ ಅನುಮತಿ ಪಡೆದು ಸಭೆ ಆಯೋಜಿಸಿದ್ದೇವೆ ಎಂದರು. ‘ಮಾಜಿ ಶಾಸಕನಾಗಿ ಬಹಳಷ್ಟು ವರ್ಷ ಆಗಿದೆ. ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವ ಮನಸು ಇರಲಿಲ್ಲ. ಪಕ್ಷದ ವರಿಷ್ಠರ ಜಿಲ್ಲೆಯ ನಾಯಕರ ಒತ್ತಾಯ ಬೆಂಬಲ ಈ ಗಾದಿಯಲ್ಲಿ ಕೂರಿಸಿದೆ. ಇದನ್ನು ಸವಾಲಾಗಿ ಸ್ವೀಕರಿಸಿದ್ದೇನೆ. ಈ ಹಿಂದೆ ಅಧ್ಯಕ್ಷನಾಗಿದ್ದ ಸಮಯದಲ್ಲಿ ಜಿಲ್ಲೆಯಿಂದ 9 ಜನ ಜೆಡಿಎಸ್ ಶಾಸಕರು ಆಯ್ಕೆಯಾಗಿದ್ದರು. ಅದೊಂದು ಸುವರ್ಣಯುಗ. ಮತ್ತೆ ಅಂತಹ ದಿನ ಮರುಕಳಿಸಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.