ADVERTISEMENT

ದಿವ್ಯಾಕಾಶ ಸಮವಶರಣ: ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ

ಮಾರ್ಚ್ 8ರಿಂದ 13ರ ವರೆಗೆ ನಡೆಯಲಿರುವ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2023, 16:01 IST
Last Updated 3 ಮಾರ್ಚ್ 2023, 16:01 IST
ತುಮಕೂರು ತಾಲ್ಲೂಕು ಪಂಡಿತನಹಳ್ಳಿ ಸಮೀಪದ ಮಂದರಗಿರಿಯಲ್ಲಿ ನಿರ್ಮಾಣವಾಗಿರುವ ದಿವ್ಯಾಕಾಶ ಸಮವಶರಣ
ತುಮಕೂರು ತಾಲ್ಲೂಕು ಪಂಡಿತನಹಳ್ಳಿ ಸಮೀಪದ ಮಂದರಗಿರಿಯಲ್ಲಿ ನಿರ್ಮಾಣವಾಗಿರುವ ದಿವ್ಯಾಕಾಶ ಸಮವಶರಣ   

ತುಮಕೂರು: ನಗರದ ಹೊರವಲಯದ ಪಂಡಿತನಹಳ್ಳಿ ಸಮೀಪದ ಮಂದರಗಿರಿಯಲ್ಲಿ ವಿಶಿಷ್ಟ ವಾಸ್ತು ರಚನೆಯೊಂದಿಗೆ ಮಹಾವೀರ ತೀರ್ಥಂಕರರ ‘ದಿವ್ಯಾಕಾಶ ಸಮವಶರಣ’ವನ್ನು ನಿರ್ಮಾಣ ಮಾಡಿದ್ದು, ಪಂಚಕಲ್ಯಾಣ ಪ್ರತಿಷ್ಠಾಪನಾ ಮಹೋತ್ಸವ ಮಾರ್ಚ್ 8ರಿಂದ 13ರ ವರೆಗೆ ಆರು ದಿನಗಳ ಕಾಲ ನಡೆಯಲಿದೆ.

ದಿಗಂಬರ ಜೈನ ಪಾರ್ಶ್ವನಾಥ ಜಿನಮಂದಿರ ಸಮಿತಿ ಅಧ್ಯಕ್ಷ ಎಸ್.ಜೆ.ನಾಗರಾಜ್, ಜೈನ ಸಂಘದ ಮುಖಂಡರಾದ ಆರ್.ಜೆ.ಸುರೇಶ್, ಅಜಿತ್, ಬಾಹುಬಲಿ, ಬಿ.ಎಸ್.ಪಾರ್ಶ್ವನಾಥ್, ಚಂದ್ರಕೀರ್ತಿ ಇತರ ಮುಖಂಡರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಈ ವಿಷಯ ತಿಳಿಸಿದರು.

ದಿಗಂಬರ ಜೈನ ಮುನಿಗಳಾದ ಅಮೋಘಕೀರ್ತಿ ಮಹಾರಾಜ್, ಅಮರಕೀರ್ತಿ ಮಹಾರಾಜ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಜೈನ ಮುನಿಗಳು, ಮಾತಾಜಿಗಳು, ದಕ್ಷಿಣ ಭಾರತದ ವಿವಿಧ ಜೈನ ಮಠಗಳ ಪೀಠಾಧೀಶರು ಭಾಗವಹಿಸಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ವಹಿಸಲಿದ್ದು, ಸಮುದಾಯದ ಮುಖಂಡರಾದ ಸುರೇಂದ್ರಕುಮಾರ್, ರಾಕೇಶ್ ಜೈನ್ ಇತರರು ಭಾಗವಹಿಸುವರು ಎಂದು ಹೇಳಿದರು.

ADVERTISEMENT

ಮಾರ್ಚ್ 8ರಂದು ಆದಿ ಮಂಗಲ, 9ಕ್ಕೆ ಗರ್ಭಕಲ್ಯಾಣ ಮಹೋತ್ಸವ, 10ಕ್ಕೆ ಜನ್ಮ ಕಲ್ಯಾಣ, 11ಕ್ಕೆ ದೀಕ್ಷಾ ಕಲ್ಯಾಣ, 12ಕ್ಕೆ ಕೇವಲಜ್ಞಾನ, 13ಕ್ಕೆ ಮೋಕ್ಷ ಕಲ್ಯಾಣ ಮಹೋತ್ಸವ ನಡೆಯಲಿದೆ ಎಂದರು.

ನಿರ್ಮಾಣ ಪೂರ್ಣಗೊಳಿಸಲು ಮೂರು ವರ್ಷ ತೆಗೆದುಕೊಂಡಿದೆ. ಧ್ಯಾನಸ್ಥ ಮುಖ ಹೊಂದಿರುವ ನಾಲ್ವರು ಮಹಾವೀರ ತೀರ್ಥಂಕರರ ಮೂರ್ತಿಗಳು 5 ಟನ್ ತೂಕ ಹೊಂದಿವೆ. ಬೆಟ್ಟದ ಇಳಿಜಾರಿನಲ್ಲಿ ನಿರ್ಮಿಸಿರುವ ಸಮವಶರಣವು 22,500 ಚದರಡಿ ವಿಸ್ತೀರ್ಣ ಹೊಂದಿದೆ. ಬಿಳಿ ಬಣ್ಣದ ಗ್ರಾನೈಟ್ ಶಿಲೆಯಲ್ಲಿ ನಿರ್ಮಿಸಿದ್ದು, ಇದರ ಮಧ್ಯದಲ್ಲಿ ಅಶೋಕ ವೃತ್ತದ ಮೂಲಕಾಂಡವನ್ನು ಸಿಮೆಂಟ್‌ನಲ್ಲಿ ನಿರ್ಮಿಸಿದ್ದು, ಅದರ ಕೊಂಬೆ ರೆಂಬೆಗಳನ್ನು ಉಕ್ಕಿನ ಪೈಪ್, ತಗಡುಗಳನ್ನು ಬಳಸಿ ನಿರ್ಮಿಸಲಾಗಿದೆ. ಅಶೋಕ ವೃಕ್ಷದ ಪ್ರತಿ ಎಲೆಯ ದಪ್ಪ ಸುಮಾರು 2 ಮಿ.ಮೀ ಇದೆ ಎಂದು ವಿವರಿಸಿದರು.

ಪ್ರತಿ ಮಾನಸ್ತಂಭದ ಎತ್ತರ 21 ಅಡಿ ಇದ್ದು, ಇದರ ಮೇಲೆ ಸುಂದರ ಕೆತ್ತನೆಗಳಿವೆ. ಅಶೋಕ ವೃಕ್ಷದ ಬುಡದಲ್ಲಿರುವ ನಾಲ್ಕು ಮಹಾವೀರ ತೀರ್ಥಂಕರರ ಪ್ರತಿಮೆಗಳಲ್ಲಿ ಪ್ರತಿಯೊಂದು 7 ಅಡಿ ಎತ್ತರವಿದೆ. 250 ಇಂದ್ರ, ಇಂದ್ರಾಣಿ 20 ವನ್ಯ ಪ್ರಾಣಿಗಳ ಪ್ರತಿಮೆಗಳು ಶೋತೃಗಳ ರೂಪದಲ್ಲಿವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.