ADVERTISEMENT

ತುಂಬಿ ಹರಿಯುತ್ತಿವೆ ಚೆಕ್‌ ಡ್ಯಾಂಗಳು

ಕೊಡಿಗೇನಹಳ್ಳಿ ಹೋಬಳಿಯಲ್ಲಿ ಉತ್ತಮ ಮಳೆ; ಕೊಳವೆಬಾವಿಯಲ್ಲಿ ನೀರು

ಗಂಗಾಧರ್ ವಿ ರೆಡ್ಡಿಹಳ್ಳಿ
Published 25 ಜುಲೈ 2020, 5:44 IST
Last Updated 25 ಜುಲೈ 2020, 5:44 IST
ಕುಮದ್ವತಿ ನದಿ ಹರಿದಿದ್ದು ಚೆಕ್ ಡ್ಯಾಂನಲ್ಲಿ ನೀರು ನಿಂತಿದೆ
ಕುಮದ್ವತಿ ನದಿ ಹರಿದಿದ್ದು ಚೆಕ್ ಡ್ಯಾಂನಲ್ಲಿ ನೀರು ನಿಂತಿದೆ   

ಕೊಡಿಗೇನಹಳ್ಳಿ: ಹೋಬಳಿಯಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಕುಮದ್ವತಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಚೆಕ್ ಡ್ಯಾಂಗಳು ತುಂಬಿ ಹರಿದಿದೆ. ಇದರಿಂದ ಸುತ್ತಲಿನ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಜಾಸ್ತಿಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಹೋಬಳಿಯ ಬಹುತೇಕ ಜನರು ಕೃಷಿಯನ್ನೇ ನಂಬಿ ಜೀವನ ನಡೆಸುತ್ತಾರೆ. ಮಳೆಗಾಲದಲ್ಲಿ ಬೀಳುವ ಅಲ್ಪ ಸ್ವಲ್ಪ ಮಳೆ ನೀರು ಆಂಧ್ರಪ್ರದೇಶದತ್ತ ಹರಿದು ಹೋಗದಂತೆ ತಡೆದು ರೈತರಿಗೆ ಅನುಕೂಲ ಮಾಡುವ ಉದ್ದೇಶದಿಂದ ಚೆಕ್‌ ಡ್ಯಾಂ ನಿರ್ಮಿಸಲಾಗಿದೆ. ಕುಮದ್ವತಿ ನದಿಗೆ ಅಡ್ಡಲಾಗಿ ಗುಂಡಗಲ್ಲು– ಕಡಗತ್ತೂರು ನಡುವೆ ₹ 1 ಕೋಟಿ ವೆಚ್ಚದಲ್ಲಿ, ಗಂಡಗಲ್ಲು– ಯಾಕಾರ್ಲಾಹಳ್ಳಿ ನಡುವೆ ₹ 50 ಲಕ್ಷ ವೆಚ್ಚದಲ್ಲಿ, ಪರ್ತಿಹಳ್ಳಿ– ವೆಂಗಳಮ್ಮನಹಳ್ಳಿ ಗ್ರಾಮಗಳ ನಡುವೆ ₹ 1.50 ಕೋಟಿ ವೆಚ್ಚದಲ್ಲಿ ಚೆಕ್‌ ಡ್ಯಾಂ ನಿರ್ಮಿಸಲಾಗಿದೆ.

ಕಳೆದ ಕೆಲ ವರ್ಷಗಳಿಂದ ಮಳೆ ಇಲ್ಲದೆ ಕೆರೆ, ಕುಂಟೆಗಳು ಬರಡಾಗಿದ್ದವು. ಮರಳು ಮಾಫಿಯಾ, ಒತ್ತುವರಿಯಿಂದಾಗಿ ಕೆರೆಗಳು ಇದ್ದೂ ಇಲ್ಲದಂತಾಗಿದ್ದವು. ಈ ವರ್ಷ ಮಳೆಯಿಂದಾಗಿ ಜಲಮೂಲಗಳಲ್ಲಿ ಮತ್ತೆ ಜೀವಕಳೆ ತುಂಬಿದೆ.

ADVERTISEMENT

ದೊಡ್ಡಬಳ್ಳಾಪುರ ತಾಲ್ಲೂಕಿನ ಗುಂಡಮಗೆರೆ ಬೆಟ್ಟ–ಗುಡ್ಡಗಳಲ್ಲಿ ಹುಟ್ಟುವ ಕುಮದ್ವತಿ ನದಿಯು ಗೌರಿಬಿದನೂರು ತಾಲ್ಲೂಕು ಮೂಲಕ ಕೊಡಿಗೇನಹಳ್ಳಿ ಹೋಬಳಿಯ ಶ್ರಾವಂಡನಹಳ್ಳಿ, ಯಾಕಾರ್ಲಾಹಳ್ಳಿ, ಉಪ್ಪಾರಹಳ್ಳಿ, ಗುಂಡಗಲ್ಲು, ಕಡಗತ್ತೂರು, ಪರ್ತಿಹಳ್ಳಿ, ವೆಂಗಳಮ್ಮನಹಳ್ಳಿ, ಕಸಿನಾಯಕನಹಳ್ಳಿ ಮಾರ್ಗವಾಗಿ ಆಂಧ್ರಪ್ರದೇಶ ಸೇರುತ್ತದೆ.

ನೀರಿನ ಅನುಕೂಲ ಮಾಡಿದವರನ್ನು ಅಷ್ಟು ಬೇಗ ಮರೆಯಲು ಸಾಧ್ಯವಿಲ್ಲ. ಚೆಕ್ ಡ್ಯಾಂ ತುಂಬಿರುವುದರಿಂದ ನಮ್ಮ ಕೊಳವೆ ಬಾವಿಯಲ್ಲಿ ನೀರು ಹೆಚ್ಚಾಗಿ ಬರುತ್ತಿದೆ ಎಂದು ರೈತ ನಾಗಭೂಷಣರೆಡ್ಡಿ ಗುಂಡಗಲ್ಲು ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.