ತುಮಕೂರು: ಜಿಲ್ಲೆ ವ್ಯಾಪ್ತಿಯಲ್ಲಿ ಜಾತ್ರೆ, ಊರ ಹಬ್ಬಗಳಲ್ಲಿ ಪ್ರಸಾದ ಮತ್ತು ಆಹಾರ ವಿತರಿಸಲು ಇನ್ನು ಮುಂದೆ ಕಡ್ಡಾಯವಾಗಿ ಜಿಲ್ಲಾ ಆಡಳಿತದಿಂದ ಅನುಮತಿ ಪಡೆಯಬೇಕು.
ಆಹಾರ, ಪ್ರಸಾದ, ಮಜ್ಜಿಗೆ ವಿತರಣೆಯಿಂದ ಸಾರ್ವಜನಿಕರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸ್ವಚ್ಛತೆ ಮತ್ತು ಆಹಾರ, ಪ್ರಸಾದ ವಿತರಣೆ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಆಯಾ ತಾಲ್ಲೂಕಿನ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ಸಮಿತಿ ರಚಿಸಲಾಗಿದೆ.
ಜಾತ್ರೆ, ಊರ ಹಬ್ಬಗಳ ಆಯೋಜಕರು ಸಾರ್ವಜನಿಕರಿಗೆ ಆಹಾರ ಮತ್ತು ಪ್ರಸಾದ ವಿತರಣೆ ಮಾಡುವ ಮುನ್ನ ಸಮಿತಿಯ ಅನುಮತಿ ಪಡೆಯಬೇಕು. ಆಯಾ ತಾಲ್ಲೂಕು ಪಂಚಾಯಿತಿಗೆ ಎರಡು ವಾರ ಮುಂಚಿತವಾಗಿ ಮುಚ್ಚಳಿಕೆ ಪತ್ರ ಸಲ್ಲಿಸಬೇಕು. ತಾ.ಪಂ ಇಒ ಕುಡಿಯುವ ನೀರಿನ ಗುಣಮಟ್ಟ, ಶುಚಿತ್ವ, ವೈದ್ಯಕೀಯ ಸಿದ್ಧತೆ ಹಾಗೂ ಕಾನೂನು ಸುವ್ಯವಸ್ಥೆ ಬಗ್ಗೆ ಮೂರು ದಿನದ ಒಳಗೆ ನಿರಪೇಕ್ಷಣಾ ವರದಿ ಪಡೆದು ಸಮಿತಿಗೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.
‘ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವಲ್ಲಿ ನಿರ್ಲಕ್ಷ ತೋರಿದ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.