ADVERTISEMENT

ಅಹಿಂಸೆ: ಮಾತನಾಡಲು ಹಿಂಜರಿಕೆ: ಪಿ.ವಿ.ರಾಜಗೋಪಾಲ್

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2021, 7:20 IST
Last Updated 12 ಏಪ್ರಿಲ್ 2021, 7:20 IST
ತುಮಕೂರು ತಾಲ್ಲೂಕು ದೊಡ್ಡಹೊಸೂರು ಗ್ರಾಮದಲ್ಲಿ ಗಾಂಧಿ ಸಹಜ ಬೇಸಾಯಾಶ್ರಮ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆ ಮಾಡಲಾಯಿತು
ತುಮಕೂರು ತಾಲ್ಲೂಕು ದೊಡ್ಡಹೊಸೂರು ಗ್ರಾಮದಲ್ಲಿ ಗಾಂಧಿ ಸಹಜ ಬೇಸಾಯಾಶ್ರಮ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆ ಮಾಡಲಾಯಿತು   

ತುಮಕೂರು: ಜಾಗತಿಕ ಮಟ್ಟದಲ್ಲಿ ಹಿಂಸೆ ವೇಗವಾಗಿ ವ್ಯಾಪಿಸುತ್ತಿದೆ. ಜಗತ್ತನ್ನು ಕ್ಷಣ ಮಾತ್ರದಲ್ಲಿ ನಾಶಪಡಿಸುವ ಅಣ್ವಸ್ತ್ರಗಳು ವೇಗವಾಗಿ ಉತ್ಪಾದನೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಅಹಿಂಸೆಯ ವೇಗ ತೀವ್ರವಾಗಬೇಕು ಎಂದು ಏಕ್ತಾ ಪರಿಷತ್ ಸಂಸ್ಥಾಪಕ ಹಾಗೂ ಗಾಂಧೀವಾದಿ ಪಿ.ವಿ.ರಾಜಗೋಪಾಲ್ ಸಲಹೆ ಮಾಡಿದರು.

ತಾಲ್ಲೂಕಿನ ದೊಡ್ಡಹೊಸೂರು ಗ್ರಾಮದಲ್ಲಿ ರೈತ ರವೀಶ್ ತೋಟದಲ್ಲಿ ನಿರ್ಮಾಣಗೊಂಡ ಗಾಂಧಿ ಸಹಜ ಬೇಸಾಯಾಶ್ರಮ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ಅಹಿಂಸೆ ಬಗ್ಗೆ ಯುವ ಜನರಲ್ಲಿ ತಪ್ಪು ಕಲ್ಪನೆ ಬಿಂಬಿಸಲಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಎಚ್ಚರಿಸಿದರು.

ಅಹಿಂಸೆ ಬಗ್ಗೆ ಮಾತನಾಡಲು ಹಿಂಜರಿಯುವಂತಹ ಸಂದರ್ಭದಲ್ಲಿ ಗಾಂಧಿ ಸಹಜ ಬೇಸಾಯಾಶ್ರಮ ನಡೆಸುತ್ತಿರುವ ಪ್ರಯೋಗ ಶ್ಲಾಘನೀಯ. ಮಾತೃ ಸ್ವರೂಪವನ್ನು ಶೋಷಿಸುತ್ತಿದ್ದೇವೆ. ಗಂಗೆಯನ್ನು ಮಾಲಿನ್ಯ ಮಾಡಿದ್ದೇವೆ. ಭೂಮಿಗೆ ವಿಷವುಣಿಸುತ್ತಿದ್ದೇವೆ. ಹಾಗೆಯೇ ಸರಸ್ವತಿ, ಲಕ್ಷ್ಮಿಯರನ್ನು ಮಾತೆ ಎಂದು ಕರೆದು ದುರ್ಬಳಕೆ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.

ADVERTISEMENT

ರಂಗಕರ್ಮಿ ಪ್ರಸನ್ನ, ‘ಶ್ರಮಜೀವನದಲ್ಲಿ ನೆಮ್ಮದಿ ಇತ್ತು. ನಾವೀಗ ಅಸಹಜ ಪ್ರಾಣಿಯಾಗಿದ್ದೇವೆ. ರಾಮ, ಸೀತೆ, ಲಕ್ಷ್ಮಣರಿಗೆ ತಮ್ಮ 14 ವರ್ಷಗಳ ವನವಾಸದ ದಿನಗಳು ಸುಖ, ಶಾಂತಿ, ನೆಮ್ಮದಿಯನ್ನು ನೀಡಿದ್ದವು’ ಎಂದು ನೆನಪಿಸಿಕೊಂಡರು.

ವೇಗ, ಆವೇಗ, ಉದ್ವೇಗ ಕಳೆದುಕೊಳ್ಳದೆ ಸಹಜ ಬೇಸಾಯ ಮಾಡಲು ಸಾಧ್ಯವಿಲ್ಲ. ಭಾಷೆಯ ಅಳಿವಿಗೂ ಅಸಹಜ ಜೀವನ ಶೈಲಿಯೇ ಕಾರಣ. ಇವೆಲ್ಲವನ್ನು ಸಮಗ್ರವಾಗಿ ನೋಡುವುದನ್ನು ಆಶ್ರಮ ಹೇಳಿಕೊಡಬೇಕು. ರೈತರಿಗೆ ಮಾರುಕಟ್ಟೆ ವ್ಯವಸ್ಥೆ ಗೊತ್ತಿಲ್ಲ, ಅದನ್ನು ಹೇಳಿಕೊಡುವುದು, ಮರುರೂಪಿಸುವ ಕೆಲಸ ಆಗಬೇಕಿದೆ ಎಂದು ಸಲಹೆ ಮಾಡಿದರು.

ರಾಷ್ಟ್ರೀಯ ಸ್ವಾಭಿಮಾನ್ ಪರಿಷತ್ತಿನ ರಾಷ್ಟ್ರೀಯ ಸಂಯೋಜಕ ಬಸವರಾಜ್ ಪಾಟೀಲ ವೀರಾಪುರ, ‘ಕೃಷಿ ಅತಿಹೆಚ್ಚು ವೃತ್ತಿ ನೀಡುವ ಉದ್ಯಮ. ಬದಲಾವಣೆ ಇಲ್ಲಿಂದಲೇ ಆಗಬೇಕು. ವರ್ತೂರು ನಾರಾಯಣರೆಡ್ಡಿ ನಂತರ ಸಹಜ ಕೃಷಿಯನ್ನು ಮುನ್ನಡೆಸುವಂತಹ ಕಾರ್ಯವನ್ನು ಸಹಜ ಕೃಷಿ ವಿಜ್ಞಾನಿ ಎಚ್.ಮಂಜುನಾಥ್ ಅವರು ಆಶ್ರಮದ ಮೂಲಕ ಮಾಡುತ್ತಿದ್ದಾರೆ’ ಎಂದರು.

ಗುಡ್ ಅರ್ಥ್ ಸಂಸ್ಥೆ ಮುಖ್ಯಸ್ಥ ಸ್ಟಾನ್ಲಿ ಜಾರ್ಜ್, ‘ಜೀವ ವೈವಿಧ್ಯತೆಯ ಜತೆಗೆ ರಾಜಕೀಯ, ಆರ್ಥಿಕತೆ, ಕೃಷಿ ಎಲ್ಲವೂ ಸಹಜತೆ ಮತ್ತು ಆಧ್ಯಾತ್ಮಿಕತೆ ಒಳಗೊಳ್ಳಬೇಕು’ ಎಂದು ಆಶಿಸಿದರು.

ಸಹಜ ಬೇಸಾಯ ಶಾಲೆ ನಡೆದು ಬಂದ ಬಗ್ಗೆ ಸಿ.ಯತಿರಾಜು ತಿಳಿಸಿಕೊಟ್ಟರು. ಬಿ.ಮರುಳಯ್ಯ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕಿ ಅಭಿದಾಬೇಗಂ, ಡಾ.ನಾಗೇಂದ್ರ, ಡಾ.ಮಂಜುನಾಥ್ ಉಪಸ್ಥಿತರಿದ್ದರು. ‘ಅಗ್ರಿಕಲ್ಚರ್ ಎಸ್ಟರ್ಡೆ, ಟುಡೆ ಅಂಡ್ ಟುಮಾರೊ’ ಕೃತಿ ಲೋಕಾರ್ಪಣೆಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.