ಮಧುಗಿರಿ: ತಾಲ್ಲೂಕಿನ ನಿಟ್ರಹಳ್ಳಿ ಗ್ರಾಮದ ‘ಪದ್ಮಕ್ಕ ಹೋಟೆಲ್’ ಶುಚಿ– ರುಚಿಯಾದ ತಿಂಡಿಗೆ ಹೆಸರುವಾಸಿಯಾಗಿದೆ.
ಗುಣಮಟ್ಟದ ಆಹಾರ ಪೂರೈಕೆ, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ. ಇದರಿಂದ ಹೆಚ್ಚಿನ ಜನರು ದೂರದ ಊರುಗಳಿಂದ ಬಂದು ತಿಂಡಿ ತಿನ್ನುತ್ತಾರೆ. ಕಳೆದ 35 ವರ್ಷಗಳಿಂದ ಒಂದೇ ತರಹದ ರುಚಿ ಕಾಪಾಡಿಕೊಂಡಿದ್ದಾರೆ. ಪದ್ಮಕ್ಕ ಹೋಟಲ್ ತಿಂಡಿ ಪ್ರಿಯರ ಅಚ್ಚುಮೆಚ್ಚು. ಇಲ್ಲಿಯೇ ಆಹಾರ ಸೇವನೆ ಮಾಡಿ ಮನೆಗೂ ತೆಗೆದುಕೊಂಡು ಹೋಗುತ್ತಾರೆ.
ನಿಟ್ರಹಳ್ಳಿ ಸುತ್ತಮುತ್ತಲಿನ ಗ್ರಾಮದವರು ಹೋಟೆಲ್‌ಗೆ ಭೇಟಿ ಕೊಟ್ಟು ತಿಂಡಿಯ ರುಚಿ ಸವಿಯುತ್ತಾರೆ. ಈ ಹೋಟಲ್‌ನಲ್ಲಿ ಕಡಿಮೆ ಹಣದಲ್ಲಿ, ಗ್ರಾಹಕರಿಗೆ ಹೊರೆಯಾಗದಂತೆ ತಿಂಡಿ ನೀಡಲಾಗುತ್ತದೆ. ಬೆಳಗ್ಗೆ ತಿಂಡಿಗೆ ಇಡ್ಲಿ, ಚಿತ್ರಾನ್ನ, ಪಲಾವ್, ಕಡ್ಲೆ ಬೇಳೆ ವಡೆ ಸಿಗುತ್ತದೆ. ಪ್ರತಿ ನಿತ್ಯ ತಿಂಡಿಗೆ ಕಡ್ಲೆ ಬೇಳೆ ವಡೆ ಇರಲೇಬೇಕು. ಇಲ್ಲದಿದ್ದರೆ ಗ್ರಾಹಕರು ಗಲಾಟೆ ಮಾಡುತ್ತಾರೆ.
ಮನೆಯ ಬಳಿಯೇ ಹೋಟೆಲ್ ನಡೆಸುತ್ತಿದ್ದಾರೆ. ಇಲ್ಲಿ ಯಾವುದೇ ರೀತಿಯ ನಾಮಫಲಕ ಅಳವಡಿಸಿಲ್ಲ. ಗ್ರಾಮಸ್ಥರು ಸಹಜವಾಗಿ ಪ್ರತಿ ದಿನ ಹೋಟೆಲ್‌ಗೆ ಭೇಟಿ ಕೊಡುತ್ತಾರೆ. ದೂರದ ಊರುಗಳಿಂದಲೂ ಹೋಟೆಲ್ ಹುಡುಕಿಕೊಂಡು ಬರುತ್ತಾರೆ. ಕಡ್ಲೆ ಬೇಳೆ ವಡೆ ತಿನ್ನಲು ಹೆಚ್ಚಿನ ಜನರು ಹೋಟೆಲ್‌ಗೆ ಹೋಗುತ್ತಾರೆ.
ಹೋಟೆಲ್ ನಡೆಸುವ ಮುಖಾಂತರ ಮಾಲೀಕರು ಬದುಕು ಕಟ್ಟಿಕೊಂಡಿದ್ದಾರೆ. ಪದ್ಮ ಅವರು ಹೋಟಲ್‌ನಿಂದ ಬರುವ ಆದಾಯದಿಂದ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ತಂದೆಯ ಆರೋಗ್ಯ, ತಮ್ಮಂದಿರ ವಿದ್ಯಾಭ್ಯಾಸಕ್ಕೂ ಹೆಗಲಾಗುತ್ತಿದ್ದಾರೆ. ಹೋಟೆಲ್ ಜತೆಗೆ ಮನೆಯ ಇತರೆ ಕೆಲಸದಲ್ಲೂ ತೊಡಗಿಸಿಕೊಳ್ಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.