ADVERTISEMENT

ಕನ್ನಡ ರಾಜ್ಯೋತ್ಸವಕ್ಕೆ ಆಹ್ವಾನವಿಲ್ಲ: ವಿವಿಧ ಕನ್ನಡಪರ ಸಂಘಟನೆಗಳ ಆರೋಪ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2021, 3:27 IST
Last Updated 1 ನವೆಂಬರ್ 2021, 3:27 IST
ತುಮಕೂರಿನಲ್ಲಿ ಭಾನುವಾರ ಕನ್ನಡಪರ ಸಂಘಟನೆಗಳ ಮುಖಂಡರು ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿದರು. ಮುಖಂಡರಾದ ಧನಿಯಕುಮಾರ್, ಅರುಣ್‍ ಕುಮಾರ್, ಉಮೇಶ್, ಸೋಮಶೇಖರ್, ಟಿ.ಇ.ರಘುರಾಮ್, ಆನಂದ್, ಕನ್ನಡ ಪ್ರಕಾಶ್, ಮುಬಾರಕ್ ಪಾಷ, ಪ್ರದೀಪ್‍ಕುಮಾರ್, ರಕ್ಷಿತ್, ರಾಕೇಶ್, ಕಿರಣ್, ಬಾಲು, ನಾಣಿ, ಸತೀಶ್ ಇದ್ದರು
ತುಮಕೂರಿನಲ್ಲಿ ಭಾನುವಾರ ಕನ್ನಡಪರ ಸಂಘಟನೆಗಳ ಮುಖಂಡರು ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿದರು. ಮುಖಂಡರಾದ ಧನಿಯಕುಮಾರ್, ಅರುಣ್‍ ಕುಮಾರ್, ಉಮೇಶ್, ಸೋಮಶೇಖರ್, ಟಿ.ಇ.ರಘುರಾಮ್, ಆನಂದ್, ಕನ್ನಡ ಪ್ರಕಾಶ್, ಮುಬಾರಕ್ ಪಾಷ, ಪ್ರದೀಪ್‍ಕುಮಾರ್, ರಕ್ಷಿತ್, ರಾಕೇಶ್, ಕಿರಣ್, ಬಾಲು, ನಾಣಿ, ಸತೀಶ್ ಇದ್ದರು   

ತುಮಕೂರು: ಜಿಲ್ಲಾ ಆಡಳಿತದ ವತಿಯಿಂದ ನಡೆಯುತ್ತಿರುವ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಕನ್ನಡಪರ ಸಂಘಟನೆಗಳನ್ನು ಆಹ್ವಾನಿಸದೆ ಕಡೆಗಣಿಸುವ ಮೂಲಕ ಹೋರಾಟಗಾರರ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಭಾನುವಾರ ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯ ನಂತರ ಮಾತನಾಡಿದ ಮುಖಂಡರು, ‘ಕನ್ನಡ ನೆಲ, ಜಲ, ಭಾಷೆಯ ಬಗ್ಗೆ ಹೋರಾಟ ನಡೆಸುತ್ತಾ ಬಂದಿರುವ ಸಂಘಟನೆಗಳನ್ನು ಸೌಜನ್ಯಕ್ಕೂ ನಾಡ ಹಬ್ಬ ಆಚರಣೆಗೆ ಆಹ್ವಾನಿಸದೆ ಕಡೆಗಣಿಸಲಾಗಿದೆ’ ಎಂದು ದೂರಿದರು. ಜಿಲ್ಲಾ ಆಡಳಿತದ ಧೋರಣೆಯನ್ನು ಖಂಡಿಸಿದರು.

ಕನ್ನಡ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಧನಿಯಕುಮಾರ್, ‘ಈ ಹಿಂದಿನ ಜಿಲ್ಲಾಧಿಕಾರಿಗಳು ಕನ್ನಡಪರ ಸಂಘಟನೆಗಳನ್ನು ಪ್ರತಿ ನಾಡ ಹಬ್ಬದ ಸಂದರ್ಭದಲ್ಲೂ ಆಹ್ವಾನಿಸಿ, ನಮ್ಮ ಅಹವಾಲುಗಳನ್ನು ಮನ್ನಿಸುತ್ತಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ಕೋವಿಡ್ ನೆಪದಲ್ಲಿ ಕನ್ನಡಪರ ಸಂಘಟನೆಗಳನ್ನು ಮರೆತಿದ್ದಾರೆ. ಜತೆಗೆ ರಾಜ್ಯೋತ್ಸವ ಆಚರಣೆಗೆ ಅವಕಾಶ ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಕನ್ನಡ ಸಂಘಟನೆಯ ಅರುಣ್‍ ಕುಮಾರ್, ‘ಜಿಲ್ಲಾ ಆಡಳಿತಕ್ಕೆ ಒಂದು ವಾರದ ಮೊದಲೇ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ಪರ ಸಂಘಟನೆಗಳನ್ನು ಪರಿಗಣಿಸುವಂತೆ ಮನವಿ ಮಾಡಲಾಗಿತ್ತು. ಆದರೂ ನಿರ್ಲಕ್ಷ್ಯಿಸಲಾಗಿದೆ. ನಗರದ ವಿವಿಧ ವೃತ್ತಗಳಲ್ಲಿ ನಾಡ ಹಬ್ಬ ಆಚರಣೆಗೆ ಅನುಮತಿ ನೀಡಿ, ನಂತರ ಪೊಲೀಸರ ಮೂಲಕ ಇನ್ನಿಲ್ಲದ ನಿಯಮಗಳನ್ನು ಜಾರಿಗೆ ತಂದು ಆಚರಣೆಗೆ ಅಡ್ಡಿಯುಂಟು ಮಾಡಲಾಗುತ್ತದೆ’ ಎಂದರು.

ಕನ್ನಡಪರ ಸಂಘಟನೆಗಳ ಮುಖಂಡರಾದ ಉಮೇಶ್, ಸೋಮಶೇಖರ್, ಟಿ.ಇ.ರಘುರಾಮ್, ಆನಂದ್, ಕನ್ನಡ ಪ್ರಕಾಶ್, ಮುಬಾರಕ್ ಪಾಷ, ಪ್ರದೀಪ್‍ಕುಮಾರ್, ರಕ್ಷಿತ್, ರಾಕೇಶ್, ಕಿರಣ್, ಬಾಲು, ನಾಣಿ, ಸತೀಶ್ ಮತ್ತಿತರರು ಉಪಸ್ಥಿತರಿದ್ದರು.

ದೂರವಾಣಿ ಮೂಲಕ ಕನ್ನಡಪರ ಸಂಘಟನೆಗಳ ಮುಖಂಡರ ಜತೆ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಮುಖಂಡರ ಜತೆಗೆ ಮಾತುಕತೆ ನಡೆಸಿ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.