ADVERTISEMENT

ತಿಪಟೂರು | ಪಡಿತರ: ತೂಕದಲ್ಲಿ ಲೋಪ ಆರೋಪ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2025, 14:58 IST
Last Updated 2 ಫೆಬ್ರುವರಿ 2025, 14:58 IST
ಹಾಲ್ಕುರಿಕೆ ಪ್ರಾಥಮಿಕ ಕೃಷಿ ಸಹಕಾರ ಸಂಘದ ಪಡಿತರ ವಿತರಣೆ ತೂಕದಲ್ಲಿ ವ್ಯತ್ಯಾಸವಾಗುತ್ತಿದೆ ಎಂದು ಆರೋಪಿಸಿ ಹಾಲೇನಹಳ್ಳಿ ಗ್ರಾಮಸ್ಥರು ಗ್ರೇಡ್–2 ತಹಶೀಲ್ದಾರ್‌ಗೆ ದೂರು ನೀಡಿದರು
ಹಾಲ್ಕುರಿಕೆ ಪ್ರಾಥಮಿಕ ಕೃಷಿ ಸಹಕಾರ ಸಂಘದ ಪಡಿತರ ವಿತರಣೆ ತೂಕದಲ್ಲಿ ವ್ಯತ್ಯಾಸವಾಗುತ್ತಿದೆ ಎಂದು ಆರೋಪಿಸಿ ಹಾಲೇನಹಳ್ಳಿ ಗ್ರಾಮಸ್ಥರು ಗ್ರೇಡ್–2 ತಹಶೀಲ್ದಾರ್‌ಗೆ ದೂರು ನೀಡಿದರು   

ತಿಪಟೂರು: ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ ಹಾಲ್ಕುರಿಕೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಲ್ಲಿ ವಿತರಿಸುತ್ತಿರುವ ಪಡಿತರದಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಿ ಹಾಲೇನಹಳ್ಳಿ ಗ್ರಾಮಸ್ಥರು ತಿಪಟೂರು ತಹಶೀಲ್ದಾರ್ ಹಾಗೂ ಆಹಾರ ಇಲಾಖೆಗೆ ದೂರು ನೀಡಿದ್ದಾರೆ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಾಲೇನಹಳ್ಳಿ ಗ್ರಾಮದ ಬನಶಂಕರ್, ‘ಪಡಿತರ ವಿತರಣೆಯಲ್ಲಿ ಭಾರಿ ಪ್ರಮಾಣದ ಅವ್ಯವಹಾರ ನಡೆಸಲಾಗುತ್ತಿದೆ. ಪ್ರತಿ ಪಡಿತರ ಚೀಟಿಗೆ 150ಗ್ರಾಂ ನಿಂದ 300 ಗ್ರಾಂ ಆಹಾರ ಕಡಿತಗೊಳಿಸಿ ವಿತರಣೆ ಮಾಡುತ್ತಿದ್ದಾರೆ. ಹಾಲ್ಕುರಿಕೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಪಡಿತರ ಚೀಟಿಗಳಿದ್ದು ಪ್ರತಿ ಕಾರ್ಡ್‌ಗೆ 150 ಗ್ರಾಂ ಆಹಾರಧಾನ್ಯ ಕಡಿತಗೊಳಿಸಿದರೆ, ಪ್ರತಿ ತಿಂಗಳಲ್ಲಿ 5ರಿಂದ 6 ಕ್ವಿಂಟಲ್ ಬಡವರ ಪಾಲಿನ ಆಹಾರ ಧಾನ್ಯ ಉಳಿತಾಯವಾಗಲಿದೆ. ಇದನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತದೆ’ ಎಂದು ಆರೋಪಿಸಿದರು.

ಒಂದು ತಿಂಗಳ ಪಡಿತರ ಧಾನ್ಯ ಪಡೆಯಲು ಕನಿಷ್ಟ ಎರಡರಿಂದ ಮೂರುದಿನ ಕೂಲಿ ಬಿಟ್ಟು ಕಾಯಬೇಕು. ಅಂದು ಟೋಕನ್ ಸಿಗದಿದ್ದರೆ, ಮರುದಿನ ಕೂಲಿ ಬಿಟ್ಟು ಕಾಯಬೇಕು. ಪಡಿತರ ಧಾನ್ಯ ಪಡೆಯುವವರು ಕಡ್ಡಾಯವಾಗಿ ಉಪ್ಪು, ಸೋಪು, ಪುಳಿಯೊಗರೆ ಪ್ಯಾಕೇಟ್, ಪಾಮ್ ಆಯಿಲ್, ಕಾರದ ಪುಡಿ ಸೇರಿದಂತೆ ಸೊಸೈಟಿಯವರ ಕೊಡುವ ವಸ್ತುಗಳನ್ನು ತೆಗೆದುಕೊಳ್ಳಬೇಕು. ಅವರು ನೀಡುವ ವಸ್ತುಗಳನ್ನು ತೆಗೆದುಕೊಳ್ಳದಿದ್ದರೆ, ಪಡಿತರ ಧಾನ್ಯ ನೀಡದೆ ವಾಪಾಸ್ ಕಳಿಸುತ್ತಾರೆ ಎಂದರು.

ADVERTISEMENT

ಹಾಲೇನಹಳ್ಳಿ ಬೋವಿಕಾಲೊನಿ, ಗೊಲ್ಲರಹಟ್ಟಿ, ಹೊಸೂರು, ಗ್ರಾಮಗಳಿಗೆ ಅನುಕೂಲವಾಗುವಂತೆ ಪಡಿತರ ವಿತರಣೆ ಕೇಂದ್ರದಲ್ಲೂ ಇದೇ ರೀತಿ ಅವ್ಯವಹಾರ ನಡೆಯುತ್ತಿದೆ. ಈ ಬಗ್ಗೆ ತಹಶೀಲ್ದಾರ್ ಹಾಗೂ ಆಹಾರ ನಿರೀಕ್ಷಕರಿಗೆ ದೂರು ನೀಡಿದ್ದೇವೆ. ನ್ಯಾಯ ಸಿಗುವವರೆಗೆ ಹೋರಾಡುತ್ತೇವೆ ಎಂದು ಹಾಲ್ಕುರಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರವೀಶ್ ಮಾತನಾಡಿ, ಪಡಿತರ ವಿತರಣೆಯಲ್ಲಿ ಆಗುತ್ತಿರುವ ಅನ್ಯಾಯದ ಬಗ್ಗೆ ನಾಲ್ಕೈದು ಬಾರಿ ಪ್ರಶ್ನೆ ಮಾಡಿದ್ದೇವೆ ಆದರೂ ಪ್ರಯೋಜನವಾಗಿಲ್ಲ ಎಂದರು.

ಗೋಷ್ಠಿಯಲ್ಲಿ ಆನಂದ್, ರವಿ, ಕಾಂತರಾಜು, ಚೇತನ್ ದಿನೇಶ್ ಉಪಸ್ಥಿತರಿದ್ದರು.

ಹಾಲೇನಹಳ್ಳಿ ಗ್ರಾಮಸ್ಥರ ಪತ್ರಿಕಾ ಘೋಷ್ಠಿ
ಪಡಿತರ ತೂಕದಲ್ಲಿ ವ್ಯತ್ಯಾಸವಾಗುತ್ತಿದೆ ಎಂದು ಹಾಲೇನಹಳ್ಳಿ ಗ್ರಾಮಸ್ಥರು ಶನಿವಾರ ದೂರು ನೀಡಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು
ಕಿರಣ್‌ಕುಮಾರ್ ಆಹಾರ ಶಿರಸ್ತೇದಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.