ತಿಪಟೂರು: ‘ವಿಶ್ವ ಗುರುವಿನ ಸ್ಥಾನದಲ್ಲಿರುವ ಭಾರತದಲ್ಲಿ ಹಿಂದೂ ಸಂಸ್ಕೃತಿಯ ತಳಹದಿಯಾದ ಶ್ರೀರಾಮ ಮಂದಿರವನ್ನು ನಿರ್ಮಾಣ ಮಾಡುತ್ತಿದ್ದು, ಪ್ರತಿಯೊಬ್ಬ ಭಾರತೀಯನ ರಾಷ್ಟ್ರೀಯ ಸ್ವಾಭಿಮಾನದ ಪುನರುಜ್ಜೀವನವಾಗಿದೆ’ ಎಂದು ಕೆರೆಗೋಡಿ ರಂಗಾಪುರ ಸುಕ್ಷೇತ್ರದ ಅಧ್ಯಕ್ಷ ಗುರುಪರ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ಕಸಬಾ ಹೋಬಳಿಯ ಕೆರೆಗೋಡಿ ರಂಗಾಪುರ ಸುಕ್ಷೇತ್ರದ ಸಮುದಾಯ ಭವನದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಎಸ್.ಪಿ.ಎಸ್. ವಿದ್ಯಾಪೀಠ ಮತ್ತು ಸಂಸ್ಕೃತ ಪಾಠಶಾಲಾ ಶಿಕ್ಷಕರ ಸಂಘದ ಸಹಯೋಗದೊಂದಿಗೆ ಸೋಮವಾರ ನಡೆದ ಚಿತ್ರದುರ್ಗ ವಲಯ ಮಟ್ಟದ (ಶ್ರೀಮದ್ ವಾಲ್ಮೀಕಿ ರಾಮಾಯಣ ಆಧಾರಿತ) ಪಿಬರೇ ರಾಮರಸಮ್ (ರಾಮೋತ್ಸವ) ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಿಂದೂ ಸಂಸ್ಕೃತಿಯನ್ನು ಉಳಿಸಿರುವ ಶಕ್ತಿಯಾದ ಶ್ರೀರಾಮ ಮಂದಿರವನ್ನು ಅಯೋಧ್ಯೆಯಲ್ಲಿ ನಿರ್ಮಾಣ ಮಾಡುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿ. ಶ್ರೀರಾಮನನ್ನು ದೈವವಾಗಿ ಎಲ್ಲರೂ ಪೂಜಿಸುತ್ತಿದ್ದಾರೆ. ಅವನ ಆಚಾರ-ವಿಚಾರ, ನಡೆ-ನುಡಿಯನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇಂದಿನ ಯುವಜನಾಂಗ ಪೋಷಕರ ಹಿಡಿತಕ್ಕೆ ಸಿಲುಕದೆ ಭ್ರಮಾಲೋಕದಲ್ಲಿ ತೇಲುತ್ತಿದೆ. ಭಾರತೀಯ ಸಂಸ್ಕೃತಿಯನ್ನು ತ್ಯಜಿಸಿ ಪಾಶ್ಚಿಮಾತ್ಯ ಸಂಸ್ಕೃತಿಯತ್ತ ಹೆಚ್ಚಿನ ಒಲವು ಹೊಂದಿದ್ದಾರೆ. ಇದರಿಂದಾಗಿ ಸ್ವಾರ್ಥ ಮನೋಭಾವ ಹೆಚ್ಚಾಗಿ ಸಮಾಜದಲ್ಲಿ ದುಷ್ಟಶಕ್ತಿಗಳಾಗಿ ಮಾರ್ಪಡುತ್ತಾರೆ. ಸಮಾಜದ ಸಾಮರಸ್ಯ ಹಾಳು ಮಾಡಲು ಮುಂದಾಗಿ ತಾವೇ ನಶಿಸಿ ಹೋಗುತ್ತಾರೆ. ಇದನ್ನು ತಪ್ಪಿಸಬೇಕು ಎಂದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಪಂಚಲಿಂಗಸ್ವಾಮಿ ಎಸ್. ಮಾತನಾಡಿ, ಶರಣರ, ಸಾಧು, ಸಂತರ, ದೈವಿಪುರುಷರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜಕ್ಕೆ ಕೊಡುಗೆ ನೀಡುವ ಮನೋಭಾವ ಎಲ್ಲರಿಗೂ ಮೂಡಬೇಕಿದೆ ಎಂದು ಹೇಳಿದರು.
ಸಮಾಜದ ಒಳಿತಿಗಾಗಿ ಪ್ರತಿಯೊಬ್ಬರು ಶ್ರಮಿಸಿದಾಗ ದೇಶವು ವಿಶ್ವ ಗುರುವಿನ ಸ್ಥಾನದಲ್ಲಿ ನಿಲ್ಲುತ್ತದೆ. ರಾಮನ ವಿಚಾರಗಳನ್ನು ಪ್ರತಿ ಮನೆಗಳಿಗೂ ತಲುಪಿಸುವ ಕಾರ್ಯದಿಂದ ಮಾತ್ರ ಭಾರತೀಯ ವಿಚಾರಧಾರೆ ಉಳಿಯಲು ಸಾಧ್ಯ ಎಂದರು.
ಚಿತ್ರದುರ್ಗ ಮಠದ ಶಿವಕುಮಾರ ಸ್ವಾಮೀಜಿ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ನಿರ್ದೇಶಕ ಡಾ.ಪ್ರಕಾಶ್ ಆರ್. ಪಾಗೋಜಿ, ಎಸ್.ಪಿ.ಎಸ್. ವಿದ್ಯಾಪೀಠ ರಂಗಾಪುರದ ಆಡಳಿತಾಧಿಕಾರಿ ಯು.ಎಸ್. ಲೋಕೇಶ್, ಸಹ ಕಾರ್ಯದರ್ಶಿ ಕೆ.ಆರ್. ಶಂಕರಪ್ಪ, ಶಿವಮೊಗ್ಗದ ಗಜಾನನ ಸಂಸ್ಕೃತ ಪಾಠಶಾಲೆಯ ಕಾರ್ಯದರ್ಶಿ ಸದಾನಂದಶರ್ಮ, ಚಿತ್ರದುರ್ಗ ವಲಯದ ವಿಷಯ ಪರಿವೀಕ್ಷಕ ಎಚ್.ಬಿ. ಗಂಗಾಧರಯ್ಯ, ಬೆಂಗಳೂರಿನ ಸಂಸ್ಕೃತ ಸಂಘದ ಅಧ್ಯಕ್ಷ ರಂಗರಾಜು, ವಲಯ ಸಂಯೋಜಕ ಟಿ.ಎನ್. ಗಿರೀಶ್, ರಂಗಾಪುರ ಸಂಸ್ಕೃತ ಶಾಲೆಯ ಶಿಕ್ಷಕ ಗಂಗಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.