ADVERTISEMENT

ತುಮಕೂರು | ಬದಲಾಗದ ಮಾಲೀಕತ್ವ: ಶ್ರೀರಾಮ್ ಟ್ರಾನ್ಸ್‌ಪೋರ್ಟ್‌ಗೆ ದಂಡ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 3:08 IST
Last Updated 11 ಅಕ್ಟೋಬರ್ 2025, 3:08 IST
(ಸಾಂದರ್ಭಿಕ ಚಿತ್ರ)
(ಸಾಂದರ್ಭಿಕ ಚಿತ್ರ)   

ತುಮಕೂರು: ಟ್ರ್ಯಾಕ್ಟರ್ ಟ್ರೈಲರ್ ಖರೀದಿಸಿದವರ ಹೆಸರಿಗೆ ನೋಂದಣಿ ಮಾಡಿಸಿ, ಮಾಲೀಕತ್ವ ವರ್ಗಾವಣೆ ಮಾಡಿಕೊಡುವಲ್ಲಿ ವಿಫಲವಾಗಿರುವ ಶ್ರೀರಾಮ್ ಟ್ರಾನ್ಸ್‌ಪೋರ್ಟ್‌ ಕಂಪನಿಗೆ ದಂಡ ವಿಧಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ಹರಾಜಿನಲ್ಲಿ ವಾಹನ ಖರೀದಿಸಿದವರಿಗೆ ವಾಹನ ಮಾಲೀಕತ್ವ ಬದಲಾಯಿಸಿ ಕೊಡುವಲ್ಲಿ ಲೋಪವೆಸಗಿರುವುದು ಹಾಗೂ ಸೇವಾ ನ್ಯೂನತೆಗಾಗಿ ₹40 ಸಾವಿರ ದಂಡ ವಿಧಿಸಿದೆ. ಜತೆಗೆ ₹10 ಸಾವಿರ ನ್ಯಾಯಾಲಯ ವೆಚ್ಚ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಪ್ರಕರಣದ ವಿವರ: ನಗರದ ವಿದ್ಯಾನಗರದ ಮಂಜುಳ ಎಂಬುವರು ಶ್ರೀರಾಮ್ ಟ್ರಾನ್ಸ್‌ಪೋರ್ಟ್‌ ಕಂಪನಿಯಿಂದ ಸಾಲ ಪಡೆದು ಟ್ರ್ಯಾಕ್ಟರ್ ಟ್ರೈಲರ್ ಖರೀದಿಸಿದ್ದರು. ಕೋವಿಡ್ ಸಮಯದಲ್ಲಿ ಸಾಲದ ಕಂತು ಕಟ್ಟಲು ಸಾಧ್ಯವಾಗಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಶ್ರೀರಾಮ್ ಟ್ರಾನ್ಸ್‌ಪೋರ್ಟ್‌ನವರು ಟ್ರ್ಯಾಕ್ಟರ್ ಟ್ರೈಲರ್ ವಶಕ್ಕೆ ಪಡೆದಿದ್ದರು. 2020ರಲ್ಲಿ ಹರಾಜಿನಲ್ಲಿ ಮಾರಾಟ ಮಾಡಿದ್ದರು. ಇದರಿಂದ ಬಂದ ಹಣವನ್ನು ಸಾಲಕ್ಕೆ ಜಮೆ ಮಾಡಿಕೊಂಡಿದ್ದರು.

ADVERTISEMENT

ಇದಾದ ನಂತರವೂ ಬಾಕಿ ₹60 ಸಾವಿರ ಕಟ್ಟುವಂತೆ ಮಂಜುಳ ಅವರಿಗೆ ನೋಟಿಸ್ ನೀಡಿದ್ದು, ಅಷ್ಟು ಹಣವನ್ನು ಅವರು ಪಾವತಿಸಿದ್ದರು. ಪೂರ್ಣ ಪ್ರಮಾಣದಲ್ಲಿ ಸಾಲ ಮರುಪಾವತಿ ಮಾಡಿರುವುದಕ್ಕೆ ದಾಖಲೆಗಳನ್ನು ಪಡೆದುಕೊಂಡಿದ್ದರು.

ಇಷ್ಟೆಲ್ಲ ಪ್ರಕ್ರಿಯೆಗಳು ಮುಗಿದ ನಂತರವೂ ಟ್ರ್ಯಾಕ್ಟರ್ ಟ್ರೈಲರ್‌ಅನ್ನು ಹರಾಜಿನಲ್ಲಿ ಖರೀದಿಸಿದವರ ಹೆಸರಿಗೆ ನೋಂದಣಿ ಮಾಡಿಕೊಟ್ಟಿರಲಿಲ್ಲ. ಕೊನೆಗೂ ವಾಹನದ ಮಾಲೀಕತ್ವದ ವರ್ಗಾವಣೆ ಆಗಿರಲಿಲ್ಲ. ಆರ್‌.ಸಿ ಬುಕ್‌ನಲ್ಲಿ ಹೆಸರು ಬದಲಾವಣೆ ಆಗಬೇಕು ಎಂದು ಶ್ರೀರಾಮ್ ಟ್ರಾನ್ಸ್‌ಪೋರ್ಟ್‌ ಕಂಪನಿಗೆ ಪದೇಪದೇ ಮನವಿ ಮಾಡಿದ್ದರು. ಒಂದು ವೇಳೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ, ಇಲ್ಲವೆ ಅಪಘಾತ ಸಂಭವಿಸಿದರೆ ಮಾಲೀಕರಾದ ನಾನೇ ಜವಾಬ್ದಾರಿ ಆಗಬೇಕಾಗುತ್ತದೆ ಎಂದು ಕೇಳಿಕೊಂಡಿದ್ದರು. ಪತ್ರ ಬರೆದು, ನೋಟಿಸ್ ನೀಡಿದರೂ ಸ್ಪಂದಿಸಿರಲಿಲ್ಲ.

ಇದರಿಂದ ಬೇಸತ್ತು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದರು. ಆಯೋಗ ಸಹ 10–09–2024ರಂದು ಶ್ರೀರಾಮ್ ಟ್ರಾನ್ಸ್‌ಪೋರ್ಟ್‌ ಕಂಪನಿಗೆ ನೋಟಿಸ್ ಜಾರಿ ಮಾಡಿತ್ತು. ಸಾಕಷ್ಟು ಕಾಲಾವಕಾಶ ಕೊಟ್ಟರೂ ವಾದ ಮಂಡಿಸಲಿಲ್ಲ. ಅಗತ್ಯ ದಾಖಲೆಗಳನ್ನು ಸಹ ಸಲ್ಲಿಸಲಿಲ್ಲ.

ದೂರುದಾರರ ವಾದ ಆಲಿಸಿದ ಆಯೋಗದ ಅಧ್ಯಕ್ಷೆ ಜಿ.ಟಿ.ವಿಜಯಲಕ್ಷ್ಮಿ, ಸದಸ್ಯೆ ನಿವೇದಿತಾ ರವೀಶ್ ನೇತೃತ್ವದ ಪೀಠವು ಟ್ರ್ಯಾಕ್ಟರ್ ಟ್ರೈಲರ್ ಖರೀದಿಸಿದವರಿಗೆ ನೋಂದಣಿ ಮಾಡಿಸಿಕೊಡಬೇಕು. ದೂರುದಾರರಿಗೆ ಪರಿಹಾರ ನೀಡುವಂತೆ ಆದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.