ADVERTISEMENT

ಶೇಂಗಾ ಕಳಪೆ ಬಿತ್ತನೆ ಬೀಜ ಸರಬರಾಜು

​ಪ್ರಜಾವಾಣಿ ವಾರ್ತೆ
Published 9 ಜೂನ್ 2021, 3:03 IST
Last Updated 9 ಜೂನ್ 2021, 3:03 IST
ತುಮಕೂರಿನಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ ಪ್ರಗತಿ ಪರಿಶೀಲನೆ ನಡೆಸಿದರು. ಸಚಿವ ಜೆ.ಸಿ.ಮಾಧುಸ್ವಾಮಿ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಇದ್ದಾರೆ
ತುಮಕೂರಿನಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ ಪ್ರಗತಿ ಪರಿಶೀಲನೆ ನಡೆಸಿದರು. ಸಚಿವ ಜೆ.ಸಿ.ಮಾಧುಸ್ವಾಮಿ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಇದ್ದಾರೆ   

ತುಮಕೂರು: ಪಾವಗಡ ಹಾಗೂ ಇತರೆಡೆಗಳಿಗೆ ಶೇಂಗಾ ಕಳಪೆ ಬಿತ್ತನೆ ಬೀಜ ಸರಬರಾಜು ಮಾಡಿದ್ದು ಬೆಳಕಿಗೆ ಬಂದಿದೆ.

ಕೃಷಿ ಸಚಿವ ಬಿ.ಸಿ.ಪಾಟೀಲ ಮಂಗಳವಾರ ಕೃಷಿ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಸಮಯದಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಈ ವಿಚಾರ ತಿಳಿಸಿದರು. ಶೇಂಗಾ ಬಿತ್ತನೆ ಬೀಜ ವಿತರಣೆ ತಡವಾಗಿರುವುದಕ್ಕೆ ಈವರೆಗೆ ಕಾರಣ ನೀಡದ ಅಧಿಕಾರಿಗಳು ಸಭೆಯಲ್ಲಿ ಸಚಿವರ ಎದುರು ಸತ್ಯ ಬಾಯಿ ಬಿಟ್ಟರು.

ಕಳಪೆಯಾಗಿದ್ದ 5,800 ಕ್ವಿಂಟಲ್ ಕಡಲೆ ಕಾಯಿಯನ್ನು ವಾಪಸ್ ಕಳುಹಿಸ
ಲಾಯಿತು. ಮತ್ತೆ ಬೇರೆ ಬೀಜ ಸರಬ
ರಾಜು ಮಾಡಿದ್ದಾರೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜಸುಲೋಚನಾ ಮಾಹಿತಿ ನೀಡಿದರು.

ADVERTISEMENT

ವಿಷಯ ಪ್ರಸ್ತಾಪಿಸಿದ ಸಚಿವ ಜೆ.ಸಿ.ಮಾಧುಸ್ವಾಮಿ, ಬಿತ್ತನೆ ಬೀಜ ಸರಬರಾಜು ಮಾಡಿದ್ದ ಕರ್ನಾಟಕ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಪಾವಗಡದಲ್ಲಿ ಅಲ್ಲಿನ ಶಾಸಕರು ಕಡಲೆ ಕಾಯಿಗಳನ್ನು ಗಾಳಿಗೆ ತೂರಿ ಜೊಳ್ಳಾಗಿರುವುದನ್ನು ತೋರಿಸಿದರು. ಸಹಕಾರಿ ಸಂಸ್ಥೆಯಾಗಿ ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿಲ್ಲ. ರೈತರ ಪರ ಕೆಲಸ ಮಾಡುತ್ತಿಲ್ಲ. ಮಹಾಮಂಡಳದ ಅಧಿಕಾರಿಗಳು ಶಾಮೀಲಾಗಿ ಕಳಪೆ ಬಿತ್ತನೆ ಬೀಜ ಸರಬರಾಜು ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.

ಹಿಂದಿನ ವರ್ಷ ಸಹ ಕಳಪೆ ಬೀಜಕೊಟ್ಟಿದ್ದರಿಂದ ಹಣ ಪಾವತಿಸದಂತೆ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು. ಕೊನೆಗೆ ಹಣ ಪಾವತಿಸಲಾಯಿತು. ಈಗ ಮತ್ತೆ ಅದೇ ದಾರಿ ಹಿಡಿದಿದ್ದೀರಾ? ಎಂದು ಕುಟುಕಿದರು.

ಸಚಿವ ಬಿ.ಸಿ.ಪಾಟೀಲ ಸಹ ಅಸಮಾಧಾನ ವ್ಯಕ್ತಪಡಿಸಿದರು. ‘ಮಹಾಮಂಡಳದವರು ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ನಿಮ್ಮಿಂದಾಗಿ ಸರ್ಕಾರ, ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ. ಒಮ್ಮೆ ಬಿತ್ತನೆಮಾಡಿ ಮೊಳಕೆ ಬಾರದಿದ್ದರೆ ರೈತರು ಮತ್ತೊಮ್ಮೆ ಬಿತ್ತನೆ ಮಾಡಲು ಸಾಧ್ಯವೆ’ ಎಂದು ಪ್ರಶ್ನಿಸಿದರು. ಈ ಬಗ್ಗೆ ಪ್ರತ್ಯೇಕ ಸಭೆ ನಡೆಸಿ ಕ್ರಮ ಜರುಗಿಸುವ ಭರವಸೆ ನೀಡಿದರು.

ಬೀಜ ಕಿಟ್: ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಅಡಿಯಲ್ಲಿ ಜಿಲ್ಲೆಗೆ ವಿವಿಧ ಮಾದರಿಯ 8 ಸಾವಿರ ಬಿತ್ತನೆ ಬೀಜದ ಕಿಟ್‌ಗಳನ್ನು ನೀಡಲಾಗುತ್ತಿದೆ. ಬಹು ಬೆಳೆ ಪದ್ಧತಿಯಲ್ಲಿ ಬಿತ್ತನೆ ಮಾಡುವಂತೆ ರೈತರನ್ನು ಪ್ರೋತ್ಸಾಹಿಸು
ವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಬಿತ್ತನೆ ಬೀಜ, ರಸಗೊಬ್ಬರದ ಸಮಸ್ಯೆ
ಯಾಗದಂತೆ ನೋಡಿಕೊಳ್ಳಬೇಕು. ರೈತರು ಅಂಗಡಿಗಳ ಮುಂದೆ ಕಾದುನಿಂತು ಗೊಬ್ಬರ ಸಿಗದೆ ವಾಪಸ್ ಹೋಗಬಾರದು. ಒಟ್ಟಾರೆ ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.

‘ಈ ಬಾರಿ ಮಳೆ ಚೆನ್ನಾಗಿ ಆಗಿದ್ದು, ಕಳೆದ ವರ್ಷಕ್ಕಿಂತ ಶೇ 25ರಷ್ಟು ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆಯಾಗುವ ಸಾಧ್ಯತೆ ಇದೆ. ಅದಕ್ಕೆ ಅನುಗುಣವಾಗಿ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಮಾಡಬೇಕು. ಲಾಕ್‌ಡೌನ್ ಜಾರಿಯಲ್ಲಿ ಇದ್ದರೂ ಬೀಜ, ಗೊಬ್ಬರದ ಅಂಗಡಿಯನ್ನು ಮುಚ್ಚಿಸಬಾರದು. ಟ್ರ್ಯಾಕ್ಟರ್, ಕೃಷಿ ಪರಿಕರ ದುರಸ್ತಿ ಮಾಡುವ ಅಂಗಡಿ ತೆರೆಯಲು ಅವಕಾಶ ನೀಡಬೇಕು’ ಎಂದು ಮಾಧುಸ್ವಾಮಿ ನಿರ್ದೇಶನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.