ADVERTISEMENT

ಅಲೆಮಾರಿಗೆ ತಪ್ಪದ ಅಲೆದಾಟ; ಸಿಗದ ನೆರವು

ನಿಗದಿತ ಗುರಿ ತಲುಪಲು ವಿಫಲ; 44 ಮಂದಿಗಷ್ಟೇ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 3:05 IST
Last Updated 31 ಅಕ್ಟೋಬರ್ 2025, 3:05 IST
ಅಲೆಮಾರಿ ಸಮುದಾಯದ ಗುಡಿಸಲು (ಸಾಂದರ್ಭಿಕ ಚಿತ್ರ)
ಅಲೆಮಾರಿ ಸಮುದಾಯದ ಗುಡಿಸಲು (ಸಾಂದರ್ಭಿಕ ಚಿತ್ರ)   

ತುಮಕೂರು: ಸಮಾಜದಲ್ಲಿ ಅಂಚಿಗೆ ತಳ್ಳಲ್ಪಟ್ಟ, ಅತೀ ಹಿಂದುಳಿದ ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಬೇಕಿದ್ದ ಅಭಿವೃದ್ಧಿ ನಿಗಮಗಳು ಹಳಿ ತಪ್ಪಿವೆ. ಯಾವುದೇ ನಿಗಮ ನಿಗದಿತ ಗುರಿ ತಲುಪುತ್ತಿಲ್ಲ. ಇಂತಹ ಪಟ್ಟಿಗೆ ಎಸ್‌.ಸಿ, ಎಸ್‌.ಟಿ ಅಲೆಮಾರಿ ಅಭಿವೃದ್ಧಿ ನಿಗಮವೂ ಸೇರ್ಪಡೆಯಾಗಿದೆ.

ಜಿಲ್ಲೆಯಲ್ಲಿ ಅಲೆಮಾರಿ ಅಭಿವೃದ್ಧಿ ನಿಗಮದ ವಿವಿಧ ಯೋಜನೆಯಡಿ 2024–25ನೇ ಸಾಲಿನಲ್ಲಿ 60 ಜನರಿಗೆ ಸಾಲ ಸೌಲಭ್ಯ ಕಲ್ಪಿಸುವ ಗುರಿ ನೀಡಲಾಗಿತ್ತು. 44 ಮಂದಿಗೆ ಮಾತ್ರ ಸರ್ಕಾರದ ಸವಲತ್ತು ಸಿಕ್ಕಿದೆ. ಅರ್ಹ 60 ಜನರನ್ನು ಪತ್ತೆ ಹಚ್ಚಿ, ಆರ್ಥಿಕ ನೆರವು ಒದಗಿಸುವ ಕಾರ್ಯ ಆಮೆಗತಿಯಲ್ಲಿ ಸಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಮತ್ತೆ ಅರ್ಜಿ ಕರೆಯುವ ಸಮಯ ಬಂದಿದೆ. ಈವರೆಗೆ ಕಳೆದ ವರ್ಷ ನಿಗದಿಪಡಿಸಿದ ಗುರಿ ಸಾಧಿಸಲು ಸಾಧ್ಯವಾಗಿಲ್ಲ.

ಪರಿಶಿಷ್ಟ ಜಾತಿ ಪಟ್ಟಿಯಲ್ಲಿ 51, ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ 23 ಅಲೆಮಾರಿ ಜಾತಿಗಳಿವೆ. ಒಂದು ಅಂದಾಜಿನ ಪ್ರಕಾರ ಜಿಲ್ಲೆಯಲ್ಲಿ ಸುಮಾರು 20 ಸಾವಿರ ಅಲೆಮಾರಿ ಜನಾಂಗದವರು ನೆಲೆಸಿದ್ದಾರೆ. ಪ್ರತಿ ವರ್ಷ ಸಾವಿರಾರು ಅರ್ಜಿಗಳು ನಿಗಮಕ್ಕೆ ಸಲ್ಲಿಕೆಯಾಗುತ್ತಿವೆ. ಈ ಸಮುದಾಯದ ಜನರಿಗೆ ನಿಗಮದ ಸೌಲಭ್ಯ ಗಗನ ಕುಸುಮವಾಗಿದೆ. ಉದ್ಯಮ ಶೀಲತೆ ಯೋಜನೆಯಡಿ 4 ಜನರಿಗೆ ಸಾಲ ಕೊಡಬೇಕಿದ್ದು, ಒಬ್ಬರು ಮಾತ್ರ ನೆರವು ಪಡೆದಿದ್ದಾರೆ. ಪ್ರೇರಣಾ ಯೋಜನೆಯಡಿ ಕೇವಲ ಒಬ್ಬರಿಗೆ ಸೌಲಭ್ಯ ಕಲ್ಪಿಸಬೇಕಿತ್ತು. ಆ ಕೆಲಸವೂ ಪೂರ್ಣಗೊಂಡಿಲ್ಲ.

ADVERTISEMENT

2023ರಲ್ಲಿ ನಿಗಮ ಅಸ್ತಿತ್ವಕ್ಕೆ ಬಂದಿದೆ. ಸಮಾಜ ಕಲ್ಯಾಣ ಇಲಾಖೆ ಮೇಲುಸ್ತುವಾರಿಯಲ್ಲಿ ಕೆಲಸಗಳು ನಡೆಯುತ್ತಿವೆ. ಆನ್‌ಲೈನ್‌ ಮುಖಾಂತರ ಅರ್ಜಿ ಸಲ್ಲಿಸಲು ಅನುವು ಮಾಡಿಕೊಡಲಾಗುತ್ತದೆ. ಅರ್ಜಿ ಸಲ್ಲಿಸಲಾಗದೆ ಸಾಕಷ್ಟು ಮಂದಿ ಗುಡಿಸಲಿನಲ್ಲೇ ಉಳಿಯುತ್ತಿದ್ದಾರೆ. ಅಲ್ಪ–ಸ್ವಲ್ಪ ತಿಳಿವಳಿಕೆ ಇರುವವರು ಅರ್ಜಿ ಸಲ್ಲಿಸಿ, ಇಲಾಖೆ ಕಚೇರಿಯಲ್ಲಿ ಅಗತ್ಯ ದಾಖಲೆ ಸಲ್ಲಿಸುತ್ತಿದ್ದಾರೆ. ಅರ್ಜಿ ಸಲ್ಲಿಸಿದವರಿಗೂ ಸಕಾಲಕ್ಕೆ ಸೌಲಭ್ಯಗಳು ಸಿಗುತ್ತಿಲ್ಲ ಎಂಬ ಆರೋಪ ಸಾಮಾನ್ಯವಾಗಿದೆ.

‘ಸರ್ಕಾರ ಗುರಿ ನಿಗದಿಪಡಿಸುವುದು ಕಡಿಮೆ. ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿಯೇ 51 ಅಲೆಮಾರಿ ಜಾತಿಗಳಿವೆ. ಕನಿಷ್ಠ ಜಾತಿಗೆ ಒಬ್ಬರಿಗಾದರೂ ಸಾಲ ಸೌಲಭ್ಯ ಕಲ್ಪಿಸುವುದು ಬೇಡವೇ? ಕೇವಲ ನಾಮಕಾವಸ್ತೆ ಎಂಬಂತೆ, ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ ಸಹಾಯ ಧನ, ಸಾಲ ಸೌಲಭ್ಯ ನೀಡಲಾಗುತ್ತಿದೆ. ಹೀಗಾದರೆ ಸಮುದಾಯದ ಜನರ ಬದುಕು ಸುಧಾರಿಸುವುದು ಯಾವಾಗ? ಎಂದು ಚಿಕ್ಕನಾಯಕನಹಳ್ಳಿಯ ಪರಮೇಶ್‌ ಪ್ರಶ್ನಿಸುತ್ತಾರೆ.

‘ಜಿಲ್ಲೆ ಸೇರಿ ರಾಜ್ಯದ ವಿವಿಧೆಡೆ ಅಲೆಮಾರಿಗಳ ಪಾಡು ಹೇಳತೀರದಾಗಿದೆ. ಒಂದೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿಯಲ್ಲಿ ಸಮುದಾಯದ ಮಂದಿ ಬದುಕು ಸಾಗಿಸುತ್ತಿದ್ದಾರೆ. ಸರ್ಕಾರದ ಸೌಲಭ್ಯ ಪಡೆಯಲು ಕನಿಷ್ಠ ಪ್ರಜ್ಞೆಯೂ ಅವರಲ್ಲಿ ಇರುವುದಿಲ್ಲ. ಮೊದಲೇ ಶಿಕ್ಷಣ ವಂಚಿತರು. ಅಂತಹವರಿಗೆ ಜಾಗೃತಿ ಮೂಡಿಸಿ, ಸರ್ಕಾರದ ನೆರವು ಕಲ್ಪಿಸಬೇಕಾದ ಅಧಿಕಾರಿಗಳು ಜಿಲ್ಲಾ ಕೇಂದ್ರ ಬಿಟ್ಟು ಮುಂದಡಿ ಇಡುತ್ತಿಲ್ಲ’ ಎಂದು ನಾಗವಲ್ಲಿಯ ರಾಮಾಂಜಿನಿ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.