ADVERTISEMENT

ಪಾವಗಡ | ಪಾಳುಬಿದ್ದ ಮನೆಯಲ್ಲಿ ದಶಕಗಳಿಂದ ವಾಸ

ಹಾವು, ಚೇಳುಗಳ ನಡುವೆ ಜೀವನ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 4:14 IST
Last Updated 10 ಸೆಪ್ಟೆಂಬರ್ 2025, 4:14 IST
ಪಾವಗಡ ಕಾವಲಗೆರೆಯ ಪಾಳುಬಿದ್ದ ಮನೆಯ ಬಳಿ ಸೀತಾಲಕ್ಷ್ಮಿ, ರಾಮಾಂಜಿನೇಯ
ಪಾವಗಡ ಕಾವಲಗೆರೆಯ ಪಾಳುಬಿದ್ದ ಮನೆಯ ಬಳಿ ಸೀತಾಲಕ್ಷ್ಮಿ, ರಾಮಾಂಜಿನೇಯ   

ಪಾವಗಡ: ಪಟ್ಟಣದ ಕಾವಲಗೆರೆಯ ಚಾವಣಿ ಇಲ್ಲದ ಪಾಳು ಬಿದ್ದ ಮನೆಯಲ್ಲಿ ಸಹೋದರ, ಸಹೋದರಿ ದಿನ ದೂಡುತ್ತಿದ್ದಾರೆ. ಇವರಿಗೆ ಕೂಡಲೇ ಸೂರು ಕಲ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಚಾವಣಿ ಇಲ್ಲದ ಓಣಿಯಂತಹ ಪಾಳುಬಿದ್ದ ಮನೆಯಲ್ಲಿ ಸೀತಾಲಕ್ಷ್ಮಿ (46) ರಾಮಾಂಜಿನೇಯ (50) ದಶಕಗಳಿಂದ ವಾಸಿಸುತ್ತಿದ್ದಾರೆ. ಸಹೋದರ ರಾಮಾಂಜಿನೇಯ ಖಾಸಗಿ ಬಸ್‌ ಕ್ಲೀನರ್‌ ಆಗಿ ಕೆಲಸ ಮಾಡಿ ಸಿಗುವ ಕಡಿಮೆ ಮೊತ್ತ ತಂದು ಸಹೋದರಿಯನ್ನು ಸಾಕುತ್ತಿದ್ದಾರೆ.

ಪಾಳುಬಿದ್ದ ಮನೆಗೆ ಬಾಗಿಲಿಲ್ಲ, ಎಲ್ಲೆಂದರಲ್ಲಿ ಬಿದ್ದಿರುವ ಪ್ಲಾಸ್ಟಿಕ್‌ ತ್ಯಾಜ್ಯ, ಕಲ್ಲು, ಮಣ್ಣು, ಕುಸಿದ ಗೋಡೆ, ಕಲ್ಲಿನೊಳಗೆ ನುಸುಳಿ ಹೋಗುವ ಹಾವು, ಚೇಳುಗಳು. ಮಳೆ ಬಂದರೆ ನೆನಯುತ್ತಾ, ಬಿಸಿಲಿನ ಬೇಗೆಯಲ್ಲಿ ಬೇಯುತ್ತಾ ದಿನ ಕಳೆಯಲಾಗುತ್ತಿದೆ.

ADVERTISEMENT

ಅಡುಗೆ ಮಾಡಲು ಇರಲಿ ಒಂದು ಕ್ಷಣ ಅಲ್ಲಿರಲೂ ಸಾಧ್ಯವಾಗದ ಸ್ಥಿತಿ ಇದೆ. ಇಂತಹ ಸ್ಥಳದಲ್ಲಿ ದಶಕಗಳಿಂದ ಜೀವನ ಹೇಗೆ ಸಾಗಿಸುತ್ತಿದ್ದಾರೆ ಎಂಬ ಪ್ರಶ್ನೆ ಮೂಡದಿರದು. ಸರ್ಕಾರ ನೀಡುವ ಪಡಿತರದಲ್ಲಿ ಅಡುಗೆ ಮಾಡಿಕೊಳ್ಳಲಾಗುತ್ತದೆ. ಸಾಧ್ಯವಾಗದಿದ್ದರೆ ಅಕ್ಕ ಪಕ್ಕದ ಮನೆಯವರು ಆಹಾರ ನೀಡುತ್ತಾರೆ. ಇದೀಗ ನನ್ನ ಕಣ್ಣು ಕಾಣುತ್ತಿಲ್ಲ ಹೀಗಾಗಿ ಅಡುಗೆ ಮಾಡಿಕೊಳ್ಳಲೂ ಸಾಧ್ಯವಾಗುತ್ತಿಲ್ಲ ಎಂದು ಸೀತಾಲಕ್ಷ್ಮಿ ಅಳಲು ತೋಡಿಕೊಂಡರು.

‘ನಾನು ಚಿಕ್ಕ ಮಗುವಾಗಿದಾಗಿನಿಂದ ಅಣ್ಣನ ಜೊತೆ ಪಟ್ಟಣದಲ್ಲಿ ವಾಸಿಸುತ್ತಿದ್ದೇನೆ. ನಾಗರ ಹಾವು ಸೇರಿದಂತೆ ವಿಷ ಜಂತುಗಳು ಅತಿಥಿಗಳಂತೆ ಬಂದು ಹೋಗುತ್ತವೆ’ ಎಂದರು.

‘ಕ್ಲೀನರ್‌ ಕೆಲಸ ಮಾಡಿ ಬಂದ ಅಲ್ಪ ಸ್ವಲ್ಪ ಹಣದಲ್ಲಿ ಜೀವನ ಮಾಡುತ್ತಿದ್ದೇವೆ. ನಮಗೆ ಮನೆ ನಿರ್ಮಿಸಿಕೊಟ್ಟರೆ ಆ ಸಾಲ ತೀರಿಸುತ್ತೇವೆ, ಯಾರ ಋಣವೂ ನಮಗೆ ಬೇಡ’ ಎನ್ನುತ್ತಾರೆ ಇವರು.

‘ಒಮ್ಮೆ ಯಾರೋ ಬಂದು ನನ್ನ ಕಿವಿಯಲ್ಲಿದ್ದ ಚಿನ್ನದ ಓಲೆ, ಪಾತ್ರಗಳನ್ನೂ ಹೊತ್ತೊಯ್ದರೂ. ಅವರಿಗೆ ನಮಗಿಂತ ಕಷ್ಟವಿತ್ತೇನೋ ಎಂದು ಸುಮ್ಮನಾದೆವು’ ಎಂದು ಸೀತಾಲಕ್ಷ್ಮಿ ಕಣ್ಣೀರು ಒರೆಸುತ್ತಾ ನುಡಿದರು.

ಪುರಸಭೆ, ತಾಲ್ಲೂಕು ಆಡಳಿತ, ಸ್ವಾಮಿ ಜಪಾನಂದಜಿ ಸೇರಿದಂತೆ ಸಂಘ ಸಂಸ್ಥೆಗಳು ಈ ಕೂಡಲೆ ನಿರ್ಗತಿಕರಾದ ಇವರಿಗೆ ಸೂರು, ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಪುರಸಭೆ ಮಾಜಿ ಸದಸ್ಯ ಮನು ಮಹೇಶ್‌ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.