ಪಾವಗಡ: ಕಟ್ಟಡ ನಿರ್ಮಾಣದಿಂದಾಗಿ ಪಟ್ಟಣದ ಐತಿಹಾಸಿಕ ಕೋಟೆ ಗೋಡೆ ಕುಸಿದಿದೆ ಎಂದು ಆರೋಪಿಸಿ ತಹಶೀಲ್ದಾರ್ ಕಚೇರಿ ಮುಂಭಾಗ ನಡೆಯುತ್ತಿರುವ ಧರಣಿ ಬುಧವಾರವು ಮುಂದುವರೆಯಿತು.
ಪ್ರತಿಭಟನ ಸ್ಥಳಕ್ಕೆ ಪುರಸಭೆ ಮುಖ್ಯಾಧಿಕಾರಿ ಜಾಫರ್ ಭೇಟಿ ನೀಡಿ, ದೂರು ಸಂಬಂಧ ಕಟ್ಟಡ ಮಾಲೀಕರಿಗೆ ಈಗಾಗಲೇ ಮೂರು ನೋಟಿಸ್ ನೀಡಲಾಗಿದೆ. ಶೀಘ್ರ ಕಟ್ಟಡ ಕಾಮಗಾರಿ ಅನುಮತಿ ರದ್ದು ಪಡಿಸಲಾಗುವುದು ಎಂದು ತಿಳಿಸಿದರು.
ಪ್ರತಿಭಟನೆ ನಿರತರು ಅನುಮತಿ ರದ್ದುಗೊಳಿಸುವುದರ ಜೊತೆಗೆ ಕೋಟೆಯ ಕಲ್ಲುಗಳನ್ನು ನಾಶಪಡಿಸಿರುವ ಕಟ್ಟಡ ಮಾಲೀಕರ ವಿರುದ್ಧ ಕ್ರಮಿನಲ್ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
ತಹಶೀಲ್ದಾರ್ ವರದರಾಜು ಪ್ರತಿಕ್ರಿಯಿಸಿ, ಕೋಟೆ, ಸ್ಮಾರಕ ನಾಶ ಸಂಬಂಧ ಮೇಲಧಿಕಾರಿಗಳ ಗಮನಕ್ಕೆ ತಂದು ಸಂಜೆಯೊಳಗೆ ಧರಣಿ ನಿರತರಿಗೆ ಮಾಹಿತಿ ನೀಡಲಾಗುವುದು. ಮೇಲಧಿಕಾರಿಗಳ ಆದೇಶದ ಮೇರೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬೇಡಿಕೆ ಈಡೇರಿಸುವವರೆಗೆ ಧರಣಿ ಮುಂದುವರಿಸಲಾಗುವುದು. ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸಿದಲ್ಲಿ ಅಹೋರಾತ್ರಿ ಧರಣಿ, ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಕನ್ನಮೆಡಿ ಕೃಷ್ಣಮೂರ್ತಿ, ವಾಲ್ಮೀಕಿ ಜಾಗೃತಿ ವೇದಿಕೆ ಸಂಚಾಲಕ ಬೇಕರಿ ನಾಗರಾಜ್ ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.