ADVERTISEMENT

ತುಮಕೂರು| ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಆಮಿಷ: ಪ್ರಾಧ್ಯಾಪಕನಿಗೆ ₹59 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 5:53 IST
Last Updated 13 ಸೆಪ್ಟೆಂಬರ್ 2025, 5:53 IST
ಸೈಬರ್‌
ಸೈಬರ್‌   

ತುಮಕೂರು: ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿ, ದುಪ್ಪಟ್ಟು ಲಾಭ ಗಳಿಸಬಹುದು ಎಂಬ ಆಮಿಷಕ್ಕೆ ಒಳಗಾಗಿ ನಗರ ಹೊರವಲಯದ ದೇವರಾಯಪಟ್ಟಣದ ಪ್ರಾಧ್ಯಾಪಕ ವಿಲಾಸ್‌ ಎಂ.ಕಂದ್ರೋಳಕರ್‌ ₹59.21 ಲಕ್ಷ ಕಳೆದುಕೊಂಡಿದ್ದಾರೆ.

ಮನೆಯಲ್ಲಿ ಕುಳಿತು ಆನ್‌ಲೈನ್‌ ಟ್ರೇಡಿಂಗ್‌ನಲ್ಲಿ ಹಣ ಗಳಿಸುವ ಬಗ್ಗೆ ಜಾಹೀರಾತು ವೀಕ್ಷಿಸಿದ್ದಾರೆ. ‘ಏನು ಕೆಲಸ’ ಅಂತ ಮೆಸೇಜ್‌ ಮಾಡಿದ್ದಕ್ಕೆ ಅವರ ನಂಬರ್‌ ಅನ್ನು C-10 Raag Rhythms, VIP-126 Faerpe Inner Room ವಾಟ್ಸ್‌ ಆ್ಯಪ್‌ ಗ್ರೂಪ್‌ಗೆ ಸೇರಿಸಿದ್ದಾರೆ. ‘ನಾನು ಹೇಳಿದಂತೆ ಹಣ ವರ್ಗಾವಣೆ ಮಾಡಿದರೆ, ಅದನ್ನು ನಾವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ನಿಮಗೆ ಲಾಭ ನೀಡುತ್ತೇವೆ’ ಎಂದು ಆರೋಪಿಗಳು ತಿಳಿಸಿದ್ದಾರೆ.

‘Faer PE’ ಎಂಬ ಆ್ಯಪ್‌ ಇನ್‌ಸ್ಟಾಲ್‌ ಮಾಡಿ ಅಗತ್ಯ ವಿವರ ಸಲ್ಲಿಸಿದ್ದಾರೆ. ಮೊದಲ ಬಾರಿಗೆ ₹10 ಸಾವಿರ ಹೂಡಿಕೆ ಮಾಡಿದ್ದು, ₹2 ಸಾವಿರ ಲಾಭಾಂಶ ಎಂದು ವಾಪಸ್‌ ಹಾಕಿದ್ದಾರೆ. ಲಾಭದ ಹಣ ನೀಡಿದ ನಂತರ ಆರೋಪಿಗಳನ್ನು ನಂಬಿ ಹಂತ ಹಂತವಾಗಿ ಒಟ್ಟು ₹59.21 ಲಕ್ಷ ಹಣವನ್ನು ವಿವಿಧ ಬ್ಯಾಂಕ್‌ ಖಾತೆಗಳಿಗೆ ವರ್ಗಾಯಿಸಿದ್ದಾರೆ.

ADVERTISEMENT

ಹೂಡಿಕೆ ಮಾಡಿದ ಹಣ ವಾಪಸ್‌ ಕೇಳಿದಾಗ ಇನ್ನೂ ₹20 ಲಕ್ಷ ವರ್ಗಾಯಿಸಿದರೆ ಮಾತ್ರ ಬಾಕಿ ಹಣ ನೀಡಲಾಗುವುದು ಎಂದಿದ್ದಾರೆ. ಇದರಿಂದ ಅನುಮಾನ ಬಂದು ಸ್ನೇಹಿತರ ಬಳಿ ವಿಚಾರಿಸಿದಾಗ ಮೋಸ ಹೋಗಿರುವುದು ಗೊತ್ತಾಗಿದೆ. ಮೋಸ ಮಾಡಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ವಿಲಾಸ್‌ ಸೈಬರ್‌ ಠಾಣೆ ಮೆಟ್ಟಿಲು ಹತ್ತಿದ್ದು, ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.