ತುಮಕೂರು: ‘ನಾ ಇರಲಿಲ್ಲ, ನಾನಲ್ಲ, ನನಗೆ ಗೊತ್ತಿಲ್ಲ ಎಂದು ಕಥೆ ಹೇಳಿ ಜವಾಬ್ದಾರಿಯಿಂದ ನುಣುಚಿಕೊಳ್ಳಬೇಡಿ. ಹದಿನೈದು ದಿನದ ಮುಂಚೆಯೇ ತಿಳಿಸಿದರೂ ಯಾರೊಬ್ಬರೂ ಸಭೆಗೆ ಸಿದ್ಧತೆ ಮಾಡಿಕೊಂಡಿಲ್ಲ’ ಎಂದು ಉಪಲೋಕಾಯುಕ್ತ ಬಿ.ವೀರಪ್ಪ ಕಿಡಿಕಾರಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಶನಿವಾರ ನಡೆದ ಲೋಕಾಯುಕ್ತದಲ್ಲಿ ಬಾಕಿ ಉಳಿದ ಪ್ರಕರಣ ವಿಚಾರಣೆ ಹಾಗೂ ವಿಲೇವಾರಿ ಸಭೆಗೆ ಮಾಹಿತಿ ಇಲ್ಲದೆ ಹಾಜರಾದ ಅಧಿಕಾರಿಗಳಿಗೆ ಚಾಟಿ ಬೀಸಿದರು.
ಉಪಲೋಕಾಯುಕ್ತರ ಪ್ರಶ್ನೆಗೆ ಉತ್ತರಿಸಲು ಅಧಿಕಾರಿಗಳು ತಡಬಡಾಯಿಸಿದರು. ಮೊದಲು ಕಾನೂನು ತಿಳಿದುಕೊಂಡು ಬಂದು ಮಾತನಾಡಿ ಎಂದು ಸಿಡಿಮಿಡಿಗೊಂಡರು. ‘ಹೊಸದಾಗಿ ವರ್ಗಾವಣೆಯಾಗಿದ್ದೇನೆ, ಪ್ರಕರಣದ ಕುರಿತು ಮಾಹಿತಿ ಇಲ್ಲ’ ಎಂದು ಹೇಳಿದ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
‘ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಆರ್.ವಿನಾಯಕ ಸುಳ್ಳು ದಾಖಲೆ ಸೃಷ್ಟಿಸಿ ವಂಚಿಸಿದ್ದಾರೆ’ ಎಂದು ಸಾರ್ವಜನಿಕರೊಬ್ಬರು ದೂರು ನೀಡಿದರು. ಇದಕ್ಕೆ ಸಮರ್ಪಕ ದಾಖಲೆ ಸಲ್ಲಿಸಿ, ಸರಿಯಾಗಿ ಉತ್ತರಿಸಲು ವಿನಾಯಕ ತಡವರಿಸಿದರು.
‘ಸಾರ್ವಜನಿಕ ಸೇವೆಯಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ವಂಚಿಸುವುದು ಅಪರಾಧ. ಇಂತಹ ಕೃತ್ಯವನ್ನು ಲೋಕಾಯುಕ್ತ ಸಹಿಸುವುದಿಲ್ಲ. ಸಾರ್ವಜನಿಕರನ್ನು ವಂಚಿಸುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ಉಪ ಲೋಕಾಯುಕ್ತರು ಎಚ್ಚರಿಸಿದರು.
ಶಾಲಾ ಅನುಮತಿ ರದ್ದತಿಗೆ ಸೂಚನೆ: ‘ಜಾಗದ ಖಾತೆ ಇಲ್ಲದಿದ್ದರೂ ಶಾಲೆ ನಡೆಸಲು ಅನುಮತಿ ಪಡೆದು, ಸರ್ಕಾರದ ಅನುದಾನ ದುರುಪಯೋಗ ಪಡಿಸಿಕೊಂಡ ಮಧುಗಿರಿ ತಾಲ್ಲೂಕಿನ ಪುರವರ ಹೋಬಳಿಯ ಗೊಂದಿಹಳ್ಳಿ ಸುವರ್ಣಮುಖಿ ಸನಿವಾಸ ಶಾಲೆಯ ಅನುಮತಿ ರದ್ದುಪಡಿಸಬೇಕು. ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಿ, ಅಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರಿಗೂ ಪರ್ಯಾಯ ವ್ಯವಸ್ಥೆ ಮಾಡಬೇಕು’ ಎಂದು ಮಧುಗಿರಿ ಡಿಡಿಪಿಐಗೆ ನಿರ್ದೇಶಿಸಿದರು.
‘ಅಗತ್ಯ ದಾಖಲೆ ಪರಿಶೀಲಿಸದೆ ಶಾಲೆ ನಡೆಸಲು ಅನುಮತಿ ನೀಡಲಾಗಿದೆ. ಶಾಲೆಯ ಹೆಸರಿಗೆ ಖಾತೆ ಸೇರಿದಂತೆ ಯಾವುದೇ ದಾಖಲಾತಿ ಇಲ್ಲದಿದ್ದರೂ ಶಾಲಾ ಶಿಕ್ಷಣ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡಲಾಗಿದೆ. ಅಧಿಕಾರಿಗಳು ಕರ್ತವ್ಯ ಲೋಪವೆಸಗಿದ್ದು, ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು’ ಎಂದು ಎಚ್.ಎಸ್.ಸೂರ್ಯನಾರಾಯಣಪ್ಪ ಎಂಬುವರು ದೂರು ನೀಡಿದ್ದರು.
ಡಿ–ಗ್ರೂಪ್ ನೌಕರನಿಂದ ದರ್ಪ: ‘ಪಾವಗಡ ತಹಶೀಲ್ದಾರ್ ಕಚೇರಿಯ ಗ್ರೂಪ್–ಡಿ ನೌಕರ ಬೊಮ್ಮಲಿಂಗ ಎಂಬುವರು ತಹಶೀಲ್ದಾರ್ ಮುಂದೆಯೇ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಸಮಸ್ಯೆ ಹೇಳಿಕೊಳ್ಳಲು ಹೋದರೆ ದರ್ಪ ತೋರಿದ್ದಾರೆ. ನಮಗೆ ನ್ಯಾಯ ಕೊಡಿಸಿ’ ಎಂದು ಪಾವಗಡ ತಾಲ್ಲೂಕಿನ ಕಡಮಲಕುಂಟೆ ಗ್ರಾಮದ ಗೋವಿಂದಪ್ಪ ಅವಲತ್ತುಕೊಂಡರು.
‘ಕ್ರಮ ತೆಗೆದುಕೊಳ್ಳಲು ವಿಳಂಬ ಮಾಡಿದ್ದು ಯಾಕೆ? ಇಷ್ಟು ದಿನ ಏನು ಮಾಡಿದ್ದೀರಿ? ಜನರ ಸಮಸ್ಯೆ ಕೇಳಲು ಇರುವ ಅಧಿಕಾರಿಗಳು ನಿರ್ಲಕ್ಷ್ಯ ತೋರಿದರೆ ಹೇಗೆ? ಕೂಡಲೇ ನೋಟಿಸ್ ಕೊಟ್ಟು ನೌಕರನ ವಿರುದ್ಧ ಕ್ರಮವಹಿಸಬೇಕು’ ಎಂದು ಪಾವಗಡ ತಹಶೀಲ್ದಾರ್ ವರದರಾಜು ಅವರಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಅನುಪಮಾ ಇತರರು ಭಾಗವಹಿಸಿದ್ದರು.
ಇಬ್ಬರು ಕಳ್ಳರೇ!
ಹಳ್ಳದ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಇಬ್ಬರು ಪರಸ್ಪರ ದೂರು ನೀಡಿ ಇಬ್ಬರೂ ಸಿಕ್ಕಿ ಬಿದ್ದಿದ್ದಾರೆ. ವಿಚಾರಣೆ ವೇಳೆ ಇಬ್ಬರೂ ಒತ್ತುವರಿ ಮಾಡಿಕೊಂಡಿದ್ದು ಗೊತ್ತಾಗಿದೆ. ಕೊನೆಗೆ ಒತ್ತುವರಿ ಜಾಗ ತೆರವುಗೊಳಿಸುವಂತೆ ಉಪಲೋಕಾಯುಕ್ತ ಬಿ.ವೀರಪ್ಪ ಸೂಚಿಸಿದರು.
‘ತುರುವೇಕೆರೆ ತಾಲ್ಲೂಕಿನ ಗುಳದಹಳ್ಳಿ ಗ್ರಾಮದ ಜಿ.ಎಂ.ನಾಗರಾಜ್ ಸರ್ಕಾರಿ ಹಳ್ಳದ ಜಾಗ ಒತ್ತುವರಿ ಮಾಡಿಕೊಂಡು ಕಾರ್ ಶೆಡ್ ನಿರ್ಮಿಸಿಕೊಂಡಿದ್ದಾರೆ. ಸರ್ಕಾರಿ ಅಧಿಕಾರಿಗಳಿಗೆ ಈ ವಿಷಯ ಗೊತ್ತಿದ್ದರೂ ಯಾವುದೇ ಕ್ರಮತೆಗೆದುಕೊಂಡಿಲ್ಲ’ ಎಂದು ಅದೇ ಗ್ರಾಮದ ಶಂಕರಲಿಂಗಪ್ಪ ದೂರು ನೀಡಿದ್ದರು.
‘ಇದುವರೆಗೆ ಯಾಕೆ ಕ್ರಮ ಆಗಿಲ್ಲ. ಸರ್ಕಾರದ ಆಸ್ತಿ ರಕ್ಷಣೆ ಅಧಿಕಾರಿಗಳ ಜವಾಬ್ದಾರಿ. ನಾವು ಇಲ್ಲಿಗೆ ಬಂದು ನಿಮ್ಮನ್ನು ಕೇಳುವುದು ತಪ್ಪು. ಕಚೇರಿಯಲ್ಲೇ ಕೂತು ನಿಮ್ಮನ್ನು ಅಲ್ಲಿಗೆ ಕರೆಸಿಕೊಂಡು ಉಜ್ಜಬೇಕು ಅಷ್ಟೇ. ನಾಗರಾಜು ಮೇಲೆ ಯಾವ ಪ್ರಕರಣ ದಾಖಲಿಸಿದ್ದೀರಿ’ ಎಂದು ವೀರಪ್ಪ ಪ್ರಶ್ನಿಸಿದರು.
‘ಶಂಕರಲಿಂಗಪ್ಪ ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ನಾಗರಾಜ್ ಪ್ರತಿ ದೂರು ನೀಡಿದ್ದಾರೆ. ಎರಡೂ ಕಡೆಯ ದೂರು ಸ್ವೀಕರಿಸಲಾಗಿದೆ’ ಎಂದು ತಹಶೀಲ್ದಾರ್ ಉತ್ತರಿಸಿದರು.
‘ಹಾಗಾದರೆ ಇಬ್ಬರು ಕಳ್ಳರೇ! ಇವರನ್ನು ಹೀಗೆ ಬಿಟ್ಟರೆ ಅವರವರೇ ರಾಜಿ ಮಾಡಿಕೊಳ್ಳುತ್ತಾರೆ. ಕೂಡಲೇ ಒತ್ತುವರಿ ತೆರವಿಗೆ ಕ್ರಮಕೈಗೊಳ್ಳಿ’ ಎಂದು ನಿರ್ದೇಶಿಸಿದರು.
ದೂರುದಾರರೇ ಗೈರು
ಲೋಕಾಯುಕ್ತಕ್ಕೆ ದೂರು ನೀಡಿದ್ದ ತುಂಬಾ ಜನ ಸಭೆಗೆ ಗೈರಾಗಿದ್ದರು. ವಿಚಾರಣೆ ಸಮಯದಲ್ಲಿ ಹಾಜರಾಗಲಿಲ್ಲ. ‘ಅಧಿಕಾರಿಗಳಿಗೆ ಸರಿಯಾದ ಮಾಹಿತಿ ಇಲ್ಲ. ಇನ್ನು ದೂರುದಾರರು ಎಲ್ಲಿಂದ ಬರಬೇಕು. ಲೋಕಾಯುಕ್ತ ಅಧಿಕಾರಿಗಳು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ತಿಳಿಸಿ ಸುಮ್ಮನಾಗಿದ್ದಾರೆ. ತಾಲ್ಲೂಕು ಮಟ್ಟದವರು ಸರಿಯಾಗಿ ಕೆಲಸ ಮಾಡಿಲ್ಲ. ಎಲ್ಲರಿಗೂ ಮಾಹಿತಿ ತಲುಪಿಸಿಲ್ಲ. ಕೆಲವರು ಉದ್ದೇಶ ಪೂರ್ವಕವಾಗಿ ಸಭೆಗೆ ಬಾರದಂತೆ ನೋಡಿಕೊಳ್ಳಲಾಗಿದೆ’ ಎಂದು ಸಭೆಯಲ್ಲಿದ್ದ ಸಾರ್ವಜನಿಕರೊಬ್ಬರು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.