ADVERTISEMENT

ಅಂಗವಿಕಲರು ಉನ್ನತ ಶಿಕ್ಷಣ ಪಡೆಯಲಿ

ತುಮಕೂರು ಜಿಲ್ಲಾ ಕಿವುಡರ ಸಂಘದ ರಜತ ಮಹೋತ್ಸವ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಆಶಯ

​ಪ್ರಜಾವಾಣಿ ವಾರ್ತೆ
Published 16 ಜೂನ್ 2019, 16:10 IST
Last Updated 16 ಜೂನ್ 2019, 16:10 IST
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪೋಷಕರು
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪೋಷಕರು   

ತುಮಕೂರು: ಅಂಗವಿಕಲರು ಆತ್ಮವಿಶ್ವಾಸದಿಂದ ಜೀವನ ನಡೆಸಬೇಕು. ಸಾಧನೆ ಮಾಡಿ ಸಮಾಜದಲ್ಲಿ ಬೆರಗು ಮೂಡಿಸಿದವರು ಹಲವರು ಇದ್ದಾರೆ. ಅದೇ ರೀತಿ ಸಾಧಕರಾಗಬೇಕು’ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.

ಭಾನುವಾರ ನಗರದ ಸಿದ್ಧಿ ವಿನಾಯಕ ಸಮುದಾಯ ಭವನದಲ್ಲಿ ನಡೆದ ತುಮಕೂರು ಜಿಲ್ಲಾ ಕಿವುಡರ ಸಂಘದ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಸಾಮಾನ್ಯರಂತೆಯೇ ಅಂಗವಿಕಲರು ಬದುಕಲು ಸಾಧ್ಯವಿದೆ. ಎಲ್ಲ ಅವಕಾಶಗಳೂ ಇವೆ. ಅವರ ಆತ್ಮವಿಶ್ವಾಸಕ್ಕೆ ಧಕ್ಕೆಯಾಗದ ರೀತಿ ಸಮಾಜವೂ ನಡೆದುಕೊಳ್ಳಬೇಕು. ಈಗಾಗಲೇ ಅನೇಕ ಸಂಘ ಸಂಸ್ಥೆಗಳು ಈ ದಿಸೆಯಲ್ಲಿ ಉತ್ತಮ ರೀತಿ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾದುದು’ ಎಂದರು.

ADVERTISEMENT

ಪೋಷಕರು ಅಂಗವಿಕಲ ಮಕ್ಕಳನ್ನು ಶಾಲೆಗೆ ತಪ್ಪದೇ ಸೇರಿಸಬೇಕು. ಅವರಿಗೆ ಉನ್ನತ ಶಿಕ್ಷಣ ಕಲ್ಪಿಸಲೇಬೇಕು. ಉನ್ನತ ಶಿಕ್ಷಣ ಲಭಿಸಿದರೆ ಅವರೂ ಎಲ್ಲರಂತೆಯೇ ಸಾಧನೆ ಮಾಡುತ್ತಾರೆ. ಅವರಿಗೆ ಸೌಕರ್ಯ, ಅವಕಾಶಗಳನ್ನು ಕಲ್ಪಿಸಿಕೊಡಬೇಕು ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಎಸ್. ನಟರಾಜ್ ಮಾತನಾಡಿ, ‘ಅಂಗವಿಕಲರು 10ನೇ ತರಗತಿ ಬಳಿಕ ಉನ್ನತ ವ್ಯಾಸಂಗ ಪಡೆಯಲು ಸಮಸ್ಯೆ ಎದುರಿಸುತ್ತಿದ್ದಾರೆ. ಪಿಯುಸಿ, ಪದವಿ ಶಿಕ್ಷಣವನ್ನು ಪೋಷಕರು ಕೊಡಿಸಬೇಕು. ಅಂಗವಿಕಲರಿಗಾಗಿಯೇ ಶಿಕ್ಷಣ ನೀಡಲು ಉತ್ಸಾಹ ತೋರುವವರಿಗೆ ಸರ್ಕಾರದಿಂದ ಎಲ್ಲ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಕರ್ನಾಟಕ ರಾಜ್ಯ ಕಿವುಡರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಕೆ.ಎಚ್.ಶಂಕರ್ ಮಾತನಾಡಿ, ‘ಕಿವುಡ ಮತ್ತು ಮೂಗ ಮಕ್ಕಳ ಏಳಿಗೆಗೆ ಸಂಘವು ಸತತ ಶ್ರಮಿಸುತ್ತಿದೆ. ಮುಂದಿನ ಪೀಳಿಗೆಗೆ ಒಳಿತಾಗಬೇಕು ಎಂಬ ದಿಸೆಯಲ್ಲಿ ಸಂಘಟನೆಯು ರಚನಾತ್ಮಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ’ ಎಂದು ವಿವರಿಸಿದರು.

ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಎಂ.ರಮೇಶ್, ನಂಜುಂಡೇಶ್ವರ ಗ್ರೂಪ್ ಆಫ್ ಹೋಟೆಲ್ ಮಾಲೀಕ ಸಿ.ವಿ.ಮಹದೇವಯ್ಯ, ಕರ್ನಾಟಕ ರಾಜ್ಯ ಮಹಿಳಾ ಕಿವುಡರ ಫೌಂಡೇಷನ್‌ ಮುಖ್ಯ ಕಾರ್ಯದರ್ಶಿ ಬಿ.ಎನ್.ಚೈತ್ರಾ, ಕೋಲ್ಕತ್ತಾದ ಕೆ.ಡಿ.ಐ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್.ಖುರ್ಷಿದ್ ಖಾನ್, ಭಾರತೀಯ ರೆಡ್‌ ಕ್ರಾಸ್ ಸಂಸ್ಥೆ ಅಧ್ಯಕ್ಷ ಎಸ್.ನಾಗಣ್ಣ, ತುಮಕೂರು ಜಿಲ್ಲಾ ಕಿವುಡರ ಸಂಘದ ಗೌರವ ಅಧ್ಯಕ್ಷ ಜಿ.ಎಸ್.ಸೋಮಣ್ಣ, ಉಪಾಧ್ಯಕ್ಷ ಎಸ್. ಪ್ರಸನ್ನಮೂರ್ತಿ, ಸಂಚಾಲಕ ಎಚ್.ಎಂ.ರವೀಶ್, ಜಿ.ಟಿ.ಸುಧೀರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.