ಪಾವಗಡ: ಹಾವಿನ ಆಕಾರದಲ್ಲಿರುವ ಬೆಟ್ಟ, ತಾಲ್ಲೂಕಿನ ಜನರ ಭಾವನೆಗಳ ಕೋಟೆ, ಐತಿಹಾಸಿಕ, ಪೌರಾಣಿಕ ಪ್ರತೀತಿ ಹೊಂದಿರುವ ಪಾವಗಡ ಬೆಟ್ಟಕ್ಕೆ ಕಾಯಕಲ್ಪ ಬೇಕಿದೆ.
ಈ ಪ್ರದೇಶ ಗೋಂಡಾರಣ್ಯಕ್ಕೆ ಸೇರಿತ್ತೆಂದು ಪುರಾಣದಲ್ಲಿ ಉಲ್ಲೇಖವಿದೆ. ಪಾವಗಡ ಹೆಸರು ಬರಲು ಇಲ್ಲಿನ ಬೆಟ್ಟವು ಹಾವಿನ ಆಕಾರದಲ್ಲಿ ಇರುವುದೇ ಕಾರಣ. ಹಿಂದೆ ಇದಕ್ಕೆ ‘ಪಾಮುಕೊಂಡ’ ಎಂದು ಹೆಸರಿದ್ದು, ನಂತರ ಪಾವುಕೊಂಡ, ಪಾವುಕೊಡವಾಗಿ ಈಗ ಪಾವಗಡ ಆಗಿದೆ. ಮರಾಠರ ದಾಳಿಗೆ ಒಳಗಾಗಿದ್ದ ಕಾಲಘಟ್ಟದಲ್ಲಿ ಪಾವಗಡ ಆಗಿದೆ ಎನ್ನುವುದು ಇತಿಹಾಸ.
ತುಮಕೂರು, ಚಳ್ಳಕೆರೆ, ಬಳ್ಳಾರಿ, ಶಿರಾ ರಸ್ತೆಗಳಿಂದ ಬರುವವರಿಗೆ ಸುಮಾರು 2ರಿಂದ 3 ಕಿ.ಮೀ ದೂರದಿಂದಲೇ ದರ್ಶನ ನೀಡುವ ಬೆಟ್ಟ ನೋಡಿದ ಕೂಡಲೇ ಸಂತಸ, ಆತ್ಮವಿಶ್ವಾಸ ಮೂಡುತ್ತದೆ.
ಮೊದಲ ಬಾರಿಗೆ ಪಾವಗಡಕ್ಕೆ ಬರುವವರಿಗೆ ಬೆಟ್ಟದ ಮೇಲೇನಿದೆ? ಒಮ್ಮೆಯಾದರೂ ಬೆಟ್ಟ ಏರಬೇಕು ಎಂಬ ಕುತೂಹಲ ಮೂಡಿಸುತ್ತದೆ. ಶ್ರಾವಣ ಮಾಸದಲ್ಲಿ, ವಿಶೇಷ ದಿನಗಳಂದು ಪಟ್ಟಣದ ಶನೈಶ್ಚರ ದೇಗುಲಕ್ಕೆ ಬರುವ ಬಹುತೇಕ ಮಂದಿ ಬೆಟ್ಟ ಏರುತ್ತಾರೆ.
ಪಾವಗಡ ಬೆಟ್ಟ ಪಟ್ಟಣದಿಂದ ಕೂಗಳತೆ ದೂರದಲ್ಲಿದೆ. ಸ್ವಚ್ಛ ಗಾಳಿ, ಸುಂದರ ವಾತಾವರಣ, ಪ್ರಶಾಂತ ಅನುಭವದ ಮಧ್ಯೆ ಹಕ್ಕಿಗಳ ಕಲರವ, ದುಂಬಿಗಳ ಝೇಂಕಾರ, ಮಳೆಗಾಲದಲ್ಲಿ ನೀರಿನ ಜುಳು ಜುಳು ನಿನಾದ ಇವೆಲ್ಲವೂ ನಿಸರ್ಗಪ್ರೇಮಿಗಳನ್ನು ಕೈಬೀಸಿ ಕರೆಯುತ್ತವೆ.
ಬೆಟ್ಟದ ಮೇಲೇನಿದೆ: ಬೆಟ್ಟ ಚಾರಣಿಗರ ನೆಚ್ಚಿನ ತಾಣ. ಬೆಟ್ಟದ ಮಧ್ಯ ಭಾಗದಲ್ಲಿ ಬಯಲಿನಲ್ಲಿಯೇ ಇರುವ ಬೃಹತ್ ಬಂಡೆಯಲ್ಲಿ ಕೆತ್ತಿರುವ ಆಂಜನೇಯ ವಿಗ್ರಹ, ತುತ್ತ ತುದಿಯಲ್ಲಿ ಬಂಧಿಖಾನೆ, ಕಣಜ, ಮಸೀದಿ, ಭೀಮನ ದೊಣೆ, ಸುರಂಗ, ತಪ್ಪಿತಸ್ಥರನ್ನು ಬೆಟ್ಟದ ಮೇಲಿಂದ ಕೆಳಕ್ಕೆ ದೂಡುತ್ತಿದ್ದ ತಾಣ ಕಾಣಸಿಗುತ್ತವೆ. ಇವು ಪಾಳೆಗಾರರು, ರಾಜಮನೆತನಗಳ ಆಳ್ವಿಕೆಯ ಚರಿತ್ರೆ ಸಾರುತ್ತಿವೆ.
ಬೆಟ್ಟವು ಚಾರಣಿಗರಿಗೆ, ಸಾಹಸ ಪ್ರಿಯರಿಗೆ, ಸವಾಲೆಸೆದರೆ, ಇತಿಹಾಸಕಾರರಿಗೆ, ಸಂಶೋಧಕರಿಗೆ ಮೊಗೆದಷ್ಟು ಐತಿಹಾಸಿಕ ವಿಚಾರಗಳನ್ನು ನೀಡುವ ಮಾಹಿತಿ ಗಣಿಯಂತಿದೆ. ಬೆಟ್ಟಕ್ಕೆ ಹತ್ತು ಹೆಬ್ಬಾಗಿಲುಗಳಿವೆ. ಇವುಗಳ ಮೂಲಕ ಬೆಟ್ಟದ ಮೇಲೇರಬಹುದು. ಬೆಟ್ಟವನ್ನೇರಲು ಮೆಟ್ಟಿಲುಗಳ ವ್ಯವಸ್ಥೆ ಸಹ ಇದೆ. ಬೆಟ್ಟದ ತಪ್ಪಲಲ್ಲಿ ಕಮ್ಮಾರ ಮಂಟಪವಿದೆ. ಇಲ್ಲಿ ಆಯುಧ, ಯುದ್ದ ಶಸ್ತ್ರಾಸ್ತ್ರಗಳ ತಯಾರಿ, ಹದಗೊಳಿಸುವಿಕೆ ನಡೆಯುತ್ತಿತ್ತು ಎಂದು ಹೇಳಲಾಗುತ್ತದೆ. ಕುಲುಮೆಗಳು ಇಲ್ಲಿ ಇದ್ದವೆಂದು ಹಿರಿಯರು ಹೇಳುತ್ತಾರೆ. ಈ ಹಿಂದೆ ಸೂರ್ಯ ದೇವಾಲಯವು ಬೆಟ್ಟದ ಮೇಲಿತ್ತು ಎಂಬುದು ತಿಳಿದುಬರುತ್ತದೆ.
ಬೆಟ್ಟದ ಮೇಲೆ ನಿಂತು ನೋಡಿದರೆ 20ರಿಂದ 50 ಕಿ.ಮೀ. ದೂರದವರೆಗೂ ವೀಕ್ಷಣೆ ಮಾಡಬಹುದಾಗಿದೆ. ಪಟ್ಟಣ ಸೇರಿದಂತೆ ದೂರದೂರು, ಬೆಟ್ಟ ಗುಡ್ಡಗಳ ಸುಂದರ ನೋಟ ಕಾಣಸಿಗುತ್ತದೆ.
ಮೂಲ ಸೌಕರ್ಯ ಕೊರತೆ: ಬೆಟ್ಟಕ್ಕೆ ವಿದ್ಯುತ್ ದೀಪಗಳನ್ನು ಅಳವಡಿಸಿರುವುದನ್ನು ಹೊರತುಪಡಿಸಿ ಯಾವುದೇ ಮೂಲ ಸೌಕರ್ಯಗಳನ್ನು ಕಲ್ಪಿಸಿಲ್ಲ. ಬೆಟ್ಟ ಹತ್ತುವ ಪ್ರವಾಸಿಗರು ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಸಾಮಗ್ರಿ, ತ್ಯಾಜ್ಯಗಳನ್ನು ಹಾಕುತ್ತಾರೆ. ಬೆಟ್ಟ ಹತ್ತಲು ಹಳೆಯ ಕಾಲದ ಮೆಟ್ಟಿಲುಗಳು ಅಲ್ಲಲ್ಲಿ ಹಾಳಾಗಿವೆ. ಕಡಿದಾದ ಬೆಟ್ಟ ಹತ್ತಲು ಪ್ರವಾಸಿಗರು ಕಷ್ಟಪಡಬೇಕು.
ಬೆಟ್ಟದಲ್ಲಿ ವಿಶ್ರಾಂತಿ ಪಡೆಯಲು ವ್ಯವಸ್ಥೆ ಇಲ್ಲ. ಹಾಳಾದ ಮಂಟಪಗಳಲ್ಲಿ, ಗಿಡ, ಮರಗಳ ಕೆಳಗೆ ಕೂತು ವಿಶ್ರಾಂತಿ ಪಡೆಯಬೇಕು. ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಯಾವುದೇ ಮೌಲ ಸೌಕರ್ಯ ಬೆಟ್ಟದ ಮೇಲಿಲ್ಲ.
ನಿಧಿ ಚೋರರ ಹಾವಳಿ: ಅಮಾವಸ್ಯೆ, ಹುಣ್ಣಿಮೆ ಇತ್ಯಾದಿ ದಿನಗಳಂದು ಆಂಧ‍್ರ, ಕೇರಣ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಂದ ಬರುವ ನಿಧಿ ಚೋರರು ರಾತ್ರಿ ವೇಳೇ ಬೆಟ್ಟ ಹತ್ತಿ ಮಂಟಪ, ಐತಿಹಾಸಿಕ ಸ್ಮಾರಕಗಳನ್ನು ಹಾಳು ಮಾಡುತ್ತಾರೆ. ಇಂತಹ ಕಳ್ಳರಿಂದ ಐತಿಹಾಸಿಕ ಸ್ಮಾರಕಗಳನ್ನು ರಕ್ಷಿಸಲು ಯಾವುದೇ ಭದ್ರತಾ ವ್ಯವಸ್ಥೆ ಇಲ್ಲ.
ಅಗತ್ಯವಿರುವ ಸೌಕರ್ಯಗಳು: ಬೆಟ್ಟ ಹತ್ತಲು ಉತ್ತಮ ರಸ್ತೆ, ಆಸುಪಾಸಿನಲ್ಲಿ ವಿಶ್ರಾಂತಿಗೆ ಜಾಗ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಚರಂಡಿ, ದೊಣೆ ನೋಡುವ ಜಾಗ ಅಭಿವೃದ್ಧಿ, ಬೆಟ್ಟದ ತುತ್ತ ತುದಿಯಲ್ಲಿ ಹಾಗೂ ಕಡಿದಾದ ಸ್ಥಳದಲ್ಲಿ ಭದ್ರತೆಗಾಗಿ ಕಬ್ಬಿಣದ ಗ್ರಿಲ್, ಬೆಟ್ಟದಲ್ಲಿ ಪ್ರವಾಸಿ ಮಿತ್ರರ ನೇಮಕವಾಗಬೇಕಿದೆ. ಬೆಟ್ಟದ ಸ್ವಚ್ಛತೆಗೆ ಸಿಬ್ಬಂದಿ ನೇಮಿಸಬೇಕಿದೆ.
ಬೆಟ್ಟವು ಒಂದು ದಿನದ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣ. ಇಂತಹ ಬೆಟ್ಟ ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು ಅಭಿವೃದ್ಧಿ ಕಂಡಿಲ್ಲ ಎನ್ನುವುದು ಸ್ಥಳೀಯರ ಅಭಿಪ್ರಾಯ. ರಜಾ ದಿನಗಳಲ್ಲಂತೂ ಬೆಟ್ಟದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ. ಬೆಟ್ಟದಲ್ಲಿ ಹಸಿರು ಮರ, ಹೆಬ್ಬಂಡೆ, ಕೋಟೆ, ಮಂಟಪಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಪ್ರವಾಸೋದ್ಯಮ, ಕಂದಾಯ ಇಲಾಖೆ, ಪುರಸಭೆ ಅಧಿಕಾರಿಗಳು ಬೆಟ್ಟವನ್ನು ಅಭಿವೃದ್ಧಿ ಪಡಿಸಿದಲ್ಲಿ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಿ, ಆದಾಯವನ್ನೂ ಹೆಚ್ಚಿಸಬಹುದು.
ಕುಡಿಯುವ ನೀರು ಶೌಚಾಲಯ ವಿಶ್ರಾಂತಿ ಪಡೆಯಲು ವ್ಯವಸ್ಥೆ ಮಾಡಿ ಮೂಲಸೌಕರ್ಯ ಕಲ್ಪಿಸಬೇಕು. ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸಬೇಕು. ವೇಣುಗೋಪಾಲಾಚಾರಿ ಪಾವಗಡ– ವೇಣುಗೋಪಾಲಾಚಾರಿ, ಪಾವಗಡ
ಪಾವಗಡ ಬೆಟ್ಟದ ಮೇಲೆ ಪ್ಲಾಸ್ಟಿಕ ನಿಷೇಧಿಸಿ ಸ್ವಚ್ಛತೆಗೆ ಸಿಬ್ಬಂದಿ ನಿಯೋಜಿಸಬೇಕು. ಬೆಟ್ಟ ಇತಿಹಾಸ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಭಿತ್ತಿ ಪತ್ರಗಳನ್ನು ಹಾಕಬೇಕು.– ಪಿ.ಎಸ್. ಸಂದೀಪ್
ಶತಮಾನಗಳ ಇತಿಹಾಸವಿರುವ ಪಾವಗಡ ಬೆಟ್ಟದ ಬಳಿ ಐತಿಹಾಸಿಕ ಪಳಯುಳಿಕೆಗಳ ವಸ್ತು ಸಂಗ್ರಹಾಲಯ ಆರಂಭಿಸಿ ಇತಿಹಾಸದ ಬಗ್ಗೆ ಅರಿವು ಮೂಡಿಸಬೇಕು. ಸ್ಥಳೀಯ ಇತಿಹಾಸದ ಬಗ್ಗೆ ಮಾಹಿತಿ ನೀಡಬೇಕು– ಭಾನುತೇಜು ವೈದ್ಯ
ನಿಧಿ ಕಳ್ಳರು ಬೆಟ್ಟದ ಮೇಲೆ ಸ್ಮಾರಕಗಳನ್ನು ಹಾಳುಮಾಡುತ್ತಿದ್ದು ಭದ್ರತೆ ಕಲ್ಪಿಸಬೇಕು. ಆರಂಭದಲ್ಲಿ ಬೆಟ್ಟ ಹತ್ತುವವರನ್ನು ಪರಿಶೀಲಿಸಿ ಪ್ಲಾಸ್ಟಿಕ್ ಇತರೆ ಅಪಾಯಕಾರಿ ಸಾಮಗ್ರಿ ಕೊಂಡೊಯ್ಯದಂತೆ ಎಚ್ಚರ ವಹಿಸಬೇಕು– ಪಿ.ವೆಂಕಟೇಶ್
ಮರಾಠರ ದಾಳಿಯಿಂದ ಹೆಸರು ಬದಲು
ಪಾವಗಡ ಕೋಟೆ ಗೋಪಣ್ಣ ಬಾಲಪ್ಪನಾಯಕ ಮುಂತಾದ ಪಾಳೆಯಗಾರರು ಆಳ್ವಿಕೆ ನಡೆಸಿದ್ದಾರೆ. ಬಾಲಪ್ಪನಾಯಕನ ಅವಧಿಯಲ್ಲಿ ಕೋಟೆ ನಿರ್ಮಾಣವಾಯಿತು ಎಂದು ಇತಿಹಾಸದ ಪುಟಗಳಲ್ಲಿ ಮಾಹಿತಿ ಸಿಗುತ್ತದೆ. ಮರಾಠರ ದಾಳಿಯಿಂದಾಗಿ ಪಾಮುಕೊಂಡ ಹೆಸರು ಪಾವಗಡ ಎಂದು ಬದಲಾಯಿತು. ಪಾವಗಡದ ಪಾಳೆಗಾರರು ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿ ಆಳ್ವಿಕೆ ನಡೆಸಿದ್ದರು. ವೆಂಟೇಶುಲು ಪ್ರಾಂಶುಪಾಲ ಕೆ.ಟಿ.ಹಳ್ಳಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.