ADVERTISEMENT

ಆಮ್ಲಜನಕ ಕೊರತೆ ಇಲ್ಲ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2021, 5:01 IST
Last Updated 25 ಏಪ್ರಿಲ್ 2021, 5:01 IST

ತುಮಕೂರು: ಪ್ರಸ್ತುತ ಜಿಲ್ಲೆಯಲ್ಲಿ ಕೋವಿಡ್ ರೋಗಿಗಳಿಗೆ ಆಮ್ಲಜನಕದ ಕೊರತೆ ಆಗದಂತೆ ನೋಡಿಕೊಳ್ಳಲಾಗಿದೆ. ಈವರೆಗೆ ಅಂತಹ ಸಮಸ್ಯೆಯಾಗಿಲ್ಲ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದರು.

ಈಗ ಬರುತ್ತಿರುವ ಕೊರೊನಾ ಪಾಸಿಟಿವ್ ಪ್ರಕರಣಗಳಲ್ಲಿ ಶೇ 5ರಷ್ಟು ಮಂದಿಗೆ ಮಾತ್ರ ಅಗತ್ಯ ಇರುತ್ತದೆ. ಪ್ರತಿ ತಾಲ್ಲೂಕು ಕೇಂದ್ರದಲ್ಲೂ ಆಮ್ಲಜನಕ ಸೌಲಭ್ಯ ಹೊಂದಿದ 50 ಹಾಸಿಗೆಯ ವ್ಯವಸ್ಥೆಗೆ ಸಿದ್ಧತೆ ಮಾಡಲಾಗಿದೆ ಎಂದು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

10 ತಾಲ್ಲೂಕುಗಳಲ್ಲೂ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಮುಂದಿನ ಮೂರು ದಿನಗಳಲ್ಲಿ ಅವಶ್ಯಕತೆಗೆ ಅನುಗುಣವಾಗಿ ಆರಂಭವಾಗಲಿವೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರವೇ ಕೊರೊನಾ ಸೋಂಕಿತರಿಗೆ ರೆಮಿಡಿಸಿವಿರ್ ಲಸಿಕೆ ನೀಡಬೇಕು. ಈ ಸಂಬಂಧ ವೈದ್ಯರಿಗೆ ಸೂಚನೆ ನೀಡಲಾಗಿದೆ ಎಂದರು.

ADVERTISEMENT

ಅಗತ್ಯ ಸೇವೆಗಳ 9 ಕಾರ್ಖಾನೆಗಳಿಗೆ ಮಾತ್ರ ಆಮ್ಲಜನಕ ಪೂರೈಸಲು ಅವಕಾಶ ನೀಡಲಾಗಿದೆ. ಇದನ್ನು ಹೊರತುಪಡಿಸಿ ಇತರೆ ಕಾರ್ಖಾನೆಗಳಿಗೆ ಆಮ್ಲಜನಕ ಸರಬರಾಜು ಮಾಡುತ್ತಿದ್ದರೆ ಆ ಬಗ್ಗೆ ಗಮನ ಹರಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಮತ್ತು ಔಷಧ ನಿಯಂತ್ರಣಾಧಿಕಾರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಖಾಸಗಿ ಆಸ್ಪತ್ರೆಗಳು ತಮ್ಮ ಒಟ್ಟು ಸಾಮರ್ಥ್ಯದಲ್ಲಿ ಅರ್ಧದಷ್ಟು ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗೆ ನೀಡ
ಲಾಗಿದೆ? ಇಲ್ಲವೆ? ಎಂಬ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ನೇತೃತ್ವದ ತಂಡ ಪ್ರತಿ ದಿನ ಆಸ್ಪತ್ರೆಗಳಿಗೆ ಭೇಟಿನೀಡಿ ಪರಿಶೀಲನೆ ನಡೆಸಲಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ‘ನಗರದ ಆಯಕಟ್ಟಿನ ಸ್ಥಳಗಳಲ್ಲಿ 18 ಚೆಕ್ ಪೋಸ್ಟ್ ಆರಂ
ಭಿಸಲಾಗಿದೆ. ಅನಗತ್ಯವಾಗಿ ಓಡಾಡುತ್ತಿರುವ ವಾಹನಗಳ ತಪಾಸಣೆ ನಡೆಸಿ ಜಪ್ತಿ ಮಾಡಲಾಗುತ್ತಿದೆ’ ಎಂದರು.

ಪ್ರಯಾಣಿಕರನ್ನು ಬಸ್ ನಿಲ್ದಾಣಕ್ಕೆ ಬಿಟ್ಟು ಬರುವವರು ದಾಖಲಾತಿ ತೋರಿಸುವುದು ಕಡ್ಡಾಯ. ಹಾಗೆಯೇ ಅಗತ್ಯ ಸೇವೆಗಳಿಗೆ ತೆರಳುವವರು ಸಹ ತಮ್ಮ ಸಂಸ್ಥೆಯ ಗುರುತಿನ ಕಾರ್ಡ್ ತೋರಿಸುವುದು ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.