ADVERTISEMENT

ಪರೀಕ್ಷಾ ಶುಲ್ಕ ಹೆಚ್ಚಳಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 5:08 IST
Last Updated 28 ಸೆಪ್ಟೆಂಬರ್ 2022, 5:08 IST
ತುಮಕೂರು ವಿ.ವಿ ಕುಲಪತಿ ಕಚೇರಿ ಎದುರು ಪರೀಕ್ಷಾ ಶುಲ್ಕ ಕಡಿಮೆ ಮಾಡುವಂತೆ ಆಗ್ರಹಿಸಿ ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು
ತುಮಕೂರು ವಿ.ವಿ ಕುಲಪತಿ ಕಚೇರಿ ಎದುರು ಪರೀಕ್ಷಾ ಶುಲ್ಕ ಕಡಿಮೆ ಮಾಡುವಂತೆ ಆಗ್ರಹಿಸಿ ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು   

ತುಮಕೂರು: ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪದವಿ ಕಾಲೇಜು ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್‍ಗಳ ಪರೀಕ್ಷಾ ಶುಲ್ಕ ಹೆಚ್ಚಳ ಮಾಡಿರುವುದನ್ನು ವಿರೋಧಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಮಂಗಳವಾರ ವಿ.ವಿ ಕುಲಪತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಹೆಚ್ಚಳ ಮಾಡಿರುವ ಪರೀಕ್ಷಾ ಶುಲ್ಕವನ್ನು ಕಡಿಮೆ ಮಾಡಬೇಕು. ವಿದ್ಯಾರ್ಥಿಗಳಿಗೆ ನೆರವಾಗುವ ರೀತಿಯಲ್ಲಿ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಎಸ್‍ಎಫ್‍ಐ ಜಿಲ್ಲಾ ಘಟಕದ ಅಧ್ಯಕ್ಷ ಈ. ಶಿವಣ್ಣ, ‘ಪರೀಕ್ಷಾ ಶುಲ್ಕ, ದಾಖಲಾತಿ ಶುಲ್ಕಗಳು ಅವೈಜ್ಞಾನಿಕವಾಗಿದ್ದು ವಿ.ವಿ ವ್ಯಾಪ್ತಿಗೆ ಬರುವ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಒಂದೊಂದು ಕಾಲೇಜಿನಲ್ಲಿ ಒಂದೊಂದು ರೀತಿಯಲ್ಲಿ ಶುಲ್ಕ ಪಾವತಿಸಿಕೊಳ್ಳಲಾಗುತ್ತಿದೆ. ಇದರಿಂದ ಸಾವಿರಾರು ವಿದ್ಯಾರ್ಥಿಗಳು ಗೊಂದಲಕ್ಕೆ ಸಿಲುಕಿದ್ದಾರೆ. ಹೀಗಾಗಿ ಹೆಚ್ಚಿಸಿರುವ ಶುಲ್ಕವನ್ನು ವಾಪಸ್ ಪಡೆಯಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲಿ ಪರೀಕ್ಷಾ ಶುಲ್ಕ ಪಾವತಿ ಮಾಡಲಾಗಿದೆ. ಕೆಲವು ಪದವಿ ಪರೀಕ್ಷೆಗಳು ನಡೆಯದಿದ್ದರೂ ಶುಲ್ಕ ಕಟ್ಟಿಸಿಕೊಳ್ಳಲಾಗಿದೆ. ಶುಲ್ಕ ಹಿಂದಿರುಗಿಸುವುದಾಗಿ ಹೇಳಿಯೂ ವಾಪಸ್ ನೀಡಿಲ್ಲ. ಮತ್ತೆ ಒಂದೇ ವರ್ಷದಲ್ಲಿ ಮೂರು ಬಾರಿ ಪರೀಕ್ಷಾ ಶುಲ್ಕ ಪಾವತಿಸಿಕೊಳ್ಳಲಾಗಿದೆ ಎಂದರು.

ನಗರ ಘಟಕದ ಅಧ್ಯಕ್ಷ ಶಶಿವರ್ಧನ್, ‘ಸರ್ಕಾರಿ ಕಾಲೇಜುಗಳಲ್ಲಿ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಇಷ್ಟೊಂದು ಪ್ರಮಾಣದ ಪರೀಕ್ಷಾ ಶುಲ್ಕ ಪಾವತಿಸಲು ಕಷ್ಟಕರವಾಗುತ್ತಿದೆ’ ಎಂದರು.

ಮುಖಂಡ ಜಿ.ಕೆ. ನಾಗಣ್ಣ, ‘ಪರೀಕ್ಷಾ ಶುಲ್ಕ ಪಾವತಿಸಿಕೊಳ್ಳುವ ದಿನಾಂಕ ವಿಸ್ತರಿಸಬೇಕು. ಶುಲ್ಕ ವಿಚಾರದಲ್ಲಿ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದು, ಅದನ್ನು ಸರಿಪಡಿಸಲು ವಿ.ವಿ ಮುಂದಾಗಬೇಕು’ ಎಂದು ಒತ್ತಾಯಿಸಿದರು.

ಸಂಘಟನೆ ಪದಾಧಿಕಾರಿಗಳಾದ ನವೀನ್, ಅಜಯ್, ಪಾವನಿ, ಸೌಮ್ಯ, ಶಶಿಕಲಾ, ರಾಧಿಕಾ, ಚಂದ್ರಕಲಾ, ಸೂಫಿಯ, ಪಾವನ
ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.