ADVERTISEMENT

ಆನ್‌ಲೈನ್‌ ಪರೀಕ್ಷೆ ತಂದ ಆತಂಕ

ಐಟಿಐ ಕೋರ್ಸ್‌ಗಳ ವಾರ್ಷಿಕ ಪರೀಕ್ಷೆಯಲ್ಲಿ ಬದಲಾವಣೆ

ಪೀರ್‌ ಪಾಶ, ಬೆಂಗಳೂರು
Published 11 ಫೆಬ್ರುವರಿ 2020, 17:06 IST
Last Updated 11 ಫೆಬ್ರುವರಿ 2020, 17:06 IST
ಪ್ರಜಾವಾಣಿ ಸಂಗ್ರಹ ಚಿತ್ರ
ಪ್ರಜಾವಾಣಿ ಸಂಗ್ರಹ ಚಿತ್ರ   

ತುಮಕೂರು: ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿನ (ಐಟಿಐ) ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯನ್ನು ಆನ್‌ಲೈನ್ ಮೂಲಕ ನಡೆಸಲು ಕೇಂದ್ರ ಸರ್ಕಾರದ ತರಬೇತಿ ಮಹಾ ನಿರ್ದೇಶನಾಲಯ (ಡಿಜಿಟಿ) ನಿರ್ಧರಿಸಿದೆ.

ಸರ್ಕಾರದ ಈ ನಿರ್ಧಾರ ಐಟಿಐ ವಿದ್ಯಾರ್ಥಿಗಳಲ್ಲಿ ಅಸಮಾಧಾನ ಮತ್ತು ಆತಂಕವನ್ನು ತಂದಿದೆ. ವೃತ್ತಿಪರ ತರಬೇತಿ ರಾಷ್ಟ್ರೀಯ ಮಂಡಳಿಯಿಂದ (ಎನ್‌ಸಿವಿಟಿ) ಅನುಮೋದಿತ ಐಟಿಐ ಕೋರ್ಸ್‌ಗಳಿಗೆ (ಟ್ರೇಡ್) ಈಗ ಆನ್‌ಲೈನ್ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.

ಥಿಯರಿ, ಕಾರ್ಯಾಗಾರ ಕಲಿಕೆ ಮೌಲ್ಯಮಾಪನ, ಔದ್ಯೋಗಿಕ ಕೌಶಲಗಳಿಗೆ ಸಂಬಂಧಿಸಿದ ಪ್ರಶ್ನೆಪತ್ರಿಕೆಗಳಿಗೆ ಕಡ್ಡಾಯವಾಗಿ ಆನ್‌ಲೈನ್‌ನಲ್ಲಿ ಬಹು ಆಯ್ಕೆ ಮಾದರಿಯಲ್ಲಿ ಉತ್ತರಿಸಬೇಕಿದೆ. ಪ್ರಶ್ನೆಪತ್ರಿಕೆ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಇರುತ್ತದೆ ಎಂದು ನಿರ್ದೇಶನಾಲಯದ ಮೂಲಗಳು ತಿಳಿಸಿವೆ.

ADVERTISEMENT

‘ಯಾವುದೇ ತರಬೇತಿ ನೀಡದೆ ದಿಢೀರನೆ ಈ ಆನ್‌ಲೈನ್ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ. ಈ ಪರೀಕ್ಷೆಯಿಂದ ಅನುತ್ತೀರ್ಣರಾಗುವವರ ಪ್ರಮಾಣ ಹೆಚ್ಚಲಿದೆ’ ಎಂದು ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

‘ಆನ್‌ಲೈನ್‌ ಪರೀಕ್ಷೆಯಲ್ಲಿ ಮಾದರಿ ಪ್ರಶ್ನೆಪತ್ರಿಕೆ ಬಿಡಿಸುವುದನ್ನು ಹೇಳಿಕೊಡುತ್ತಿದ್ದಾರೆ. ಆದರೆ ಅರ್ಥವಾಗುತ್ತಿಲ್ಲ. ನಮಗೆ ಆಫ್‌ಲೈನ್ ಪರೀಕ್ಷೆ ಇದ್ದರೆ ಒಳ್ಳೆಯದು' ಎಂದು ತುಮಕೂರಿನ ಎಚ್.ಎಂ.ಎಸ್ ಐಟಿಐ ವಿದ್ಯಾರ್ಥಿನಿಯೊಬ್ಬರು ತಿಳಿಸಿದರು.

‘ಈಗ ಒಂದು ವಾರದಿಂದ ಆನ್‌ಲೈನ್‌ ಪರೀಕ್ಷೆ ಬಗ್ಗೆ ತಿಳಿಸುತ್ತಿದ್ದಾರೆ. ಎಲ್ಲರೂ ಒಟ್ಟಿಗೆ ಕುಳಿತು ಮಾದರಿ ಪ್ರಶ್ನೆಪತ್ರಿಕೆಗೆ ಉತ್ತರಿಸುವಷ್ಟು ಸುಸ್ಥಿತಿಯಲ್ಲಿನ ಕಂಪ್ಯೂಟರ್‌ಗಳು ನಮ್ಮ ಕಾಲೇಜಿನಲ್ಲಿ ಇಲ್ಲ. ಈ ಬದಲಾವಣೆಯಿಂದ ಭಯ ಆಗಕತ್ತಾದ್ರಿ’ ಎಂದು ರಾಯಚೂರಿನ ಲಿಂಗಸೂಗೂರು ಸರ್ಕಾರಿ ಐಟಿಐ ವಿದ್ಯಾರ್ಥಿಯೊಬ್ಬರು ಅಳಲು ತೋಡಿಕೊಂಡರು.

‘ಐಟಿಐ ಕೋರ್ಸ್‌ಗಳಿಗೆ ಗ್ರಾಮಾಂತರ ಪ್ರದೇಶದವರೇ ಹೆಚ್ಚು ದಾಖಲಾಗುತ್ತಾರೆ. ಅವರಿಗೆ ಕಂಪ್ಯೂಟರ್ ಶಿಕ್ಷಣ ಸರಿಯಾಗಿ ದೊರೆತಿರುವುದಿಲ್ಲ. ಇಂಗ್ಲಿಷ್ ಮೇಲೂ ಹಿಡಿತ ಇರುವುದಿಲ್ಲ. ಆನ್‌ಲೈನ್‌ ಪರೀಕ್ಷೆ ವಿದ್ಯಾರ್ಥಿಗಳ ಮಾನಸಿಕ ಒತ್ತಡ ಹೆಚ್ಚಿಸುತ್ತದೆ. ಅಲ್ಲದೆ ಪರೀಕ್ಷಾ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆ ಮಾಡುವಾಗ ವಿದ್ಯಾರ್ಥಿಗಳಿಗೆ ಈ ಕುರಿತು ಅರಿವು ಮೂಡಿಸಬೇಕು. ತರಬೇತಿ ನೀಡಬೇಕು’ ಎಂದು ಭಾರತೀಯ ವಿದ್ಯಾರ್ಥಿ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಗುರುರಾಜ್ ದೇಸಾಯಿ ತಿಳಿಸಿದರು.

‘ವಾರದಲ್ಲಿ ಪರೀಕ್ಷಾ ವೇಳಾಪಟ್ಟಿ’

‘ತಾಂತ್ರಿಕ ಸೌಕರ್ಯಗಳು ಇರುವ ಶಿಕ್ಷಣ ಸಂಸ್ಥೆಗಳಲ್ಲಿಯೇಆನ್‌ಲೈನ್‌ ಪರೀಕ್ಷೆಯನ್ನು ಖಾಸಗಿ ಏಜೆನ್ಸಿಗಳ ಮೂಲಕ ನಡೆಸುತ್ತೇವೆ. ವಾರದಲ್ಲಿ ಪರೀಕ್ಷಾ ವೇಳಾಪಟ್ಟಿ ಪ್ರಕಟವಾಗಲಿದೆ’ ಎಂದು ತರಬೇತಿ ಮಹಾ ನಿರ್ದೇಶನಾಲಯದ (ಡಿಜಿಟಿ) ಉಪನಿರ್ದೇಶಕ ಕೃದಾನಂದ್ ಸಿಂಗ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪರೀಕ್ಷಾ ಬದಲಾವಣೆ ಕುರಿತು ಎಲ್ಲ ರಾಜ್ಯಗಳ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಗಳಿಗೆ ವರ್ಷದ ಹಿಂದೆಯೇ ಸುತ್ತೋಲೆ ನೀಡಿದ್ದೆವು. ವಿದ್ಯಾರ್ಥಿಗಳು http://nimionlinetesting.in ಜಾಲತಾಣದಲ್ಲಿ ಮಾದರಿ ಪ್ರಶ್ನೆಪತ್ರಿಕೆಗಳಿಗೆ ಉತ್ತರಿಸಿ, ಪರೀಕ್ಷೆಗೆ ತಯಾರಿ ಮಾಡಿಕೊಳ್ಳಬಹುದು’ ಎಂದು ಮಾಹಿತಿ ನೀಡಿದರು.

***

ಅಂಕಿ–ಅಂಶ‌

* 1,430 – ಎನ್‌ಸಿವಿಟಿ ಕೋರ್ಸ್‌ ನಡೆಸುತ್ತಿರುವ ರಾಜ್ಯದಲ್ಲಿನ ಐಟಿಐಗಳು

* 80,758 –ಎನ್‌ಸಿವಿಟಿ ಕೋರ್ಸ್‌ಗಳ ಐಟಿಐ ಮಾಡುತ್ತಿರುವ ರಾಜ್ಯದ ವಿದ್ಯಾರ್ಥಿಗಳು

* 23,14,000 –ದೇಶದಲ್ಲಿನ ಐಟಿಐಗಳಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.