ADVERTISEMENT

ತುಮಕೂರು | ತೇಜಸ್ವಿ ಗ್ರಹಿಸಿದ ಸಾಹಿತ್ಯಾಸಕ್ತರು

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2024, 5:23 IST
Last Updated 25 ಸೆಪ್ಟೆಂಬರ್ 2024, 5:23 IST
ತುಮಕೂರಿನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಾಹಿತಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ನೆನಪಿನ ಕಾರ್ಯಕ್ರಮದಲ್ಲಿ ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಮಲ್ಲಿಕಾ ಬಸವರಾಜು, ಉಪನ್ಯಾಸಕರಾದ ರೇಖಾ ಹಿಮಾನಂದ್, ಆಶಾರಾಣಿ ಭಾಗವಹಿಸಿದ್ದರು
ತುಮಕೂರಿನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಾಹಿತಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ನೆನಪಿನ ಕಾರ್ಯಕ್ರಮದಲ್ಲಿ ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಮಲ್ಲಿಕಾ ಬಸವರಾಜು, ಉಪನ್ಯಾಸಕರಾದ ರೇಖಾ ಹಿಮಾನಂದ್, ಆಶಾರಾಣಿ ಭಾಗವಹಿಸಿದ್ದರು   

ತುಮಕೂರು: ಲೇಖಕಿಯರ ಸಂಘದ ಜಿಲ್ಲಾ ಘಟಕ, ‘ವಿಚಾರ ಮಂಟಪ’ದ ಸಹಯೋಗದಲ್ಲಿ ಸಾಹಿತಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ನೆನಪಿನ ‘ನನ್ನ ಗ್ರಹಿಕೆಯ ತೇಜಸ್ವಿ’ ಎಂಬ ವಿನೂತನ ಕಾರ್ಯಕ್ರಮವನ್ನು ಈಚೆಗೆ ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು, ಪಿಎಚ್.ಡಿ ಸಂಶೋಧನಾರ್ಥಿಗಳು, ಉಪನ್ಯಾಸಕರು, ಲೇಖಕಿಯರು ತಮ್ಮ ಗ್ರಹಿಕೆಗೆ ನಿಲುಕಿದಷ್ಟು ತೇಜಸ್ವಿ ಕುರಿತು ಮಾತನಾಡಿದರು.

ಉಪನ್ಯಾಸಕಿ ರೇಖಾ ಹಿಮಾನಂದ್, ‘ತೇಜಸ್ವಿ ಇದ್ದಿದ್ದರೆ ಈಗ 80 ವರ್ಷದ ಹಿರಿಯರಾಗಿರುತ್ತಿದ್ದರು. ಬರಹದಲ್ಲಿ ಸ್ಥಳೀಯತೆಗೆ ಒತ್ತು ಕೊಟ್ಟರು. ಅವರೊಳಗೊಬ್ಬ ಸಾಹಸಿ ಇದ್ದರು. ಎಲ್ಲವನ್ನೂ ಸದಾ ಕುತೂಹಲದಿಂದ ಗಮನಿಸುತ್ತಿದ್ದರು. ಪ್ರಕೃತಿ, ಮನುಷ್ಯನ ನಡುವೆ ಇರುವ ಅಂತರವನ್ನೇ ತೆಗೆದು ಹಾಕಿದರು’ ಎಂದು ಬಣ್ಣಿಸಿದರು.

ADVERTISEMENT

ಕುವೆಂಪು ಅವರ ಮೂಲಕ ಗುರುತಿಸಿಕೊಳ್ಳದೆ ತಮ್ಮದೇ ಸ್ವತಂತ್ರ ಅಭಿವ್ಯಕ್ತಿ ಕಂಡುಕೊಂಡರು. ತೇಜಸ್ಚಿ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ಬಹುದೊಡ್ಡ ಕೊಡುಗೆ ನೀಡಿದವರು. ಅವರ ಮಿಲೇನಿಯಂ ಸರಣಿಯ ಪುಸ್ತಕಗಳು ಅದ್ಭುತವಾಗಿವೆ ಎಂದು ನೆನಪಿಸಿಕೊಂಡರು.

ಸಂಘದ ಅಧ್ಯಕ್ಷೆ ಮಲ್ಲಿಕಾ ಬಸವರಾಜು, ‘ತೇಜಸ್ವಿ ಬರಹ ಓದಿದರೆ ನಮ್ಮ ಅಹಂಕಾರ ಕರಗಿ, ಅಗಾಧವಾದ ಪ್ರಕೃತಿಯಲ್ಲಿ ನಾವು ಒಂದು ಅಣು ಮಾತ್ರ ಅನಿಸುತ್ತದೆ. ಕುವೆಂಪು ಅವರ ವೈಚಾರಿಕ ಚಿಂತನೆಗಳಿಗೆ ಜೀವ ಬಂದಂತೆ ತೇಜಸ್ವಿ ಬದುಕಿದರು’ ಎಂದು ಅಭಿಪ್ರಾಯಪಟ್ಟರು.

ಇಂದಿನ ಬಹುಪಾಲು ಯುವಜನತೆಗೆ ತೇಜಸ್ವಿ ಅವರ ನಿರ್ಭಯ ನಡೆ, ವೈಚಾರಿಕ ಚಿಂತನೆ, ಜಾತ್ಯತೀತ ನಡೆ ಬಗ್ಗೆ ಮನದಟ್ಟಾಗಿಲ್ಲ. ಅವರ ವೈಚಾರಿಕತೆಯನ್ನು ನಾವು ರೂಢಿಸಿಕೊಳ್ಳಬೇಕಿದೆ ಎಂದರು.

ಉಪನ್ಯಾಸಕರು ಹಾಗೂ ಸಂಶೋಧನಾರ್ಥಿಗಳಾದ ಆಶಾರಾಣಿ, ಧನುಷ್, ನವೀನ್, ಹರ್ಷವರ್ಧನ್, ತರಂಗಿಣಿ, ಮಾರುತಿ, ಪಾರ್ವತಿ, ನಂದನ್, ಪುನೀತ್ ಮೊದಲಾದವರು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.