ADVERTISEMENT

ಗ್ರಾ.ಪಂ.ಗಳಲ್ಲಿ ಅಭಿವೃದ್ಧಿ ಕಾರ್ಯ ಸ್ಥಗಿತ

329 ಗ್ರಾ.ಪಂ.ಗಳಿಗೆ ಅಧಿಕಾರಿಗಳ ನೇಮಕ, ಪಿಡಿಒ, ಕಾರ್ಯದರ್ಶಿಗಳ ಅಸಹಾಯಕತೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2020, 9:22 IST
Last Updated 8 ಜುಲೈ 2020, 9:22 IST
ಕೆ.ಚನ್ನಬಸಪ್ಪ
ಕೆ.ಚನ್ನಬಸಪ್ಪ   

ತುಮಕೂರು: ಐದು ವರ್ಷಗಳ ಚುನಾಯಿತ ಜನಪ್ರತಿನಿಧಿಗಳ ಅಧಿಕಾರ ಅವಧಿ ಪೂರ್ಣ ಗೊಂಡಿರುವ ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿ ಕಾರಿಗಳ ನೇಮಕ ಪ್ರಕ್ರಿಯೆ ಪೂರ್ಣಗೊಂಡಿದೆ. ಆದರೆ, ಅವರಿನ್ನೂ ಅಧಿಕಾರ ವಹಿಸಿಕೊಳ್ಳದೆ ಅಭಿವೃದ್ಧಿ ಕಾರ್ಯಗಳು ಮುಂದೆ ಸಾಗುತ್ತಿಲ್ಲ.

ಜಿಲ್ಲೆಯಲ್ಲಿ ತುಮಕೂರು ತಾಲ್ಲೂಕಿನಲ್ಲಿ 41, ಗುಬ್ಬಿ–34, ಕೊರಟಗೆರೆ–24, ಕುಣಿಗಲ್–36, ತಿಪಟೂರು–26, ತುರುವೇಕೆರೆ–27, ಚಿಕ್ಕನಾಯಕನಹಳ್ಳಿ–28, ಮಧುಗಿರಿ–39, ಶಿರಾ–42 ಹಾಗೂ ಪಾವಗಡ–34 ಸೇರಿದಂತೆ ಒಟ್ಟು 331 ಗ್ರಾ.ಪಂ.ಗಳಲ್ಲಿ ಈಗಾಗಲೇ 329 ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಪಾವಗಡ ತಾಲ್ಲೂಕಿನ ವೈ.ಎನ್‌.ಹೊಸಕೋಟೆ ಗ್ರಾ.ಪಂ ಅಧಿಕಾರ ಅವಧಿ ಇನ್ನೂ ಒಂದು ವರ್ಷ ಬಾಕಿ ಇದೆ. ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿರುವ ಹುಳಿಯಾರು ಪಂಚಾಯಿತಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿಲ್ಲ. ಉಳಿದಂತೆ ಎಲ್ಲಾ ಪಂಚಾಯಿತಿಗಳಿಗೆ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆಯೇ ಹೊರತು ಅಧಿಕಾರ ಸ್ವೀಕರಿಸಿಲ್ಲ. ಈ ಅಧಿಕಾರಿ ಬರುವವರೆಗೂ ಯಾವುದೇ ಕೆಲಸ ಕಾರ್ಯಗಳನ್ನು ಮುಂದುವರಿಸಲು ಹಾಗೂ ಹೊಸ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಪಂಚಾಯಿತಿ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

ADVERTISEMENT

ಕಾರ್ಯಕ್ರಮಗಳಿಗೆ ತಡೆ: ಗ್ರಾ.ಪಂ.ಗಳಲ್ಲಿ ಚುನಾಯಿತ ಅಧ್ಯಕ್ಷರಾಗಲಿ, ಆಡಳಿತಾಧಿಕಾರಿಗಳಾಗಿ ಇಲ್ಲದೆ ರಸ್ತೆ, ನೀರು, ಚರಂಡಿ, ಮನೆ, ಜಲಾಮೃತ, ಗ್ರಾಮವಿಕಾಸ, ಸುವರ್ಣ ಗ್ರಾಮೋದಯ, ಗ್ರಾಮೀಣ ರಸ್ತೆ ಯೋಜನೆ, ಕೆರೆಗಳ ಪುನರುಜ್ಜೀವನ, ಅನಿಲ ಯೋಜನೆ, ನರೇಗಾ ಕಾರ್ಯಕ್ರಮಗಳಿಗೆ ತಡೆ ಬಿದ್ದಿದೆ. ಆಡಳಿತಾಧಿಕಾರಿಯ ಒಪ್ಪಿಗೆ ಇಲ್ಲದೆ ಯಾವುದೇ ಕೆಲಸವನ್ನೂ ಮಾಡುವಂತಿಲ್ಲ ಎಂದು ಪಿಡಿಒ ಒಬ್ಬರು ತಿಳಿಸಿದರು.

ಗ್ರೂಫ್‌–ಬಿ ಶ್ರೇಣಿ: ಬಹುತೇಕ ಗ್ರಾ.ಪಂ.ಗಳಿಗೆ ಗ್ರೂಫ್‌–ಬಿ ಶ್ರೇಣಿ ಮೇಲ್ಪಟ್ಟವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ಆಡಳಿತ ಸಮಿತಿಗೆ ಅಧಿಕಾರಿಯೇ ಅಧ್ಯಕ್ಷರಾಗಿರುತ್ತಾರೆ. ರೋಸ್ಟರ್‌ ಪ್ರಕಾರವೇ ಸಮಿತಿ ಇರಲಿದೆ. ಅಧ್ಯಕ್ಷರಿಗೆ ಆರ್ಥಿಕ ಯೋಜನೆಯ ಅಧಿಕಾರ ನೀಡಲಾಗಿದೆ. ಗ್ರಾ.ಪಂ.ಗೆ ಸಂಬಂಧಿಸಿದ ತೀರ್ಮಾನಗಳನ್ನು ಸಮಿತಿ ತೆಗೆದುಕೊಳ್ಳಲಿದೆ. ಸಮಿತಿಯ ಸಲಹೆಗಳನ್ನು ಅನುಷ್ಠಾನಕ್ಕೆ ತರಲು ಕಾನೂನಿನಡಿ ಅವಕಾಶವಿದೆಯೇ ಎಂದು ಪರಿಶೀಲಿಸಿ ಅಧಿಕಾರಿ ಒಪ್ಪಿಗೆ ನೀಡಲಿದ್ದಾರೆ.

ತಡ ಏಕೆ?: ಈಗ ನೇಮಕಗೊಂಡಿರುವ ಬಹುತೇಕ ಆಡಳಿತಾಧಿಕಾರಿಗಳಿಗೆ ಗ್ರಾ.ಪಂ ಆಡಳಿತ ಕಾರ್ಯವೈಖರಿ ತಿಳಿದಿಲ್ಲ. ಹಾಗಾಗಿ ಅವರಿಗೆ ತರಬೇತಿ ನೀಡಬೇಕಾಗಿದೆ. ಒಂದು ಗ್ರಾಮ ಪಂಚಾಯಿತಿಯನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುವ ನಿಟ್ಟಿನಲ್ಲಿ ಸಜ್ಜುಗೊಳಿಸಬೇಕಾಗಿದೆ. ಈ ಎಲ್ಲಾ ಪ್ರಕ್ರಿಯೆ ಮುಗಿದು ಅಧಿಕಾರಿ ಕುರ್ಚಿಯಲ್ಲಿ ಕುಳಿತುಕೊಳ್ಳುವಷ್ಟರಲ್ಲಿ ಮತ್ತಷ್ಟು ತಡವಾಗಲಿದೆ. ಇಲ್ಲವೆ ಚುನಾವಣೆ ಘೋಷಣೆ ಆಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.