ಶಿರಾ: ನಗರಸಭೆ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಗೆ ಅಧಿಕಾರ ಹಿಡಿದಿರುವ ಕಾಂಗ್ರೆಸ್ ಸದಸ್ಯರೇ ಗೈರಾಗಿದ್ದು, ಅಚ್ಚರಿ ಮೂಡಿಸಿತು. 35 ಸದಸ್ಯರ ಪೈಕಿ 12 ಮಂದಿ ಮಾತ್ರ ಸಭೆಗೆ ಹಾಜರಾಗಿದ್ದರು. ಹಲವು ಸದಸ್ಯರ ಗೈರಿನ ಮಧ್ಯೆ ನಡೆದ ಸಭೆ ಗೊಂದಲಕ್ಕೆ ಕಾರಣವಾಯಿತು.
‘ನಗರಸಭೆ ಅಧ್ಯಕ್ಷ ಜಿಶಾನ್ ಮೊಹ್ಮದ್ ಮತ್ತು ಮತ್ತೊಬ್ಬ ಸದಸ್ಯರ ಮಧ್ಯೆ ಅಧಿಕಾರ ಹಂಚಿಕೆಯ ಒಪ್ಪಂದವಾಗಿದೆ. ಅವಧಿ ಮುಗಿದರೂ ಅಧ್ಯಕ್ಷ ಸ್ಥಾನ ಬಿಟ್ಟು ಕೊಡದ ಕಾರಣಕ್ಕೆ ಕಾಂಗ್ರೆಸ್ ಸದಸ್ಯರು ಸಭೆಯಿಂದ ದೂರ ಉಳಿದಿದ್ದರು’ ಎಂದು ಮೂಲಗಳು ತಿಳಿಸಿವೆ.
‘ಕೋರಂ ಇಲ್ಲದೆ ಸಾಮಾನ್ಯ ಸಭೆ ನಡೆಸುವಂತಿಲ್ಲ, ಈ ಸಭೆಗೆ ಕನಿಷ್ಠ ಹಾಜರಾತಿ ಇದೆಯಾ? ಎಂದು ನಗರಸಭೆ ಸದಸ್ಯೆ ಪೂಜಾ ಪೆದ್ದರಾಜು ಪ್ರಶ್ನಿಸಿದರು.
‘12 ಜನ ಭಾಗವಹಿಸಿದ್ದು, ಕೋರಂ ಇದೆ, ಸಭೆ ನಡೆಸಬಹುದು. ನಿಯಮಾವಳಿ ಪ್ರಕಾರ ನಾಮ ನಿರ್ದೇಶಕ ಸದಸ್ಯರನ್ನು ಕೋರಂಗೆ ಪರಿಗಣಿಸುವಂತಿಲ್ಲ’ ಎಂದು ನಗರಸಭೆ ಆಯುಕ್ತ ಕೆ.ರುದ್ರೇಶ್ ಸ್ಪಷ್ಟಪಡಿಸಿದರು.
‘ನಾಮ ನಿರ್ದೇಶನ ಸದಸ್ಯರನ್ನು ನೀವು ಗಣನೆಗೆ ತೆಗೆದುಕೊಂಡಿಲ್ಲ. ಸರ್ಕಾರದಿಂದ ನೇಮಕವಾದ ಸದಸ್ಯರನ್ನು ಪರಿಗಣಿಸಬೇಕು. ಕೋರಂ ಇಲ್ಲದ ಸಭೆಯು ಯಾವ ನಿರ್ಣಯ ತೆಗೆದುಕೊಳ್ಳುವುದನ್ನು ಒಪ್ಪುವುದಿಲ್ಲ’ ಎಂದು ಪೂಜಾ ಸಭೆಯಿಂದ ಹೊರ ನಡೆದರು.
ಕನಕ ಪಾರ್ಕ್ ಪಕ್ಕದ ರಸ್ತೆಯಲ್ಲಿ ಜಾಗ ತೆರವುಗೊಳಿಸಿ ಸುಗಮ ಸಂಚಾರ ಅನುವು ಮಾಡಿಕೊಡುವುದು. ನಗರದಲ್ಲಿ ಗುರುಭವನ ನಿರ್ಮಿಸಲು ನಗರಸಭೆಯಿಂದ ಅನುದಾನ ಮೀಸಲಿಡುವುದು. 11, 19 ಮತ್ತು 21ನೇ ವಾರ್ಡ್‌ನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಕಾಮಗಾರಿಗೆ ಮಂಜೂರಾತಿ ಸೇರಿ ಒಟ್ಟು 30 ವಿಷಯಗಳ ಕುರಿತು ಚರ್ಚಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.