ADVERTISEMENT

ಪರಮೇಶ್ವರ ಸಿಎಂ ಆಗಲಿ: ತುಮಕೂರಿನಲ್ಲಿ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 6:44 IST
Last Updated 3 ಡಿಸೆಂಬರ್ 2025, 6:44 IST
ತುಮಕೂರಿನ ಕೋಟೆ ಆಂಜನೇಯಸ್ವಾಮಿ ದೇವಾಲಯದ ಬಳಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಅವರಿಗೆ ಸಿಎಂ  ಸ್ಥಾನ ಸಿಗಲಿ ಎಂದು ಪ್ರಾರ್ಥಿಸಿ ಅವರ ಬೆಂಬಲಿಗರು, ಕಾಂಗ್ರೆಸ್‌ ಮುಖಂಡರು ಈಡುಗಾಯಿ ಹೊಡೆದರು
ತುಮಕೂರಿನ ಕೋಟೆ ಆಂಜನೇಯಸ್ವಾಮಿ ದೇವಾಲಯದ ಬಳಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಅವರಿಗೆ ಸಿಎಂ  ಸ್ಥಾನ ಸಿಗಲಿ ಎಂದು ಪ್ರಾರ್ಥಿಸಿ ಅವರ ಬೆಂಬಲಿಗರು, ಕಾಂಗ್ರೆಸ್‌ ಮುಖಂಡರು ಈಡುಗಾಯಿ ಹೊಡೆದರು   

ತುಮಕೂರು: ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗಲಿ ಎಂದು ಪ್ರಾರ್ಥಿಸಿ ಪರಮೇಶ್ವರ ಬೆಂಬಲಿಗರು, ಕಾಂಗ್ರೆಸ್‌ ಮುಖಂಡರು ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ವಿಶೇಷ ಪೂಜೆ ಸಲ್ಲಿಸಿದರು.

ದೇಗುಲದ ಮುಂಭಾಗ 101 ಈಡುಗಾಯಿ ಹೊಡೆದರು. ಪರಮೇಶ್ವರ ಭಾವಚಿತ್ರ ಪ್ರದರ್ಶಿಸಿದರು. ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಘೋಷಣೆ ಕೂಗಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತಮ ಆಡಳಿತ ನೀಡುತ್ತಿದ್ದಾರೆ. ಮುಖ್ಯಮಂತ್ರಿ ಬದಲಾದರೆ ಆ ಸ್ಥಾನವನ್ನು ಪರಮೇಶ್ವರ ಅವರಿಗೆ ನೀಡಬೇಕು. ಈ ಹಿಂದೆ ಕೆಪಿಸಿಸಿ ಅಧ್ಯಕ್ಷರಾಗಿ ಸಮರ್ಥವಾಗಿ ಪಕ್ಷ ಮುನ್ನಡೆಸಿದ್ದಾರೆ. ಉಪ ಮುಖ್ಯಮಂತ್ರಿಯಾಗಿಯೂ ಕೆಲಸ ಮಾಡಿದ್ದಾರೆ. ಸಿಎಂ ಸ್ಥಾನಕ್ಕೆ ಅರ್ಹ ವ್ಯಕ್ತಿ’ ಎಂದು ಮುಖಂಡ ಮಾಗಡಿ ಜಯರಾಮ್‌ ಹೇಳಿದರು.

ADVERTISEMENT

ರಾಜ್ಯದಲ್ಲಿ ಇದುವರೆಗೆ ಪರಿಶಿಷ್ಟ ಸಮುದಾಯದ ನಾಯಕರು ರಾಜ್ಯದ ಚುಕ್ಕಾಣಿ ಹಿಡಿದಿಲ್ಲ. ಈಗ ಅಂತಹ ಸಮಯ ಬಂದಿದ್ದು, ದಲಿತ ಮುಖ್ಯಮಂತ್ರಿ ಮಾಡಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ. ಪರಮೇಶ್ವರ ಅವರನ್ನು ಸಿಎಂ ಮಾಡಿದರೆ ಸರ್ವರೂ ಸಹಮತ ವ್ಯಕ್ತಪಡಿಸಲಿದ್ದಾರೆ ಎಂದರು.

ಮುಖಂಡ ಸತೀಶ್‌, ‘ಪರಮೇಶ್ವರ ಸಿಎಂ ಆದರೆ ರಾಜ್ಯ ಮತ್ತಷ್ಟು ಅಭಿವೃದ್ಧಿಯಾಗಲಿದೆ. ದಲಿತರಿಗೆ ಸಿಎಂ ಸ್ಥಾನ ನೀಡಬೇಕು ಎಂಬ ಹಲವು ವರ್ಷಗಳ ಹೋರಾಟಕ್ಕೆ ನ್ಯಾಯ ಸಿಗುತ್ತದೆ’ ಎಂದು ತಿಳಿಸಿದರು.

ಮುಖಂಡರಾದ ಕೇಶವಮೂರ್ತಿ, ಯೋಗೀಶ್‌ ದಿಬ್ಬೂರು, ಹರೀಶ್‌, ದೀಕ್ಷಿತ್‌, ಶಿವರಾಜ್‌ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.