
ಪಾವಗಡ: ತಾಲ್ಲೂಕಿನ 34 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇ- ಸ್ವತ್ತು ಸಿಗದೆ ಜನರು ಗ್ರಾಮ ಪಂಚಾಯಿತಿ ಕಚೇರಿಗಳಿಗೆ ಅಲೆಯುತ್ತಿದ್ದಾರೆ.
ಸಮರ್ಪಕ ಮಾಹಿತಿ ಕೊರತೆ, ತಾಂತ್ರಿಕ ಸಮಸ್ಯೆ, ಸರ್ವರ್ ಸಮಸ್ಯೆಯಿಂದಾಗಿ ಗ್ರಾಮೀಣ ಭಾಗದಲ್ಲಿ ಇ-ಸ್ವತ್ತು ಯೋಜನೆ ಯಶಸ್ವಿಯಾಗುತ್ತಿಲ್ಲ. ಇದರಿಂದಾಗಿ ರಾಜ್ಯ ಸರ್ಕಾರ ಐದು ವರ್ಷಗಳ ಹಿಂದೆ ಜಾರಿಗೊಳಿಸಿದ ಯೋಜನೆ ಹಳ್ಳಿಗಳನ್ನು ತಲುಪುವಲ್ಲಿ ವಿಫಲವಾಗಿದೆ.
ತಾಲ್ಲೂಕಿನ 98,621 ಆಸ್ತಿಗಳ ಪೈಕಿ, 23,284 ಆಸ್ತಿಗಳು ಇ–ಖಾತೆಗೆ ಒಳಪಟ್ಟಿವೆ. ಸುಮಾರು 75,337 ಸ್ವತ್ತುಗಳು ಇ– ಖಾತೆಗೆ ಒಳಪಡಬೇಕಿದೆ. ಆದರೆ ಅಭಿಯಾನ ಆರಂಭವಾದಾಗಿನಿಂದ ಈವರೆಗೆ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಒಂದೇ ಒಂದು ಇ–ಸ್ವತ್ತು ಆಗಿಲ್ಲ. ಕೇವಲ ದಾಖಲಾತಿ, ಅರ್ಜಿ ಪಡೆದು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಭದ್ರಗೊಳಿಸುವ ಕೆಲಸ ನಡೆಯುತ್ತಿದೆ ಎಂದು ಜನರು ದೂರಿದ್ದಾರೆ.
ಕೆಲ ಸ್ವತ್ತುಗಳಿಗೆ ಪಿಐಡಿಗಳು ಇರುವುದಿಲ್ಲ. ಅಂತಹ ಸ್ವತ್ತುಗಳ ಪಿಐಡಿಯನ್ನು ಜಿಲ್ಲಾ ಪಂಚಾಯಿತಿ ಕಚೇರಿಗೆ ಕಳುಹಿಸಿ ಪಿಐಡಿ ಪಡೆದ ನಂತರವಷ್ಟೇ ಇ– ಖಾತೆ ಮಾಡಿಕೊಡಬಹುದು. ಗ್ರಾಮ ಪಂಚಾಯಿತಿ ಹಂತದಿಂದ ಜಿಲ್ಲಾ ಪಂಚಾಯಿತಿಗೆ ಕಡತ ಹೋಗಿ ಬರುವ ಪ್ರಕ್ರಿಯೆಗೆ ತಿಂಗಳುಗಳೇ ಬೇಕು.
ಹಳೆಯ ಸ್ವತ್ತುಗಳಿಗೆ ಸಂಬಂಧಿಸಿದಂತೆ ಇ– ಖಾತೆ ಪ್ರಕ್ರಿಯೆ ಸುಲಭವಾಗಿಲ್ಲ. ಒಂದೆಡೆ ಜನತೆ ದಾಖಲಾತಿಗಳನ್ನು ಹುಡುಕಿ ನೀಡುವುದು ತ್ರಾಸದಾಯಕವಾದರೆ, ತಂತ್ರಾಂಶದಲ್ಲಿ ಸ್ವತ್ತಿನ ಸಂಖ್ಯೆ, ವರ್ಷ, ದಿನಾಂಕಗಳನ್ನು ನಮೂದಿಸುವುದೂ ಕಷ್ಟಕರ. ಇನ್ನೂ ತಂತ್ರಾಂಶ ಪೂರ್ಣ ಪ್ರಮಾಣದಲ್ಲಿ ಅಪ್‌ಡೇಟ್ ಆಗಬೇಕಿದೆ ಎನ್ನುವುದು ಗ್ರಾಮ ಪಂಚಾಯಿತಿ ಸಿಬ್ಬಂದಿ ಅಭಿಪ್ರಾಯ.
ಕೆಲ ಸ್ವತ್ತುಗಳು ಹಂತಗಳನ್ನು ದಾಟಿಕೊಂಡು ಬರುವ ವೇಳೆಗೆ ಪಿಡಿಒ ಲಾಗಿನ್ ತೆಗೆದುಕೊಳ್ಳುವುದಿಲ್ಲ. ಹೀಗಾಗಿ ಪಿಡಿಒ ಸಹಿ ಇಲ್ಲದ ಇ– ಸ್ವತ್ತಿಗೆ ಮಾನ್ಯತೆಯೂ ಇರುವುದಿಲ್ಲ. ತಿಂಗಳುಗಳು ಕಾದರೂ ಇ– ಸ್ವತ್ತು ಸಿಗದೆ ಜನತೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಇ– ಖಾತೆ ಸಿಗದೆ ಜನತೆ ಸಾಲ ಸೌಲಭ್ಯ, ಸರ್ಕಾರದ ಸವಲತ್ತುಗಳನ್ನು ಪಡೆಯಲಾಗುತ್ತಿಲ್ಲ. ತಾಂತ್ರಿಕ ಸಮಸ್ಯೆಗಳ ನಿವಾರಣೆಗೆ ಮುಂದಾಗಿದ್ದರೂ, ಇ–ಸ್ವತ್ತು ಯೋಜನೆ ಅನುಷ್ಠಾನದಲ್ಲಿ ಅನೇಕ ದೋಷಗಳು ಇರುವುದು ಬೆಳಕಿಗೆ ಬಂದಿದೆ. ದಾಖಲೆ ಅಪ್‌ಲೋಡ್ ವಿಳಂಬ, ಹಳೆಯ ದಾಖಲೆಗಳು ಹೊಂದಾಣಿಕೆಯಾಗದಿರುವುದು, ಭೂಮಿಯ ಅಳತೆ ವ್ಯತ್ಯಾಸ, ಖಾತೆ ಸಂಖ್ಯೆ ತಾಳೆಯಾಗದಿರುವುದು ಮೊದಲಾದ ಸಮಸ್ಯೆಗಳು ಎದುರಾಗುತ್ತಿವೆ.
ಇ–ಸ್ವತ್ತು ನೋಂದಣಿಗೆ ಸಂಬಂಧಿಸಿದಂತೆ ಸರ್ವೆ ದಾಖಲೆ, ಪಹಣಿ, ಆರ್‌ಟಿಸಿ, ಹಕ್ಕುಪತ್ರಗಳು ಸೇರಿದಂತೆ ಹಲವು ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕಿದ್ದು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಇದಕ್ಕೆ ಬೇಕಾದ ತಾಂತ್ರಿಕ ಸಿಬ್ಬಂದಿ ಹಾಗೂ ಮೂಲಸೌಕರ್ಯಗಳ ಕೊರತೆ ಕಂಡುಬರುತ್ತಿದೆ.
ಇ–ಸ್ವತ್ತು ಯೋಜನೆಯು ಜನಸಾಮಾನ್ಯರಿಗೆ ಸರಳವಾಗಬೇಕಾದರೆ, ಪ್ರಕ್ರಿಯೆ ಸುಗಮವಾಗಬೇಕು. ಆದರೆ ಈಗಿನ ವ್ಯವಸ್ಥೆಯಲ್ಲಿ ಗ್ರಾಮೀಣ ಜನರು ತಾಲೂಕು ಕಚೇರಿ, ಜಿಲ್ಲಾ ಕಚೇರಿ ಸುತ್ತುವಂತಾಗಿದೆ. ಇದರಿಂದ ಜನರಿಗೆ ಸಮಯ, ಹಣ ಎರಡೂ ವ್ಯರ್ಥವಾಗುತ್ತಿದೆ.
2004ರ ಹಿಂದಿನ ದಾಖಲೆಗಳ ಡಿಜಿಟಲೀಕರಣ ಇನ್ನೂ ಪೂರ್ಣಗೊಳ್ಳದಿರುವುದು ಮತ್ತೊಂದು ಸಮಸ್ಯೆ. ಸರ್ಕಾರ ಇ–ಸ್ವತ್ತು ಯೋಜನೆಯಡಿ ಎಲ್ಲಾ ದಾಖಲೆಗಳನ್ನು ಡಿಜಿಟಲ್ ಮಾಡುವ ಗುರಿ ಹೊಂದಿದ್ದರೂ, ಭೂ ದಾಖಲೆಗಳಲ್ಲಿ ಸಮಸ್ಯೆ ಇರುವುದರಿಂದ ಅರ್ಜಿದಾರರು ತೊಂದರೆ ಅನುಭವಿಸುತ್ತಿದ್ದಾರೆ.
ಇ–ಸ್ವತ್ತು ಯೋಜನೆಯ ಉದ್ದೇಶ ಉತ್ತಮವಾದರೂ, ಅನುಷ್ಠಾನದಲ್ಲಿ ಸುಧಾರಣೆ ಅಗತ್ಯ. ತಾಂತ್ರಿಕ ದೋಷ ನಿವಾರಣೆ, ಸಿಬ್ಬಂದಿ ತರಬೇತಿ ಸೇರಿದಂತೆ ಸಾಕಷ್ಟು ಸುಧಾರಣೆ ತರುವ ಅಗತ್ಯವಿದೆ.
ತಂತ್ರಾಂಶ ಸಮಸ್ಯೆಯ ನೆಪ ಹೇಳಿ ಇ–ಖಾತೆ ಕೆಲಸ ಮಾಡಿಕೊಡುತ್ತಿಲ್ಲ. ಇ ಸ್ವತ್ತು ಮಾಡಿಸಿಕೊಳ್ಳಲು ಗ್ರಾಮ ಪಂಚಾಯಿತಿ ಕಚೇರಿಗೆ ಅಲೆದಾಡಲಾಗುತ್ತಿದೆ.ವೆಂಕಟೇಶ್ ಪಳವಳ್ಳಿ
ತಾಂತ್ರಿಕ ಸಮಸ್ಯೆಗಳಿರುವ ಬಗ್ಗೆ ಗ್ರಾಮ ಪಂಚಾಯಿತಿ ಕಚೇರಿಗಳ ಮುಂಭಾಗ ಮಾಹಿತಿ ನೀಡಿದಲ್ಲಿ ಸರಿ ಹೋಗುವವರೆಗೆ ಅತ್ತ ಜನರು ಸುಳಿಯುವುದಿಲ್ಲ. ಸರಿ ಹೋಗಿರಬಹುದು ಕೆಲಸ ಮಾಡಿಕೊಡಬಹುದು ಎಂಬ ಭರವಸೆ ಇಟ್ಟುಕೊಂಡು ಕಚೇರಿಗೆ ಹೋಗಿ ಬರುವುದೇ ಕೆಲಸವಾಗಿದೆ.ರಮೇಶ್ ಪಾವಗಡ ತಾಲ್ಲೂಕು
ಇ– ಖಾತೆ ತಾಂತ್ರಿಕ ಸಮಸ್ಯೆಗಳಿಂದಾಗಿ ಕಗ್ಗಂಟಾಗಿ ಪರಿಣಮಿಸಿದೆ. ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ಎಲ್ಲ ಸ್ವತ್ತುಗಳಿಗೂ ಇ– ಖಾತೆ ಮಾಡಿಸಿದರೆ ಅನುಕೂಲವಾಗಲಿದೆ.ಅನಿಲ್ ಕುಮಾರ್ ಶ್ರೀರಂಗಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.