ADVERTISEMENT

ಸದಾಶಿವ ವರದಿ ಜಾರಿಗೆ ವಿರೋಧ

ಕೊರಚ, ಕೊರಮ, ಲಂಬಾಣಿ, ಭೋವಿ ಸಮುದಾಯಗಳ ಒಕ್ಕೂಟದ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 16:42 IST
Last Updated 30 ಸೆಪ್ಟೆಂಬರ್ 2020, 16:42 IST
ತುಮಕೂರಿನಲ್ಲಿ ಬುಧವಾರ ಸದಾಶಿವ ಆಯೋಗದ ವರದಿ ಜಾರಿಗೆ ವಿರೋಧಿಸಿ ಕೊರಚ, ಕೊರಮ, ಲಂಬಾಣಿ, ಭೋವಿ ಸಮುದಾಯಗಳ ಮುಖಂಡರು ಪ್ರತಿಭಟನೆ ನಡೆಸಿದರು
ತುಮಕೂರಿನಲ್ಲಿ ಬುಧವಾರ ಸದಾಶಿವ ಆಯೋಗದ ವರದಿ ಜಾರಿಗೆ ವಿರೋಧಿಸಿ ಕೊರಚ, ಕೊರಮ, ಲಂಬಾಣಿ, ಭೋವಿ ಸಮುದಾಯಗಳ ಮುಖಂಡರು ಪ್ರತಿಭಟನೆ ನಡೆಸಿದರು   

ತುಮಕೂರು: ಒಳಮೀಸಲಾತಿ ಸಂಬಂಧ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ನೀಡಿರುವ ವರದಿಯನ್ನು ಯಥಾವತ್ ಜಾರಿಮಾಡದಂತೆ ಆಗ್ರಹಿಸಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ಹಾಗೂ ಕೊರಚ, ಕೊರಮ, ಲಂಬಾಣಿ, ಭೋವಿ ಸಮುದಾಯಗಳ ಒಕ್ಕೂಟದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಯಿತು.

ಕೊರಚ, ಕೊರಮ, ಲಂಬಾಣಿ, ಭೋವಿ ಸಮುದಾಯಗಳಿಗೆ ಒಳಮೀಸಲಾತಿ ಜಾರಿ ಮಾಡುವ ಮೂಲಕ ಅನ್ಯಾಯ ಮಾಡಬಾರದು ಎಂದು ಸಮುದಾಯದ ಮುಖಂಡರು ಆಗ್ರಹಿಸಿದರು.

ರಾಜ್ಯದಲ್ಲಿ ಸೈಮನ್ ಆಯೋಗ ರಚನೆಯಾದ ಕಾಲದಿಂದಲೂ ಭೋವಿ ಸಮುದಾಯಕ್ಕೆ ಮೀಸಲಾತಿ ನೀಡಲಾಗುತ್ತಿದೆ. ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾದ ಒಡೆಯರ್ ಸಹ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಿ ಮೀಸಲಾತಿ ಕಲ್ಪಿಸಿದ್ದರು. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಈ ಮೀಸಲಾತಿಯನ್ನು ರಾಜ್ಯಕ್ಕೆ ವಿಸ್ತರಿಸಿದರು. ಇಂದಿಗೂ ಸಮುದಾಯ ಅಲೆಮಾರಿ ಜೀವನವನ್ನೇ ನಡೆಸುತ್ತಿದ್ದು, ಸೌಕರ್ಯಗಳಿಂದ ವಂಚಿತವಾಗಿದೆ ಎಂದು ಭೋವಿ ಸಮುದಾಯದ ಮುಖಂಡ ಎಸ್.ಮಂಜುನಾಥ್ ಹೇಳಿದರು.

ADVERTISEMENT

ಭೋವಿ ಸಮುದಾಯ ಸ್ಪೃಶ್ಯ ಜನಾಂಗ ಎಂಬುದನ್ನೇ ನೆಪಮಾಡಿಕೊಂಡು ಮೀಸಲಾತಿ ನಿರಾಕರಣೆ ಮಾಡುವುದು ಸಂವಿಧಾನಕ್ಕೆ ವಿರುದ್ಧವಾದದ್ದು. ಸಂವಿಧಾನದಲ್ಲಿ ಅಸ್ಪೃಶ್ಯ ಜನಾಂಗಗಳಿಗೆ ಮಾತ್ರ ಮೀಸಲಾತಿ ನೀಡಬೇಕು ಎಂದು ಹೇಳಿಲ್ಲ. ಮೀಸಲಾತಿಯು ಸ್ಪೃಶ್ಯ ಹಾಗೂ ಅಸ್ಪೃಶ್ಯ ಜನಾಂಗಗಳ ಸಂವಿಧಾನಬದ್ಧ ಹಕ್ಕು. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮಾನದಂಡಗಳ ಆಧಾರದ ಮೇಲೆ ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಬಂಜಾರ ಸಮುದಾಯದ ಅಧ್ಯಕ್ಷ ನಾರಾಯಣ ನಾಯಕ್, ಕೊರಮ ಸಮುದಾಯದ ಮುಖಂಡ ಶಿವರಾಮ್, ವಿವಿಧ ಸಮುದಾಯದ ಮುಖಂಡರಾದ ವೆಂಕಟಸ್ವಾಮಿ ಗಿರಿಯಪ್ಪ, ಮಹಾಲಿಂಗಪ್ಪ, ಜಯರಾಮ ನಾಯಕ್, ಸುಬ್ರಾಯ ನಾಯಕ್, ಕಾಲ ನಾಯಕ್, ವಕೀಲ ಶಂಕರ್ ನಾಯಕ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.