ADVERTISEMENT

ಸುರೇಶ್‌ಗೌಡ ರಾಜೀನಾಮೆಗೆ ರಾಜಕೀಯ ಬಣ್ಣ ಬೇಡ: ಮಸಾಲ ಜಯರಾಮ್‌

ಕೆಂಚನಹಳ್ಳಿ ಕೆರೆಗೆ ಬಾಗಿನ ಅರ್ಪಿಸಿದ ಶಾಸಕ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2021, 4:48 IST
Last Updated 30 ಸೆಪ್ಟೆಂಬರ್ 2021, 4:48 IST
ಗುಬ್ಬಿ ತಾಲ್ಲೂಕಿನ ಕೆಂಚನಹಳ್ಳಿ ಕೆರೆಗೆ ಬಾಗಿನ ಅರ್ಪಿಸಿದ ಶಾಸಕ ಮಸಾಲ ಜಯರಾಮ್. ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆಂಪರಾಜು, ಸದಸ್ಯ ಚಿದಾನಂದ, ಮುಖಂಡರಾದ ವಸಂತ್‌ಕುಮಾರ್, ವಿಶ್ವನಾಥ್ ಹಾಜರಿದ್ದರು
ಗುಬ್ಬಿ ತಾಲ್ಲೂಕಿನ ಕೆಂಚನಹಳ್ಳಿ ಕೆರೆಗೆ ಬಾಗಿನ ಅರ್ಪಿಸಿದ ಶಾಸಕ ಮಸಾಲ ಜಯರಾಮ್. ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆಂಪರಾಜು, ಸದಸ್ಯ ಚಿದಾನಂದ, ಮುಖಂಡರಾದ ವಸಂತ್‌ಕುಮಾರ್, ವಿಶ್ವನಾಥ್ ಹಾಜರಿದ್ದರು   

ಗುಬ್ಬಿ: ‘ಬಿಜೆಪಿಯ ಯಾವ ನಾಯಕರೂ ಕಾಂಗ್ರೆಸ್ ಸೇರುವ ಉದ್ದೇಶ ಹೊಂದಿಲ್ಲ. ಕಾಂಗ್ರೆಸ್‌ನಿಂದಲೇ ಸುಮಾರು ಇಪ್ಪತ್ತು ಶಾಸಕರು ನಮ್ಮ ಪಕ್ಷಕ್ಕೆ ಆಗಮಿಸುತ್ತಿದ್ದಾರೆ. ರಾಜ್ಯ ಘಟಕದ ಅಧ್ಯಕ್ಷರೇ ಅವರ ಹೆಸರುಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡುತ್ತಾರೆ’ ಎಂದು ತುರುವೇಕೆರೆ ಕ್ಷೇತ್ರದ ಶಾಸಕ ಮಸಾಲ ಜಯರಾಮ್ ತಿಳಿಸಿದರು.

ತಾಲ್ಲೂಕಿನ ಸಿ.ಎಸ್. ಪುರ ಹೋಬಳಿಯ ತುರುವೇಕೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೆಂಚನಹಳ್ಳಿ ಗ್ರಾಮದ ಕೆರೆಗೆ ಬುಧವಾರ ಬಾಗಿನ ಅರ್ಪಿಸಿ ಅವರು ಮಾತನಾಡಿದರು.

ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಸುರೇಶ್ ಗೌಡ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ರಾಜೀನಾಮೆ ನೀಡಿದ್ದಾರೆ. ಇದಕ್ಕೆ ಯಾವುದೇ ರಾಜಕೀಯ ಬಣ್ಣ ಕಟ್ಟುವ ಅಗತ್ಯವಿಲ್ಲ. ಅವರು ಉತ್ತಮ ಸಂಘಟನಾಕಾರ. ಬಿಜೆಪಿಯಲ್ಲಿಯೇ ಇರುತ್ತಾರೆ. ಬೇರೆ ಯಾವುದೇ ಪಕ್ಷಕ್ಕೂ ಹೋಗುವುದಿಲ್ಲ. ನಾವೆಲ್ಲರೂ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಉದ್ದೇಶವನ್ನಿಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ADVERTISEMENT

‘ಸಿ.ಎಸ್. ಪುರ ಭಾಗದಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಈ ಭಾಗದ ಎಲ್ಲಾ ಕೆರೆಗಳನ್ನು ಆದ್ಯತೆ ಮೇರೆಗೆ ತುಂಬಿಸಲಾಗುತ್ತಿದೆ. ಆ ಮೂಲಕ ಇಲ್ಲಿನ ಮತದಾರರ ಋಣ ತೀರಿಸುತ್ತಿದ್ದೇನೆ’ ಎಂದರು.

‘ಈ ಹೋಬಳಿಯು ತುಂಬಾ ಹಿಂದುಳಿದ ಪ್ರದೇಶವಾಗಿದೆ. ಈ ಭಾಗಕ್ಕೆ ಅತ್ಯಂತ ಹೆಚ್ಚು ಅಭಿವೃದ್ಧಿ ಕೆಲಸ ಮಾಡುತ್ತಿದ್ದೇನೆ. ಸುಮಾರು ಇಪ್ಪತ್ತು ವರ್ಷಗಳಿಂದ ಕೆಂಚನಹಳ್ಳಿ ಕೆರೆ ತುಂಬಿಸಲು ಸಾಧ್ಯವಾಗಿರಲಿಲ್ಲ. ಈ ಬಾರಿ ಕೆರೆ ತುಂಬಿಸಿ ಬಾಗಿನ ಅರ್ಪಣೆ ಮಾಡುತ್ತಿರುವುದು ಸಂತಸ ತಂದಿದೆ. ಇನ್ನೂ ₹ 40 ಲಕ್ಷ ಮೊತ್ತದ ಕಾಮಗಾರಿಗಳನ್ನು ಈ ಭಾಗದಲ್ಲಿ ಮುಂದಿನ ದಿನಗಳಲ್ಲಿ ಮಾಡುವ ಯೋಜನೆಯಿದೆ’ ಎಂದು ತಿಳಿಸಿದರು.

ಸಿ.ಎಸ್. ಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆಂಪರಾಜು, ಸದಸ್ಯ ಚಿದಾನಂದ, ಮುಖಂಡರಾದ ಮದುವೆಮನೆ ಕುಮಾರ್, ವಸಂತಕುಮಾರ್ ವಿಶ್ವನಾಥ್, ಸದಾಶಿವ, ಕಲ್ಲೂರು ಸುರೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.