ADVERTISEMENT

ರಾಜೀನಾಮೆ | ಯಾರೂ ವಾಪಸ್ ಬರೋಲ್ಲ, ಇನ್ನಷ್ಟು ಶಾಸಕರು ಹೋಗ್ತಾರೆ: ಕೆ.ಎನ್.ರಾಜಣ್ಣ

​ಪ್ರಜಾವಾಣಿ ವಾರ್ತೆ
Published 20 ಜುಲೈ 2019, 14:54 IST
Last Updated 20 ಜುಲೈ 2019, 14:54 IST
ಕೆ.ಎನ್.ರಾಜಣ್ಣ
ಕೆ.ಎನ್.ರಾಜಣ್ಣ   

ತುಮಕೂರು: ‘ಹೋದವರು ವಾಪಸ್ ಬರೋಲ್ಲ. ಮೈತ್ರಿ ಪಕ್ಷಗಳ ಇನ್ನಷ್ಟು ಶಾಸಕರು ಹೋಗ್ತಾರೆ. ಹೋಗುವವರ ಹೆಸರು ಹೇಳಿಬಿಡುತ್ತಿದ್ದೆ. ಹೇಳಿದ್ರೆ ಅಲರ್ಟ್‌ ಆಗುತ್ತಾರೆ ಎಂದು ಹೇಳುವುದಿಲ್ಲ’ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿದರು.

ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ಸರ್ಕಾರ ಇರುವುದು ಯಾರಿಗೂ ಬೇಕಾಗಿಲ್ಲ. ದೇವೇಗೌಡರ ಕುಟುಂಬಕ್ಕೆ ಮತ್ತು ಕಾಂಗ್ರೆಸ್‌ನ ಒಂದಿಬ್ಬರಿಗೆ ಮಾತ್ರ ಬೇಕಾಗಿದೆ’ ಎಂದರು.

ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಪಾತಾಳಕ್ಕೆ ಕುಸಿದಿದ್ದೇವೆ (ಕಾಂಗ್ರೆಸ್‌ನವರು). ನಮ್ಮವರಿಗೆ ಬುದ್ಧಿ ಕಡಿಮೆ. ಇನ್ನೂ ಬುದ್ಧಿ ಬಂದಿಲ್ಲ ಎಂದು ಟೀಕಿಸಿದರು.

ADVERTISEMENT

‘ಶಾಸನ ಸಭೆಯಲ್ಲಿ ಮಾತನಾಡುವ ಹಕ್ಕು ಎಲ್ಲ ಶಾಸಕರಿಗೆ ಇದೆ. ಆದರೆ, ಆ ಹಕ್ಕಿನ ನೆಪದಲ್ಲಿ ಕಾಲಹರಣ ಮಾಡುವುದು ಸರಿಯಲ್ಲ. ಕಾಲ ಹರಣ ಮಾಡಲಾಗುತ್ತಿದೆ ಎಂದು ಬಿಜೆಪಿಯವರು ದೂರುತ್ತಿರುವುದು ಸರಿ ಇದೆ ಎನಿಸುತ್ತಿದೆ’ ಎಂದು ಹೇಳಿದರು.

ಈ ಹಿಂದೆ ಎಸ್.ಆರ್. ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗ 20 ಶಾಸಕರ ರಾಜೀನಾಮೆ ಕೊಡಿಸಲಾಯಿತು. ಆಗ ನಡೆದ ಅಧಿವೇಶನದಲ್ಲಿ ಯಾವ ಚರ್ಚೆಯೂ ನಡೆದಿರಲಿಲ್ಲ. ಕೇವಲ ಒಂದು ಕಾಗದವನ್ನು ರಾಜ್ಯಪಾಲರ ಕಚೇರಿಗೆ ಕಳಿಸಲಾಗಿತ್ತು. ಬೊಮ್ಮಾಯಿ ಸರ್ಕಾರ ವಜಾಗೊಂಡಿತ್ತು. ದೇವೇಗೌಡರ ನೇತೃತ್ವದಲ್ಲಿಯೇ ಪತ್ರ ಕಳಿಸಲಾಗಿತ್ತು. ಆಗ ಪ್ರಜಾಪ್ರಭುತ್ವದ ಕಗ್ಗೊಲೆ ಆಗಿರಲಿಲ್ಲ. ಈಗ ಆಗುತ್ತಿದೆ ಎಂದು ಹೇಳಲಾಗುತ್ತಿದೆ. ರಾಜಕೀಯ ಪಿತಾಮಹ ದೇವೇಗೌಡರೇ ಇದಕ್ಕೆ ಉತ್ತರಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.