ಕುಣಿಗಲ್: ತಾಲ್ಲೂಕಿನ ಕಾಡಮತ್ತಿಕೆರೆಯಲ್ಲಿ ಬುಧವಾರ ನಕಾಶೆ ರಸ್ತೆ ತೆರವಿಗೆ ಹೋದ ಅಧಿಕಾರಿಗಳಿಗೆ ಗ್ರಾಮಸ್ಥರ ಒಂದು ಗುಂಪು ಅಡ್ಡಿಪಡಿಸಿದ ಕಾರಣ ತೆರವು ಸ್ಥಗಿತಗೊಳಿಸಿ ಹಿಂತಿರುಗಿದರು.
ಕಾಡಮತ್ತಿಕೆರೆಯಿಂದ ರಂಗೇಗೌಡನಪಾಳ್ಯದ ರಸ್ತೆ ಒತ್ತುವರಿಯಾಗಿದ್ದು, ತೆರವುಗೊಳಿಸಲು ಕಂದಾಯ ಮತ್ತು ಸರ್ವೆ ಇಲಾಖೆ ಅಧಿಕಾರಿಗಳು ಪೊಲೀಸರ ಜತೆ ತೆರಳಿದ್ದರು. ಕಾರ್ಯಾಚರಣೆ ಪರ ಶ್ರೀನಿವಾಸ್ ಮತ್ತು ಬೆಂಬಲಿಗರು ನಿಂತಿದ್ದು, ವಿರೋಧವಾಗಿ ಕಳಸೆಗೌಡರ ಗುಂಪುಗಳಾಗಿದ್ದು, ಎರಡು ಗುಂಪುಗಳ ನಡುವೆ ತೀವ್ರ ವಾಗ್ವಾದ ನಡೆಯಿತು. ಕಳಸೆಗೌಡರ ಗುಂಪು ತೆರವಿಗೆ ಬಂದಿದ್ದ ಜೆಸಿಬಿಗೆ ಅಡ್ಡಲಾಗಿ ಕುಳಿತು ಪ್ರತಿಭಟಿಸಿದರು. ಎರಡು ಗುಂಪಿನ ನಡುವೆ ಹೊಂದಾಣಿಕೆಯಾಗದೆ ಸಮಸ್ಯೆ ಹೆಚ್ಚಾದಾಗ ಅಧಿಕಾರಿಗಳು ತೆರವು ಸ್ಥಗಿತಗೊಳಿಸಿ ತೆರಳಿದರು.
ಈ ಹಿಂದೆ ರಸ್ತೆ ತೆರವಿಗೆ ಹೋದ ಸಮಯದಲ್ಲೂ ಸಮಸ್ಯೆಯಾಗಿದ್ದು, ಗ್ರಾಮಸ್ಥರ ಒಪ್ಪಂದದ ಮೇರೆಗೆ ಪರ್ಯಾಯ ರಸ್ತೆಗೆ ಒಪ್ಪಿಗೆ ಸೂಚಿಸಿದ ಗ್ರಾಮಸ್ಥರ ಗುಂಪು ಅಂತಿಮ ಕ್ಷಣದಲ್ಲಿ ನಿರಾಕರಿಸಿದ ಕಾರಣ ಎಂದಿನಂತೆ ನಕಾಶೆ ರಸ್ತೆ ತೆರವಿಗೆ ಹೋದಾಗ ಸಮಸ್ಯೆಯಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಸರ್ವೆ ಇಲಾಖೆ ಅಧಿಕಾರಿಗಳು ಮೂರು ಬಾರಿ ಸರ್ವೆ ಮಾಡಿದ್ದಾರೆ. ಪ್ರತಿಬಾರಿಯೂ ಒಂದೊಂದೆಡೆ ನಕಾಶೆ ರಸ್ತೆ ತೋರಿಸಿದ್ದಾರೆ. ಇದರಿಂದಾಗಿ ಗ್ರಾಮದಲ್ಲಿ ಸಮಸ್ಯೆಯಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.