ADVERTISEMENT

ಅಲ್ಪಸಂಖ್ಯಾತರ ಅನುದಾನ ಕಡಿತಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2021, 3:08 IST
Last Updated 17 ಫೆಬ್ರುವರಿ 2021, 3:08 IST
ತುಮಕೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ತುಮಕೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ತುಮಕೂರು: ‘ಅರಿವು’ ಶೈಕ್ಷಣಿಕ ಸಾಲದ ಯೋಜನೆಯ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಕಾಂಗ್ರೆಸ್ ಅಲ್ಪಸಂಖ್ಯಾತರ ಜಿಲ್ಲಾ ಘಟಕದ ನೇತೃತ್ವದಲ್ಲಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಅಲ್ಪಸಂಖ್ಯಾತರಸಮುದಾಯದ ಶೈಕ್ಷಣಿಕ ಪ್ರಗತಿಗೆ ನೀಡುತ್ತಿದ್ದ ಅರಿವು ಸಾಲ ಯೋಜನೆಯ ಅನುದಾನದಲ್ಲಿ ಸಾಕಷ್ಟು ಕಡಿತ ಮಾಡಲಾಗಿದೆ. ಕಡಿತ ಮಾಡಿರುವ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅತೀಕ್ ಅಹಮದ್
ಆಗ್ರಹಿಸಿದರು.

ಕಳೆದ ಎರಡು ವರ್ಷಗಳಿಂದಲೂ ಅನುದಾನ ಕಡಿಮೆ ಮಾಡಲಾಗುತ್ತಿದೆ. 2018-19ರಲ್ಲಿ ₹150 ಕೋಟಿ, 2019-20ರಲ್ಲಿ ₹160 ಕೋಟಿ ನೀಡಲಾಗಿದೆ. ಆದರೆ 2020-21ರಲ್ಲಿ ಕೇವಲ ₹30 ಕೋಟಿ ಕೊಡಲಾಗಿದೆ. ಇದರಿಂದ ಈ ಹಿಂದಿನ ಸಾಲುಗಳಲ್ಲಿ ಕಲಿಯುತ್ತಿರುವ ಮಕ್ಕಳ ಶುಲ್ಕ ಕಟ್ಟಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ADVERTISEMENT

ಕಳೆದ ವರ್ಷದ ಬಜೆಟ್‍ನಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ ₹227 ಕೋಟಿ ಅನುದಾನ ನೀಡ
ಲಾಗಿದ್ದು, 2020-21ರಲ್ಲಿ ₹71 ಕೋಟಿ ಕೊಡಲಾಗಿದೆ. ಹೊಸದಾಗಿ ಶೈಕ್ಷಣಿಕ ಸಾಲಕ್ಕೆ ಅರಿವು ಯೋಜನೆಯಡಿ ಅರ್ಜಿ ಸಲ್ಲಿಸಿದವರಿಗೆ ಸಾಲ ಸೌಲಭ್ಯ ಮರೀಚಿಕೆಯಾಗಿದೆ. ನವೀಕರಣದ ಅರ್ಜಿಗಳಿಗೆ ಪೂರ್ಣ ಪ್ರಮಾಣದ ಸಾಲಸೌಲಭ್ಯ ಒದಗಿಸಲು ಬಿಡುಗಡೆಯಾಗಿರುವ ಹಣ ಸಾಲದಾಗಿದೆ ಎಂದರು.

ಅಲ್ಯಸಂಖ್ಯಾತರ ಕಲ್ಯಾಣ ಇಲಾಖೆಗೂ ವರ್ಷದಿಂದ ವರ್ಷಕ್ಕೆ ನೀಡುತ್ತಿದ್ದ ಅನುದಾನ ಕಡಿತ ಮಾಡ
ಲಾಗಿದೆ. 2019–20ರಲ್ಲಿ ₹2012 ಕೋಟಿ ಇದ್ದ ಅನುದಾನ, 2020–21ರಲ್ಲಿ ₹812 ಕೋಟಿಗೆ ಇಳಿಕೆ ಮಾಡಲಾಗಿದೆ. ಇದು ಅಲ್ಪಸಂಖ್ಯಾತರನ್ನು ಅಭಿವೃದ್ಧಿಯಿಂದ ವಂಚಿಸುವ ಹುನ್ನಾರವಾಗಿದೆ ಎಂದು ದೂರಿದರು.

ರಾಜ್ಯ, ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದು, ಅಲ್ಪಸಂಖ್ಯಾತರ ಅಭಿವೃದ್ಧಿ ಕಡೆಗಣಿಸಿವೆ. ಕೋವಿಡ್–19 ಮಹಾಮಾರಿ ನೆಪದಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ನೀಡುತ್ತಿದ್ದ ಅನುದಾನ ಕಡಿತಗೊಳಿಸಿ, ಅನ್ಯಾಯ ಮಾಡಲಾಗಿದೆ. ಸಮರ್ಪಕವಾಗಿ ಅನುದಾನ ಬಿಡುಗಡೆ ಮಾಡಬೇಕು. ಇಲ್ಲವಾದರೆ ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದುಎಚ್ಚರಿಸಿದರು.

ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಸಂಜೀವ್‍ ಕುಮಾರ್, ಮುಬಾರಕ್ ಪಾಷ, ನೀಷಾ, ಥಾಮ್ಸನ್, ಜಾಜ್, ವಿಜಯಕುಮಾರ್, ದಾದಾಪೀರ್, ಪ್ರಕಾಶ್, ಶಿವಾಜಿ, ಅಬ್ದುಲ್ ರಹೀಂ ಭಾಗವಹಿಸಿದ್ದರು.

ಉಪವಿಭಾಗಾಧಿಕಾರಿ ಅಜೇಯ್ ಅವರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.