
ಪಾವಗಡ: ಪಟ್ಟಣ ಸೇರಿದಂತೆ ತಾಲ್ಲೂಕಿನ ಪ್ರಮುಖ ರಸ್ತೆಗಳು ಹದಗೆಟ್ಟಿವೆ. ಆಂಧ್ರಪ್ರದೇಶ ಸೇರಿದಂತೆ ವಿವಿಧೆಡೆಗಳಿಗೆ ಸಂಪರ್ಕ ಕಲ್ಪಿಸುವ ಬಹುತೇಕ ರಸ್ತೆಗಳು ಗುಂಡಿಬಿದ್ದು ಸಂಚಾರಕ್ಕೆ ಸಾಹಸಪಡುವಂತಾಗಿದೆ.
ಪಟ್ಟಣದಿಂದ ಹೊರವಲಯ ತಲುಪಿದ ಕೂಡಲೇ ಮಣ್ಣಿನ ರಸ್ತೆಗಳು ಸವಾರರಿಗೆ ದಿಢೀರನೇ ಎದುರಾಗುತ್ತವೆ. ಶಿರಾ, ಚಳ್ಳಕೆರೆ, ಪೆನುಗೊಂಡ, ಹಿಂದೂಪುರ, ನಾಗಲಮಡಿಕೆ, ವೈ.ಎನ್. ಹೊಸಕೋಟೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳು ತಗ್ಗು ದಿಣ್ಣೆಗಳಂತೆ ಭಾಸವಾಗುತ್ತವೆ.
ತಾಲ್ಲೂಕಿನ ಅಸಮರ್ಪಕ ರಸ್ತೆಗಳಿಂದಾಗಿ ಒಂದಿಲ್ಲೊಂದು ಅಪಘಾತ ಸಂಭವಿಸುತ್ತಿವೆ. ಅಪಘಾತಗಳಲ್ಲಿ ಕೈ ಕಾಲು, ಸೊಂಟ ಮುರಿದುಕೊಂಡು ಶಾಶ್ವತ ಅಂಗವಿಕಲರಾಗಿ ಜೀವನವಿಡೀ ಪರಾವಲಂಬಿಗಳಾಗಿ ದಿನ ದೂಡುವ ಸಾಕಷ್ಟು ನಿದರ್ಶನ ಹಳ್ಳಿ, ಹಳ್ಳಿಗಳಲ್ಲೂ ಕಾಣ ಸಿಗುತ್ತವೆ.
ಪಾವಗಡ- ಚಿತ್ರದುರ್ಗ ರಸ್ತೆ ಎರಡು ಜಿಲ್ಲೆಗಳನ್ನು ಬೆಸೆಯುವ ಕೊಂಡಿಯಂತಿದೆ. ಶೈಲಾಪುರ, ಬೆಳ್ಳಿಬಟ್ಟಲು ಬಳಿಯ ಒಂದೆರೆಡು ಕಿ.ಮೀ. ಹೊರತುಪಡಿಸಿದರೆ ಪಟ್ಟಣದಿಂದ-ಲಿಂಗದಹಳ್ಳಿವರೆಗಿನ 30 ಕಿ.ಮೀ ರಸ್ತೆ ಸಂಪೂರ್ಣ ಹಾಳಾಗಿದೆ. ಈ ಭಾಗಗಳಿಂದ ಶಾಲೆ, ಕಾಲೇಜು ಸೇರಿದಂತೆ ಕೆಲಸ ಕಾರ್ಯಗಳಿಗೆ ಪಟ್ಟಣಕ್ಕೆ ಬರುವವರು ನಿತ್ಯ ಹಿಡಿ ಶಾಪ ಹಾಕುತ್ತಾರೆ.
ಗುಂಡಿ ತಪ್ಪಿಸುವ ಪ್ರಯತ್ನದಲ್ಲಿ ದ್ವಿಚಕ್ರವಾಹನ, ಕಾರು, ಬಸ್ ಗಳು ನಿರಂತರವಾಗಿ ಅಪಘಾತಕ್ಕೀಡಾಗುತ್ತಿವೆ. ಇತ್ತೀಚೆಗೆ ರಂಗಸಮುದ್ರ ಬಳಿ ಗ್ರಾಮಸ್ಥರೊಬ್ಬರು ದ್ವಿಚಕ್ರ ವಾಹನದಿಂದ ಬಿದ್ದು ತೀವ್ರವಾಗಿ ಗಾಯಗೊಂಡ ಪರಿಣಾಮ ಗ್ರಾಮಸ್ಥರೇ ಸ್ವಂತ ಖರ್ಚಿನಿಂದ ಜಲ್ಲಿ, ಮಣ್ಣು ಹೊಡೆಸಿ ಗುಂಡಿ ಮುಚ್ಚುವ ಪ್ರಯತ್ನ ಮಾಡಿರುವುದು ವ್ಯವಸ್ಥೆಗೆ ಹಿಡಿದ ಕನ್ನಡಿ. ನಿತ್ಯ ನೂರಾರು ವಾಹನಗಳು ಓಡಾಡುವ ಪ್ರಮುಖ ರಸ್ತೆಯನ್ನು ಈವರೆಗೆ ಸರಿಪಡಿಸಿಲ್ಲ ಎನ್ನುವುದು ಸಾರ್ವಜನಿಕರ ಆರೋಪ.
ಈ ಮಾರ್ಗದಲ್ಲಿ ಡಾಂಬರ್ ಕಿತ್ತು ಹೋಗಿ ಮಣ್ಣಿನ ರಸ್ತೆಯಾಗಿ ಮಾರ್ಪಟ್ಟಿದೆ. ಕೆಲವೆಡೆ ಮಾತ್ರ ಬಣ್ಣ ಬಳಿದು ತೇಪೆ ಹಚ್ಚಿದ ರೀತಿ ಡಾಂಬರ್ ರಸ್ತೆ ಕಾಣಿಸುತ್ತಿದೆ. ರಸ್ತೆ ಬದಿ ಇರುವವರು ದೂಳಿನಿಂದ ಅಸ್ವಸ್ಥರಾಗುತ್ತಿದ್ದಾರೆ. ರಸ್ತೆ ಬದಿ ಮಳಿಗೆ ನಡೆಸುವವರು ದೂಳು ಸೇವಿಸಲಾಗದೆ ಪರ್ಯಾಯ ಕೆಲಸ ಹುಡುಕಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿದ್ದಾರೆ.
ಪಟ್ಟಣದಿಂದ ಸಿ.ಕೆ. ಪುರ, ಅರಸೀಕೆರೆ, ಕೆ.ಟಿ. ಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಕಿರಿದಾಗಿದ್ದು, ಮಳೆ ಬಂದರೆ ಗುಂಡಿಗಳಲ್ಲಿ ನೀರು ನಿಂತು, ಗುಂಡಿಯ ಗಾತ್ರ ತಿಳಿಯದೆ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ.
ಹಿಂದೂಪುರಕ್ಕೆ ಸಂಪರ್ಕ ಕಲ್ಪಿಸುವ ವೆಂಕಟಾಪುರ, ದೊಮ್ಮತಮರಿ ರಸ್ತೆಗಳ ಸ್ಥಿತಿ ದಶಕಗಳಿಂದ ಬದಲಾಗಿಲ್ಲ. ಮಳೆ ಬಂದರೆ ಕೆಸರು ಗದ್ದೆಗಳಾಗಿ ಮಾರ್ಪಡಾಗಿ, ವಾಹನಗಳು ರಸ್ತೆಯಲ್ಲಿ ಸಿಲುಕಿಕೊಂಡು ತೀವ್ರ ಸಮಸ್ಯೆಯಾಗುತ್ತಿದೆ.
ತಾಲ್ಲೂಕಿನಲ್ಲಿ ಮಳೆ ಪ್ರಮಾಣ ಕಡಿಮೆ, ಇಂತಹ ಕಡಿಮೆ ಪ್ರಮಾಣದಲ್ಲಿ ಮಳೆ ಬಿದ್ದರೂ ರಸ್ತೆಗಳಲ್ಲಿ ನೀರು ನಿಲ್ಲುತ್ತದೆ. ಗುಣಮಟ್ಟದ ಕಾಮಗಾರಿ ನಡೆಸಿದರೆ ರಸ್ತೆಗಳು ಬೇಗ ಹಾಳಾಗುವುದಿಲ್ಲ ಎನ್ನುವುದು ಜನರ ವಾದ. ವೈ.ಎನ್. ಹೊಸಕೋಟೆಗೆ ಸಂಪರ್ಕ ಕಲ್ಪಿಸುವ ಬೂದಿಬೆಟ್ಟ, ಗಂಗಸಾಗರ, ರಂಗಸಮುದ್ರ ರಸ್ತೆಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ.
ಜಿಲ್ಲಾ ರಸ್ತೆಗಳು, ಮುಖ್ಯ ಜಿಲ್ಲಾ ರಸ್ತೆಗಳ ಸ್ಥಿತಿ ಹೀಗಿದ್ದರೆ ಗ್ರಾಮ ರಸ್ತೆಗಳ ಸ್ಥಿತಿ ಹೇಳತೀರದು. ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ತಗ್ಗು ದಿಣ್ಣೆಗಳಿಂದ ಕೂಡಿವೆ. ಶ್ರೀರಂಗಪುರ, ನಾಗಲಮಡಿಕೆ, ರಾಯಚೆರ್ಲು ಸೇರಿದಂತೆ ಗ್ರಾಮ ರಸ್ತೆಗಳಲ್ಲಿ ಹಗಲಿನಲ್ಲೂ ರಸ್ತೆ ಹುಡುಕಿಕೊಂಡು ಓಡಾಡಬೇಕು.
ಪಟ್ಟಣದಿಂದ ತುಮಕೂರು ಹಾಗೂ ಆಂಧ್ರ ಗಡಿಗೆ ಸಂಪರ್ಕ ಕಲ್ಪಿಸುವ ಕೆ–ಷಿಪ್ ರಸ್ತೆಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಪಟ್ಟಣ ವ್ಯಾಪ್ತಿ ಸೇರಿದಂತೆ ರಸ್ತೆಯುದ್ಧಕ್ಕೂ ಅಪಘಾತಗಳು ದಿನೇದಿನೇ ಹೆಚ್ಚುತ್ತಿದೆ. ಸಂಘ ಸಂಸ್ಥೆಗಳ ಪದಾಧಿಕಾರಿಗಳು ವೇಗ ಮಿತಿ ಅಳವಡಿಸುವಂತೆ, ಅಪಘಾತ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳುವಂತೆ ಮನವಿ ನೀಡಿದರೂ ಪ್ರಯೋಜನವಾಗುತ್ತಿಲ್ಲ.
ಪಟ್ಟಣದಿಂದ ಪೆನುಗೊಂಡ ರಸ್ತೆ ಕಾಮಗಾರಿ ನಡೆದು ಕೆಲವೇ ವರ್ಷಗಳಲ್ಲಿ ಹಾಳಾಗಿದೆ. ಕೊಡಮಡುಗು ಗ್ರಾಮದಿಂದ ಗಡಿಗೆ ಹೋಗುವ ಮಾರ್ಗದಲ್ಲಿ ಬೃಹತ್ ಗುಂಡಿಗಳು ನಿರ್ಮಾಣವಾಗಿವೆ.
ಡಾಂಬರ್ ಸಂಪೂರ್ಣ ಕಿತ್ತು ಹೋದ ಹಿನ್ನಲೆ ಮಣ್ಣಿನ ರಸ್ತೆಯಾಗಿ ಮುಖ್ಯ ರಸ್ತೆ ಮಾರ್ಪಟ್ಟಿದೆ. ಎರಡರಿಂದ ಮೂರು ಬಾರಿ ಗ್ರಾಮಸ್ಥರು ಮಣ್ಣು ಹೊಡೆಸಿ ದುರಸ್ತಿ ಮಾಡಿಸಿಕೊಂಡಿದ್ದೇವೆ. ಸರಿಪಡಿಸುವಂತೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.ಆರ್.ಎನ್. ನರಸಿಂಹನಾಯಕ, ರಂಗಸಮುದ್ರ ಗ್ರಾ.ಪಂ. ಸದಸ್ಯ
ದೂಳಿನಿಂದಾಗಿ ಬಸ್‌ಗಾಗಿ ಕಾಯಲೂ ಸಾಧ್ಯವಾಗುತ್ತಿಲ್ಲ. ರಸ್ತೆ ಪಕ್ಕದ ಮನೆ ಮಳಿಗೆಯವರು ಆಸ್ಪತ್ರೆಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಚಿತ್ರದುರ್ಗ ಮುಖ್ಯ ರಸ್ತೆ ಹಾಳಾಗಿ ವರ್ಷಗಳೇ ಕಳೆದರೂ ಸರಿಪಡಿಸುವ ಗೋಜಿಗೆ ಹೋಗಿಲ್ಲ.ಆರ್.ಎನ್. ರಾಜೇಶ್, ರಂಗಸಮುದ್ರ
ಹಾಳಾದ ರಸ್ತೆಯಿಂದ ಜನ ಜೀವನ ಅಸ್ತವ್ಯಸ್ತವಾಗುತ್ತದೆ. ಕೆಲ ನಿಮಿಷಗಳು ತೆಗೆದುಕೊಳ್ಳುವ ಪ್ರಯಾಣ ಗಂಟೆ ತೆಗೆದುಕೊಳ್ಳುತ್ತದೆ. ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿಗೆ ಜನಪ್ರತಿನಿಧಿಗಳು ಅಧಿಕಾರಿಗಳು ಆದ್ಯತೆ ನೀಡಬೇಕು.ಎಸ್.ಪಿ. ಅನಿಲ್ ಕುಮಾರ್, ಶ್ರೀರಂಗಪುರ
ಪ್ರಮುಖ ರಸ್ತೆಗಳೇ ಹಾಳಾಗಿವೆ. ದಶಕಗಳು ಕಳೆದರೂ ಉತ್ತಮ ರಸ್ತೆ ನಿರ್ಮಾಣ ಸಾಧ್ಯವಾಗದೆ ಜನತೆ ಸದಾ ಹಾಳಾದ ರಸ್ತೆಯಲ್ಲಿಯೇ ಮೈಕೈ ನೋಯಿಸಿಕೊಂಡು ಓಡಾಡಬೇಕಿದೆ. ರಸ್ತೆ ತೆರಿಗೆ ಪಾವತಿಸಿಯೂ ವಾಹನ ರಿಪೇರಿಗೆ ಸಾವಿರಾರು ರೂಪಾಯಿ ವ್ಯಯಿಸಬೇಕಾಗಿದೆ.ಪವನ್ ಕುಮಾರ್, ಪಾವಗಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.