ADVERTISEMENT

ನರೇಗಾ ಸಮರ್ಪಕ ಜಾರಿಯಲ್ಲಿ ವಿಫಲ: ಶಾಸಕ ಡಾ. ಜಿ. ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2020, 7:08 IST
Last Updated 5 ಸೆಪ್ಟೆಂಬರ್ 2020, 7:08 IST
ಕೊರಟಗೆರೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಡಾ. ಜಿ. ಪರಮೇಶ್ವರ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದರು
ಕೊರಟಗೆರೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಡಾ. ಜಿ. ಪರಮೇಶ್ವರ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದರು   

ಕೊರಟಗೆರೆ: ತಾಲ್ಲೂಕಿನಲ್ಲಿ ಉದ್ಯೋಗಖಾತರಿ ಯೋಜನೆಯಡಿ ಸಮರ್ಪಕವಾಗಿ ಕಾಮಗಾರಿ ನಡೆದಿಲ್ಲ. 24 ಪಂಚಾಯಿತಿಯಿಂದ ಕೇವಲ 370 ಕೃಷಿ ಹೊಂಡ ನಿರ್ಮಿಸಲಾಗಿದೆ ಎಂದು ಶಾಸಕ ಡಾ. ಜಿ. ಪರಮೇಶ್ವರ ಹೇಳಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.

ಕೋವಿಡ್‌ನಿಂದಾಗಿ ಸರ್ಕಾರದಿಂದ ಹಣ ಬಿಡುಗಡೆಯಾಗುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿಗೆ ಪತ್ರ ಬರೆದು ಕ್ರಮ ವಹಿಸಬೇಕು ಎಂದು ಸೂಚಿಸಿದರು.

ADVERTISEMENT

ತೋಟಗಾರಿಕೆ ಇಲಾಖೆಯಿಂದ ಸ್ಥಳೀಯ ರೈತರಿಗೆ ಅನುಕೂಲವಾಗುವ ಯಾವ ಯೋಜನೆ ಸಿದ್ಧಪಡಿಸಿ ಪ್ರಸ್ತಾವ ಸಲ್ಲಿಸಿದ್ದೀರಿ. ಹೂವು ಬೆಳೆಗಾರರಿಗೆ ಸೌಲಭ್ಯ ತಲುಪಿಲ್ಲ. ಪ್ರಶ್ನಿಸಿದರೆ ನಿಯಮಗಳ ನೆಪ ಹೇಳುತ್ತೀರಿ. ಕಳೆದ ಸಭೆಯಲ್ಲಿ ಹೇಳಿದ್ದ ಯಾವ ಕೆಲಸಗಳನ್ನು ಸರಿಯಾಗಿ ಮಾಡಿಲ್ಲ ಎಂದ ಮೇಲೆ ನಿಮ್ಮ ಅಗತ್ಯ ನಮಗಿಲ್ಲ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಪುಷ್ಪ ಅವರನ್ನು ತರಾಟೆಗೆ ತಗೆದುಕೊಂಡರು.

ಎತ್ತಿಹೊಳೆ ಯೋಜನೆ ಪೈಪ್‌ಲೈನ್ ಹಾಗೂ ಸುರಂಗ ಕಾಮಗಾರಿಗೆ ಕೆಲವೆಡೆ ಅಧಿಕೃತವಾಗಿ ಭೂಸ್ವಾಧೀನವಾಗದಿದ್ದರೂ ಹಣ ನೀಡಿ ಕಾಮಗಾರಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಎತ್ತಿನಹೊಳೆ ಇಲಾಖೆ ಎಇಇ ಶ್ರೀಕಾಂತ್ ಅವರಿಗೆ ಸೂಚಿಸಿದರು.

ಅರಣ್ಯ ಇಲಾಖೆ ಅಧಿಕಾರಿಗಳು ಪ್ರತಿ ಸಭೆಯಲ್ಲಿ ಅಷ್ಟು ಸಾವಿರ, ಇಷ್ಟು ಸಾವಿರ ಗಿಡ ನೆಟ್ಟಿದ್ದೇವೆ ಎಂದು ಅಂಕಿ ಅಂಶ ನೀಡುತ್ತಾರೆ. ಆದರೆ ಇಲ್ಲಿವರೆಗೆ ಎಷ್ಟು ಗಿಡ ಬೆಳೆದಿವೆ ಎಂದು ತೋರಿಸಿಲ್ಲ. ಲೆಕ್ಕದಲ್ಲಿ ಇರುವಷ್ಟು ಗಿಡ ನೆಟ್ಟಿದ್ದರೆ ಇಷ್ಟೊತ್ತಿಗೆ ತಾಲ್ಲೂಕು ಸಹ್ಯಾದ್ರಿ ಕಾಡಾಗಿ ಮಾರ್ಪಾಡಾಗಬೇಕಿತ್ತು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಅಕ್ಕಮಹಾದೇವಿ, ಪ್ರೇಮಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಟಿ.ಸಿ.ರಾಮಯ್ಯ, ಉಪಾಧ್ಯಕ್ಷ ವೆಂಕಟಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಶಾಮಲ, ಕಾರ್ಯನಿರ್ವಹಣಾಧಿಕಾರಿ ಎಸ್.ಶಿವಪ್ರಕಾಶ್, ತಹಶೀಲ್ದಾರ್ ಬಿ.ಎಂ.ಗೋವಿಂದರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.